More

    ಸ್ವಂತ ಮಕ್ಕಳೇ ಸೇಲ್​ಗೆ; ಶಿಶು ಮಾರಾಟವೇ ವೃತ್ತಿ: ಬಾಡಿಗೆ ತಾಯ್ತನಕ್ಕೂ ಸೈ

    ಬೆಂಗಳೂರು: ರಾಜ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ವ್ಯಾಪಿಸಿರುವ ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದೆ. ಮಹಿಳೆಯರೇ ತಂಡ ರಚಿಸಿಕೊಂಡು ಮಕ್ಕಳಾಗದ ದಂಪತಿಗಳನ್ನು ಗುರುತಿಸಿ ಅವರಿಗೆ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯ ಲಾಗಿದೆ. ಏಳು ಮಹಿಳೆಯರು ಸೇರಿ 8 ಆರೋಪಿಗಳನ್ನು ಬಂಧಿಸಲಾಗಿದೆ. 10 ಮಕ್ಕಳನ್ನು ಮಾರಾಟ ಮಾಡಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಪ್ರತಿಷ್ಠಿತ ಆಸ್ಪತ್ರೆಗಳು ಮತ್ತು ವೈದ್ಯರು ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ತಮಿಳುನಾಡಿನ ಈರೋಡ್ ಮೂಲದ ಕಣ್ಣನ್ ರಾಮಸ್ವಾಮಿ (51), ಹೇಮಲತಾ (27), ಶರಣ್ಯ (33), ಮುರುಗೇಶ್ವರಿ (22), ಸುಹಾಸಿನಿ (28), ಗೋಮತಿ (32), ರಾಧಾ (35) ಮತ್ತು ಬೆಂಗಳೂರಿನ ಮಹಾಲಕ್ಷ್ಮಿಪುರದ ಮಹಾಲಕ್ಷ್ಮಿ (34) ಬಂಧಿತರು. ಹಚ್ಚಿನ ವಿಚಾರಣೆಗಾಗಿ ಮೂವರನ್ನು ಕಸ್ಟಡಿಗೆ ಪಡೆಯಲಾಗಿದೆ. 20 ದಿನಗಳ ಗಂಡು ಶಿಶುವನ್ನು ರಕ್ಷಣೆ ಮಾಡಿ ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಲಾಗಿದೆ.

    ಕರ್ನಾಟಕದಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿರುವ ವೈದ್ಯರು ಮತ್ತು ಆಸ್ಪತ್ರೆಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಬಂಧಿತ ಏಳು ಮಹಿಳೆಯರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಈ ಹಿಂದೆ ತಮಿಳುನಾಡಿನಲ್ಲಿ ಬಾಡಿಗೆ ತಾಯ್ತನ ಅಥವಾ ತಮ್ಮದೇ ಮಕ್ಕಳ ಮಾರಾಟದಲ್ಲಿ ತೊಡಗಿದ್ದರು. ಬಾಡಿಗೆ ತಾಯ್ತನ ಕಾಯ್ದೆ ತಿದ್ದುಪಡಿಯಾದ ಮೇಲೆ ಇವರು ಕದ್ದುಮುಚ್ಚಿ ದಂಧೆ ನಡೆಸುತ್ತಿದ್ದರು. ಅಕ್ರಮದಲ್ಲಿ ತೊಡಗಿದ್ದ ತಮಿಳುನಾಡಿನ 4 ಆಸ್ಪತ್ರೆಗಳ ಪೈಕಿ ಮೂರನ್ನು ಅಲ್ಲಿನ ಪೊಲೀಸರು ಮುಚ್ಚಿಸಿದ್ದರು. ಇದಾದ ನಂತರ ಮಹಿಳೆಯರು ತಮ್ಮ ಜಾಲವನ್ನು ತಮಿಳುನಾಡಿನಿಂದ ಕರ್ನಾಟಕಕ್ಕೂ ವಿಸ್ತರಿಸಿಕೊಂಡರು. ಆಸ್ಪತ್ರೆಗಳು ಮತ್ತು ಐವಿಎಫ್ ಕೇಂದ್ರಗಳೊಂದಿಗೆ ಸಂಪರ್ಕದಲ್ಲಿದ್ದರು. ಗರ್ಭ ಫಲವತ್ತತೆ ಚಿಕಿತ್ಸೆಗೆ ಹೋಗುತ್ತಿದ್ದ ದಂಪತಿಗಳ ಮಾಹಿತಿ ಪಡೆದು ಶಿಶು ಮಾರಾಟದ ಡೀಲ್ ಕುದುರಿಸುತ್ತಿದ್ದರು. ಆನಂತರ ತಮ್ಮಲ್ಲಿಯೇ ಮಾಹಿತಿ ಪ್ರಚಾರ ಮಾಡಿಕೊಳ್ಳುತ್ತಿದ್ದರು. ನವಜಾತ ಶಿಶು ತಾಯಿಯನ್ನು ಸಂರ್ಪಸಿ ಅವರಿಗೆ ಹಣದ ಆಮಿಷವೊಡ್ಡಿ 2 ಲಕ್ಷ ರೂ. ಕೊಟ್ಟು ಖರೀದಿಸುತ್ತಿದ್ದರು. ಬಳಿಕ ಮಕ್ಕಳಾಗದ ದಂಪತಿಗೆ ಶಿಶುವನ್ನು 4 ರಿಂದ 8 ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಎಲ್ಲರೂ ಹಂಚಿಕೊಳ್ಳುತ್ತಿದ್ದರು.

    10 ಮಕ್ಕಳು ಸೇಲ್!: ಕೆಲದಿನಗಳ ಹಿಂದೆ ಶಿಶು ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರ್.ಆರ್. ನಗರದ ರಾಜರಾಜೇಶ್ವರಿ ದೇವಸ್ಥಾನದ ಸಮೀಪ ಕಾರಿನಲ್ಲಿ ಶಿಶು ಮಾರಾಟಕ್ಕೆ ಬಂದಿದ್ದಾಗ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರ ವಿರುದ್ಧ ತಮಿಳುನಾಡಿನ ಈರೋಡ್ ಪ್ರದೇಶದಲ್ಲೂ ಕೇಸ್​ಗಳು ದಾಖಲಾಗಿರುವ ಸಾಧ್ಯತೆ ಇದೆ. ಇಲ್ಲಿಯವರೆಗೂ 10 ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಖರೀದಿದಾರರ ಹೆಸರು, ವಿಳಾಸ ಲಭ್ಯವಾಗಿಲ್ಲ. ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ದಯಾನಂದ್ ಮಾಹಿತಿ ನೀಡಿದ್ದಾರೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಳ್ಳಸಾಗಾಣಿಕೆ ಆರೋಪದಲ್ಲಿ ಎಫ್​ಐಆರ್ ದಾಖಲಾಗಿದೆ.

    ಬಣ್ಣ, ಲಿಂಗ ಆಧರಿಸಿ ಬೆಲೆ: ಶಿಶುಗಳ ಲಿಂಗ ಹಾಗೂ ಬಣ್ಣ ನೋಡಿ 1 ರಿಂದ 2 ಲಕ್ಷ ರೂ. ಕೊಡುತ್ತಿದ್ದ ಆರೋಪಿಗಳು, ಆನಂತರ ಆ ಶಿಶುವಿಗೆ ಬೆಲೆ ನಿಗದಿ ಮಾಡುತ್ತಿದ್ದರು. ಗಂಡು ಶಿಶುವಿಗೆ 8 ರಿಂದ 10 ಲಕ್ಷ ರೂ., ಹೆಣ್ಣು ಶಿಶುವಿಗೆ 5ರಿಂದ 6 ಲಕ್ಷ ರೂ. ಹಾಗೂ ಮಗು ಕಪು್ಪ ಇದ್ದರೆ 1 ಲಕ್ಷ ರೂ. ಕಡಿಮೆ, ಬೆಳ್ಳಗಿದ್ದರೆ 1 ಲಕ್ಷ ರೂ. ಹೆಚ್ಚು ನಿಗದಿ ಮಾಡಿ ಮಾರಾಟ ಮಾಡುತ್ತಿದ್ದರು.

    Serogacy

    ಕಾರ್ಯಾಚರಣೆ ಹೇಗೆ?

    • ಮದುವೆ ಇಲ್ಲದೆ ಗರ್ಭ ಧರಿಸಿ ಮರ್ಯಾದೆಗೆ ಅಂಜಿ ಗರ್ಭಪಾತ ಮಾಡಿಸಲು ವೈದ್ಯರ ಬಳಿಗೆ ಬರುವವರ ಮಾಹಿತಿ ಪಡೆಯುತ್ತಿದ್ದರು. ಅವರನ್ನು ಸಂಪರ್ಕ ಮಾಡುತ್ತಿದ್ದ ಆರೋಪಿಗಳು ಹಣದ ಆಮಿಷವೊಡ್ಡಿ ಶಿಶು ಮಾರಾಟಕ್ಕೆ ಒಪ್ಪಿಸುತ್ತಿದ್ದರು. ಅಂತಹವರನ್ನು ಕರೆದೊಯ್ದು ಆರೈಕೆ ಮಾಡಿ ಹೆರಿಗೆಯಾದ ಮೇಲೆ ಹಣ ಕೊಟ್ಟು ಶಿಶು ಖರೀದಿಸಿ ಮಾರಾಟ ಮಾಡುತ್ತಿದ್ದರು.
    • ಮದುವೆಯಾಗಿ ಗರ್ಭ ಧರಿಸುವ ಹೆಣ್ಣು ಮಕ್ಕಳು, ಆರ್ಥಿಕ ಕಷ್ಟವೆಂದು ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಲು ಆಸ್ಪತ್ರೆಯನ್ನು ಸಂಪರ್ಕ ಮಾಡಿದವರ ವಿವರ ಪಡೆಯುತ್ತಿದ್ದರು. ಅವರಿಗೂ ಹಣಕಾಸಿನ ಆಮಿಷವೊಡ್ಡಿ ಮಗುವಿನ ಆರೈಕೆ ಮಾಡಿಸಿ ಹೆರಿಗೆ ಬಳಿಕ ಹಣ ಕೊಟ್ಟು ಖರೀದಿಸುತ್ತಿದ್ದರು.
    • ಬಂಧಿತ ಏಳು ಮಹಿಳೆಯರು ತಮ್ಮ ಸಂಪರ್ಕದಲ್ಲಿರುವ ಬಡ ಮತ್ತು ಹಣಕಾಸಿನ ಸಮಸ್ಯೆ ಇರುವ ಮಹಿಳೆಯರನ್ನು ಸಂರ್ಪಸಿ ಅವರಿಗೆ ಹಣದಾಸೆ ತೋರಿಸಿ ಬಾಡಿಗೆ ತಾಯ್ತನಕ್ಕೆ ಒಪ್ಪಿಸುತ್ತಿದ್ದರು. ಶ್ರೀಮಂತರ ಅಂಡಾಣು ಪಡೆದು ಬಾಡಿಗೆ ತಾಯ್ತನಕ್ಕೆ ವ್ಯವಸ್ಥೆ ಮಾಡಿಸುತ್ತಿದ್ದರು.

    ನಕಲಿ ಜನನ ಪ್ರಮಾಣ ಪತ್ರ ವಿತರಣೆ: ಶಿಶು ಮಾರಾಟ ಬಳಿಕ ಕೆಲವೇ ದಿನಕ್ಕೆ ನಕಲಿ ಜನನ ಪ್ರಮಾಣಪತ್ರ ಮಾಡಿಸಿಕೊಡುತ್ತಿದ್ದರು. ಶಿಶು ಖರೀದಿಸಿದ ದಂಪತಿ ಆಧಾರ್ ಕಾರ್ಡ್ ಪಡೆದು ಅವರ ಹೆಸರಿನಲ್ಲಿ ನಕಲಿ ವೈದ್ಯಕೀಯ ಪ್ರಮಾಣಪತ್ರ ಸೃಷ್ಟಿಸುತ್ತಿದ್ದರು. ಸ್ಥಳೀಯ ಕಂದಾಯ ಕಚೇರಿಗೆ ಸಲ್ಲಿಸಿ ಜನನ ಪ್ರಮಾಣಪತ್ರ ಕೊಡಿಸುತ್ತಿದ್ದರು. ರಕ್ಷಣೆ ಮಾಡಿರುವ 20 ದಿನದ ಗಂಡು ಶಿಶುವಿಗೆ ಬರ್ತ್ ಸರ್ಟಿಫಿಕೇಟ್ ಮಾಡಿಸಿದ್ದಾರೆ.

    ಹೆತ್ತ ಶಿಶುವನ್ನೇ ಮಾರಿ, ಗ್ಯಾಂಗ್ ಕಟ್ಟಿದರು..!: ಬಂಧಿತ ಮಹಿಳೆಯರು ಈ ಹಿಂದೆ ಬಾಡಿಗೆ ತಾಯ್ತನಕ್ಕೆ ಒಳಗಾಗಿ ಸ್ವಂತ ಮಕ್ಕಳನ್ನೇ ಮಾರಾಟ ಮಾಡಿದ್ದಾರೆ. ಮಹಾಲಕ್ಷ್ಮೀ ಮತ್ತು ಸುಹಾಸಿನಿಗೆ ಗಂಡ ಇಲ್ಲ. ರಾಧಾಗೆ ಪತಿ ಇದ್ದು, ಆತ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾರೆ. ಆತನಿಗೆ ದಂಧೆಯ ಬಗ್ಗೆ ಮಾಹಿತಿ ಇಲ್ಲ. ರಾಧಾ ಶಿಶುವನ್ನು ಮಾರಾಟ ಮಾಡುವ ಡೀಲ್ ಕುದುರಿಸುತ್ತಿದ್ದಳು. ಹೇಮಲತಾ, ಶರಣ್ಯ ಮಗುವನ್ನು ತೆಗೆದುಕೊಂಡು ಹೋಗಿ ಸಂಬಂಧಪಟ್ಟವರಿಗೆ ಕೊಟ್ಟು ಹಣ ಪಡೆದುಕೊಂಡು ಬರುತ್ತಿದ್ದರು. ಮಾರಾಟಕ್ಕೆ ಶಿಶು ಸಿಕ್ಕರೆ ಫೋಟೋವನ್ನು ವಾಟ್ಸ್​ಆಪ್​ನಲ್ಲಿ ಹಂಚಿಕೊಂಡು ಮಾರಾಟ ಮಾಡುತ್ತಿದ್ದರು. ಸದ್ಯ ರಕ್ಷಣೆ ಮಾಡಿರುವ 20 ದಿನಗಳ ಗಂಡು ಶಿಶುವಿಗೆ ಮುರುಗೇಶ್ವರಿ ತಾಯಿ. ಕೆಲ ದಿನಗಳ ಹಿಂದೆ ಮಗು ಬೇಕೆಂದು ರಾಧಾಗೆ ಮಹಾಲಕ್ಷ್ಮೀ ಮಾಹಿತಿ ನೀಡಿದ್ದಳು. ಅದನ್ನು ಆಕೆ ಕಣ್ಣನ್ ಸ್ವಾಮಿಗೆ ಹೇಳಿದ್ದಳು. ಈತನ ಕಡೆಯಿಂದ ಮಾಹಿತಿ ಪಡೆದ ಗೋಮತಿ ತನ್ನ ಸಂಪರ್ಕದಲ್ಲಿರುವ ಮಹಾಲಕ್ಷ್ಮೀ ಬಳಿ ಗಂಡು ಶಿಶು ಇರುವುದಾಗಿ ಖಚಿತಪಡಿಸಿದ್ದಳು. ಆಕೆಗೆ 2 ಲಕ್ಷ ರೂ. ಕೊಟ್ಟು ಮಾರಾಟಕ್ಕೆ ರಾಜರಾಜೇಶ್ವರಿ ದೇವಸ್ಥಾನದ ಬಳಿಗೆ ಬಂದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts