More

    ಲಾಕ್‌ಡೌನ್ ಉಲ್ಲಂಘನೆ- ಶಿಶುವಿನ ಮೇಲೂ ದಾಖಲಾಯ್ತು ಕೇಸ್‌, ಮಗುವನ್ನೂ ಬಿಡದ ಪೊಲೀಸರು!

    ಉತ್ತರಕಾಶಿ (ಉತ್ತರಾಖಂಡ): ಲಾಕ್‌ಡೌನ್‌. ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದು ಮಾಮೂಲು. ಅದೇ ರೀತಿ ಉತ್ತರಾಖಂಡದ ಉತ್ತರಕಾಶಿಯಲ್ಲಿಯೂ 51 ಮಂದಿಯ ಮೇಲೆ ಕೇಸ್‌ ದಾಖಲಾಗಿದೆ.

    ಅದರಲ್ಲೇನು ವಿಶೇಷ ಅಂತೀರಾ? ಇಲ್ಲಿಯೇ ಇರುವುದು ವಿಶೇಷ. ಪೊಲೀಸರು ಕೇಸು ದಾಖಲು ಮಾಡಿರುವವರ ಪೈಕಿ ಆರು ತಿಂಗಳ ಶಿಶು ಮತ್ತು ಮೂರು ವರ್ಷದ ಮಗು ಕೂಡ ಸೇರಿದೆ! ಹೌದು. ಈ ಕುರಿತು ಎಎನ್‌ಐ ಸುದ್ದಿ ಸಂಸ್ಥೆ ತನ್ನ ಟ್ವಿಟರ್‌ನಲ್ಲಿ ಈ ವಿಷಯವನ್ನು ಪ್ರಕಟಿಸಿದೆ.

    ಲಾಕ್‌ಡೌನ್‌ ಇದ್ದರೂ ಅನೇಕ ಕಡೆಗಳಲ್ಲಿ ಜನರ ಓಡಾಟ ನಡೆದೇ ಇದೆ. ಉತ್ತರಕಾಶಿಯಲ್ಲಿ ಈ ಮಕ್ಕಳು ಇರುವ ಕುಟುಂಬದವರಿಗೆ ಸೋಂಕು ತಗುಲಿದ್ದ ಶಂಕೆ ಇದ್ದ ಕಾರಣ, ಎಲ್ಲರನ್ನೂ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಆದರೆ, ಕುಟುಂಬದ ಎಲ್ಲ ಸದಸ್ಯರು ಸೇರಿದಂತೆ ಅನೇಕ ಮಂದಿ ಗುಂಪುಗುಂಪಾಗಿ ಹೊರಗಡೆ ಓಡಾಡುತ್ತಿದ್ದರು.

    ಎಲ್ಲರ ವಿರುದ್ಧವೂ ಲಾಕ್‌ಡೌನ್‌ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದ್ದರೆ, ಕೆಲವರ ವಿರುದ್ಧ ಕ್ವಾರಂಟೈನ್‌ ನಿಯಮ ಉಲ್ಲಂಘನೆ ಅಡಿ ದೂರು ದಾಖಲು ಮಾಡಲಾಗಿದೆ.

    ಈ ಇಬ್ಬರು ಮಕ್ಕಳು ಅಪ್ರಾಪ್ತರಾಗಿದ್ದರೂ ಅವರ ವಿರುದ್ಧ ಬಾಲಾರೋಪಿ ಕಾಯ್ದೆ ಅಡಿ ಎಫ್‌ಐಆರ್‌ ದಾಖಲು ಮಾಡಲು ಅಗುವುದಿಲ್ಲ. ಏಕೆಂದರೆ 8 ವರ್ಷಕ್ಕಿಂತ ಕಡಿಮೆ ವಯಸ್ಸು ಇದ್ದರೆ ಅಂಥವರ ವಿರುದ್ಧ ಈ ಕಾಯ್ದೆ ಅಡಿ ದೂರು ದಾಖಲಿಸಲು ಆಗುವುದಿಲ್ಲ. ಈಗ ದಾಖಲು ಮಾಡಿರುವ ದೂರಿನ ಅನ್ವಯ ಎಂಟು ವರ್ಷದ ಬಾಲಕನೂ ಇದ್ದು, ಅವನ ವಿರುದ್ಧ ಎಫ್‌ಐಆರ್‌ ದಾಖಲು ಮಾಡಬಹುದು. ಒಟ್ಟಿನಲ್ಲಿ ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಉತ್ತರಕಾಶಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಹೇಳಿದ್ದಾರೆ.

    ಉತ್ತರಾಖಂಡದಲ್ಲಿ ಇದುವರೆಗೆ 46 ಮಂದಿಯಲ್ಲಿ ಸೋಂಕು ಪ್ರಕರಣ ಪತ್ತೆಯಾಗಿದೆ. ಅಲ್ಲಿ ಲಾಕ್‌ಡೌನ್‌ ಆದೇಶ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿದ್ದು, ಇದುವರೆಗೆ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts