More

    ವಿದೇಶದಿಂದ ಪಾರ್ಸೆಲ್​ ಬರೋದಿದ್ಯಾ? ಹಾಗಿದ್ರೆ ನಿಮ್ಮ ಕೊರಿಯರ್​ ಮೇಲಿರಲಿದೆ ಸಿಸಿಬಿ ಕಣ್ಣು!

    ಬೆಂಗಳೂರು: ವಿದೇಶದಿಂದ ಏನಾದರೂ ಪಾರ್ಸೆಲ್ ತರಿಸಿಕೊಳ್ಳಲಿದ್ದೀರಾ? ಹಾಗಿದ್ದರೆ ಪೊಲೀಸರು ನಿಮ್ಮ ಪಾರ್ಸೆಲ್ ಮೇಲೆ ಒಂದು ಕಣ್ಣಿಡಲಿದ್ದಾರೆ. ಮಾತ್ರವಲ್ಲ, ಪೊಲೀಸ್ ಕಣ್ಗಾವಲು ಮೂಲಕವೇ ಪ್ರತಿ ಕೊರಿಯರ್ ಕೂಡ ವಿಲೇವಾರಿ ಆಗಲಿದೆ. ಡ್ರಗ್ಸ್ ಮಾಫಿಯಾಗೆ ತಡೆ ಹಾಕುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದಾರೆ. ಡ್ರಗ್ಸ್ ದಂಧೆಯನ್ನು ಬುಡಸಮೇತ ಮಟ್ಟಹಾಕಲು ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಸಿಸಿಬಿ ಪೊಲೀಸರು, ವಿದೇಶದಿಂದ ಬರುವ ಕೊರಿಯರ್​ಗಳ ಮೇಲೆ ಕಣ್ಣಿಟ್ಟಿದ್ದಾರೆ.

    ವಿದೇಶದಿಂದ ಡ್ರಗ್ಸ್ ತರಿಸಿಕೊಂಡಿದ್ದ ಅಗರ ನಿವಾಸಿ ಸಾರ್ಥಕ್ ಆರ್ಯನ್​ (31) ಮತ್ತು ಜೆ.ಸಿ.ನಗರದ ನಿವಾಸಿ ಕಾರ್ತಿಕ್ ಗೌಡ (25) ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 22 ಗ್ರಾಂ ಎಂಡಿಎಂಎ ಮಾತ್ರೆ, 5 ಗ್ರಾಂ ಎಲ್‌ಎಸ್‌ಡಿ, ಅರ್ಧ ಲೀ. ಕೆಮಿಕಲ್ ಆಯಿಲ್ ಹಾಗೂ ಮೊಬೈಲ್ ಫೋನ್​ ಜಪ್ತಿ ಮಾಡಲಾಗಿದೆ. ಪರಿಚಯಸ್ಥರಿಗೆ ಮಾರಾಟ ಮಾಡಲು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

    ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಸಾರ್ಥಕ್ ಆರ್ಯನ್​, ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಹೆಸರಿಗೆ ಬೆಲ್ಜಿಯಂನಿಂದ ಕೊರಿಯರ್​ ಬಂದಿದ್ದು, ಅದರಲ್ಲಿ ಡ್ರಗ್ಸ್ ಇರುವ ಬಗ್ಗೆ ಅಂಚೆ ಇಲಾಖೆಯಿಂದ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ತನಿಖೆ ಕೈಗೊಳ್ಳಲಾಗಿತ್ತು. ಎಚ್‌ಎಸ್‌ಆರ್ ಲೇಔಟ್‌ನ ಅಗರದಲ್ಲಿದ್ದ ಆರೋಪಿಯ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿತ್ತು. ಈ ವೇಳೆ ಎಲ್‌ಎಸ್‌ಡಿ ಡ್ರಗ್ಸ್, ಬ್ರೌನ್ ಸ್ಮೋಕ್ ಪೇಪರ್ ಪಾಕೆಟ್, ಒಸಿಬಿ ಸ್ಲಿಮ್ ಸ್ಮೋಕ್, ರಾ ಟಿಪ್ಸ್ ಸ್ಮೋಕ್ ಸೇರಿ ಇನ್ನಿತರ ಮಾದಕ ವಸ್ತುಗಳು ಪತ್ತೆಯಾಗಿವೆ. ಪರಿಚಯಸ್ಥರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.

    ಮತ್ತೊಂದು ಪ್ರಕರಣದ ಆರೋಪಿ ಕಾರ್ತಿಕ್ ಗೌಡ, ಜೆ.ಸಿ.ನಗರದ ತನ್ನ ಮನೆಯಲ್ಲಿ ಡ್ರಗ್ಸ್ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿತನನ್ನು ಬಂಧಿಸಲಾಗಿದೆ. 22 ಗ್ರಾಮ ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ. ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts