ಜನಸಂಪರ್ಕ ಸಾಧಿಸುವಲ್ಲಿ ಅಂಚೆ ಇಲಾಖೆ ಯಶಸ್ಸಿ

2 Min Read
ಜನಸಂಪರ್ಕ ಸಾಧಿಸುವಲ್ಲಿ ಅಂಚೆ ಇಲಾಖೆ ಯಶಸ್ಸಿ
ಬಾಳೆಹೊನ್ನೂರಿನಲ್ಲಿ ಅಂಚೆ ಇಲಾಖೆಯ ಚಿಕ್ಕಮಗಳೂರು ಉಪ ವಿಭಾಗದಿಂದ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನವನ್ನು ಎನ್.ಆರ್.ಪುರ ತಹಸೀಲ್ದಾರ್ ತನುಜಾ ಟ.ಸವದತ್ತಿ ಉದ್ಘಾಟಿಸಿದರು. ಎಲ್.ಕೆ.ದಾಷ್, ರಮೇಶ್, ಸದಾಶಿವ ಆಚಾರ್ಯ, ನಾಗೇಂದ್ರ, ಸುರೇಂದ್ರ, ಪ್ರವೀಣ್ ಇದ್ದರು.

ಬಾಳೆಹೊನ್ನೂರು: ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಕಾರ್ಯ ಚಟುವಟಿಕೆ ವಿಸ್ತರಿಸಿರುವ ಅಂಚೆ ಇಲಾಖೆ ಸಾಮಾಜಿಕ ಜಾಲತಾಣದಂತೆ ಜನರ ನಡುವೆ ಸಂಪರ್ಕ ಸಾಧಿಸುತ್ತಿದೆ ಎಂದು ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ಪೋಸ್ಟ್ ಮಾಸ್ಟರ್ ಜನರಲ್ ಎಲ್.ಕೆ.ದಾಸ್ ಹೇಳಿದರು.
ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಭಾರತೀಯ ಅಂಚೆ ಇಲಾಖೆ, ಚಿಕ್ಕಮಗಳೂರು ಅಂಚೆ ವಿಭಾಗ ಮಂಗಳವಾರ ಆಯೋಜಿಸಿದ್ದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಮಾತನಾಡಿದ ಅವರು, ಭಾರತ ಹಳ್ಳಿಗಳ ದೇಶವಾಗಿದ್ದು, 30 ಸಾವಿರ ಗ್ರಾಮಗಳಲ್ಲಿ ಅಂಚೆ ಇಲಾಖೆ ತನ್ನ ಕಚೇರಿ ಹೊಂದಿದೆ. ಅಂಚೆ ಇಲಾಖೆಯಲ್ಲಿ ವಿವಿಧ ಯೋಜನೆಯಡಿ ಹಣ ಉಳಿತಾಯ ಮಾಡಬಹುದಾಗಿದೆ. ನಿಮ್ಮ ಸುಭದ್ರ ಜೀವನಕ್ಕೆ ಇಲ್ಲಿ ಉಳಿತಾಯ ಮಾಡಿದ ಹಣ ಸಹಕಾರಿಯಾಗಲಿದೆ. ಅಂಚೆ ಇಲಾಖೆ ಪ್ರಾಮಾಣಿಕತೆಗೆ ಹೆಸರಾಗಿದ್ದು, ಅಂಚೆಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸಂಪೂರ್ಣ ಗ್ಯಾರಂಟಿ ದೊರೆಯಲಿದೆ ಎಂದರು.
ದೇಶದಲ್ಲಿ ವಿವಿಧ ಖಾತೆಗಳಿಗೆ ಹೆಚ್ಚು ಬಡ್ಡಿ ನೀಡುತ್ತಿರುವುದು ಕೇವಲ ಅಂಚೆ ಇಲಾಖೆ ಮಾತ್ರ. ಬೇರೆಲ್ಲೂ ಇಷ್ಟು ಬಡ್ಡಿ ದೊರೆಯುವುದಿಲ್ಲ. ಪ್ರಧಾನಮಂತ್ರಿಗಳ ಆಶಯದಂತೆ ಅಂಚೆ ಇಲಾಖೆ ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗುವ ಜತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಿದೆ ಎಂದು ತಿಳಿಸಿದರು.
ಅಂಚೆ ಇಲಾಖೆಯಲ್ಲಿ ನೂರಾರು ಯೋಜನೆಗಳಿದ್ದು, ಕಡಿಮೆ ಮೊತ್ತದ ಜೀವವಿಮೆ ಪ್ರೀಮಿಯಮ್‌ಗೆ ಹೆಚ್ಚು ಬೋನಸ್ ನೀಡುತ್ತಿದೆ. ದೇಶದ ಯಾವುದೇ ಗ್ರಾಮೀಣ ಭಾಗಗಳಿಂದ ವಿದೇಶದ ಮೂಲೆ ಮೂಲೆಗೂ ಪತ್ರ, ಪಾರ್ಸೆಲ್‌ಗಳನ್ನು ತಲುಪಿಸಬಹುದಾಗಿದೆ ಎಂದರು.
ಎನ್.ಆರ್.ಪುರ ತಹಸೀಲ್ದಾರ್ ತನುಜಾ ಟಿ.ಸವದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ, ಮಹಾರಾಜರ ಕಾಲದಲ್ಲಿ ಪಾರಿವಾಳಗಳ ಮೂಲಕ ಪತ್ರ ವ್ಯವಹಾರ ಮಾಡಲಾಗುತಿತ್ತು. ನಂತರದ ದಿನಗಳಲ್ಲಿ ಬ್ರಿಟೀಷರ ಆಡಳಿತದಲ್ಲಿ ಅಂಚೆ ಇಲಾಖೆ ಆರಂಭಿಸಲಾಯಿತು. ಹಿಂದೆ ಪತ್ರ ವ್ಯವಹಾರಗಳು ಇದ್ದಾಗ ಕುಟುಂಬಗಳು, ಸಂಬಂಧಗಳ ನಡುವೆ ಬಾಂಧವ್ಯವಿತ್ತು. ಆದರೆ ಇಂದು ಆಧುನಿಕ ಯುಗದಲ್ಲಿ ಮೊಬೈಲ್ ಬಂದು ಬಾಂಧವ್ಯ ಕಡಿಮೆಯಾಗಿದೆ. ಈ ಹಿಂದೆ ಟೆಲಿಗ್ರಾಮ್‌ಗಳ ಮೂಲಕ ತುರ್ತು ಸಂದೇಶಗಳನ್ನು ಕಳುಹಿಸುತ್ತಿದ್ದರು. ಅಂತಹ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಸಾರ್ವಜನಿಕರು ಮುಂದುವರಿದ ದಿನಗಳಲ್ಲಿ ಅಂಚೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗಮಾಡಿಕೊಳ್ಳಬೇಕು ಎಂದರು.
ಚಿಕ್ಕಮಗಳೂರು ವಿಭಾಗದ ಅಂಚೆ ಅಧೀಕ್ಷಕ ಎನ್.ರಮೇಶ್ ಮಾತನಾಡಿ, 165 ವರ್ಷಗಳ ಇತಿಹಾಸವಿರುವ ಅಂಚೆ ಇಲಾಖೆ ಕಾಲಕ್ಕೆ ಅನುಗುಣವಾಗಿ ಬದಲಾವಣೆಗೊಂಡಿದ್ದು, ಹೊಸ ತಂತ್ರಜ್ಞಾನದೊಂದಿಗೆ ವಿನೂತನ ಯೋಜನೆಗಳನ್ನು ಸಾರ್ವಜನಿಕರಿಗೆ ನೀಡುತ್ತಿದೆ. ಅಂಚೆ ಇಲಾಖೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೆ ವಿವಿಧ ಜನಪಯೋಗಿ ಸೇವೆಗಳನ್ನು ಒದಗಿಸುತ್ತಿದೆ. ವಿದೇಶಗಳಿಗೆ ಪತ್ರ, ಪಾರ್ಸೆಲ್ ಕಳುಹಿಸಲು ಡಾಕ್ ನಿರ್ಯಾಕರ್ ಎಂಬ ಹೊಸ ಸೇವೆ ಆರಂಭಿಸಿದೆ ಎಂದರು.

See also  ಪ್ರೊ.ಕೆ.ಎಸ್.ಭಗವಾನ್ ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟ: ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ ಎಚ್ಚರಿಕೆ
Share This Article