More

    ಸಾವು ಗೆದ್ದು ಬಂದ ಶ್ರಮಿಕರ ಜತೆ ಫೋನ್​ನಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

    ಡೆಹ್ರಾಡೂನ್​: ಉತ್ತರಾಖಂಡದ ಸಿಲ್ಕ್​ಯಾರ ಸುರಂಗದಲ್ಲಿ ಸಿಲುಕಿ 17 ದಿನಗಳ ಬಳಿಕ ಸಾವನ್ನೇ ಗೆದ್ದು ಬಂದ 41 ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ನಿನ್ನೆ ರಾತ್ರಿ ದೂರವಾಣಿ ಮೂಲಕ ಮಾತನಾಡಿ, ಆರೋಗ್ಯ ವಿಚಾರಿಸಿದರು.

    ನಿರ್ಮಾಣ ಹಂತದ ಸಿಲ್ಕ್​ಯಾರ ಸುರಂಗದಲ್ಲಿ ಕುಸಿದ ಅವಶೇಷಗಳನ್ನು ತೆರವುಗೊಳಿಸಲು ಭಾರೀ ಮತ್ತು ಸುಧಾರಿತ ಕೊರೆಯುವ ಯಂತ್ರಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಲಾಗಿತ್ತು. ಆದರೆ, ಕೊನೆಯ ಮಹತ್ವದ ಘಟ್ಟದಲ್ಲಿ ಯಂತ್ರಗಳು ಕೈಕೊಟ್ಟಿದ್ದರಿಂದ ನಂರತ ಇಲಿ ಕುಣಿಕೆ ಗಣಿಗಾರಿಕೆ ಕಾರ್ಯಾಚರಣೆ ಆರಂಭಿಸಿ, ನಿನ್ನೆ (ನ.28) ರಾತ್ರಿ ಎಲ್ಲ 41 ಕಾರ್ಮಿಕರನ್ನು ರಕ್ಷಣಾ ತಂಡಗಳು ರಕ್ಷಣೆ ಮಾಡಿ, ಪ್ರಾಥಮಿಕ ಚಿಕಿತ್ಸೆ ನೀಡಿ ಸುರಕ್ಷಿತವಾಗಿ ಸ್ಥಳಾಂತರಿಸಿವೆ.

    ಬದುಕಿ ಬಂದ ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಫೋನ್​ ಮೂಲಕ ಆರೋಗ್ಯ ವಿಚಾರಿಸಿದರು. ಅಲ್ಲದೆ, ಆತ್ಮಸ್ಥೈರ್ಯವನ್ನು ತುಂಬಿದರು. ಇದಕ್ಕೂ ಮುನ್ನ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ನಿಮ್ಮ ಧೈರ್ಯ ಮತ್ತು ತಾಳ್ಮೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಸುರಂಗದಲ್ಲಿ ಸಿಕ್ಕಿಬಿದ್ದಿದ್ದ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ. ನಾನು ನಿಮ್ಮೆಲ್ಲರಿಗೂ ಒಳ್ಳೆಯ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತೇನೆ. ದೀರ್ಘಾವಧಿಯ ಕಾಯುವಿಕೆಯ ನಂತರ ನಮ್ಮ ಈ ಸ್ನೇಹಿತರು ಈಗ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತಾರೆ ಎಂಬುದು ತುಂಬಾ ತೃಪ್ತಿಯ ವಿಷಯ. ಈ ಸವಾಲಿನ ಸಮಯದಲ್ಲಿ ಈ ಎಲ್ಲಾ ಕುಟುಂಬಗಳು ತೋರಿದ ತಾಳ್ಮೆ ಮತ್ತು ಧೈರ್ಯ ಪ್ರಶಂಸನೀಯ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ನಾನು ನಮಸ್ಕರಿಸುತ್ತೇನೆ. ಅವರ ಶೌರ್ಯ ಮತ್ತು ಸ್ಥೈರ್ಯ ನಮ್ಮ ಕಾರ್ಮಿಕ ಬಂಧುಗಳಿಗೆ ಹೊಸ ಬದುಕನ್ನು ನೀಡಿದೆ. ಈ ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡದ ಪ್ರತಿಯೊಬ್ಬ ಸದಸ್ಯನ ಕೆಲಸಗಳು ಮಾನವೀಯತೆಯ ಅತ್ಯುತ್ತಮ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

    ರಕ್ಷಣಾ ಕಾರ್ಯದ ಹಾದಿ…
    * ನವೆಂಬರ್ 12: ದೀಪಾವಳಿಯ ದಿನ ಬೆಳಗ್ಗೆ 5.30ರ ಸುಮಾರಿಗೆ ಸುರಂಗದಲ್ಲಿ ಭೂಕುಸಿತ. ಎನ್​ಡಿಆರ್​ಎಫ್ ಸಹಿತ ಅನೇಕ ಏಜೆನ್ಸಿಗಳು ರಕ್ಷಣಾ ಕಾರ್ಯದಲ್ಲಿ ಭಾಗಿ.
    * ನ.13: ಕಾರ್ವಿುಕರು ಸುರಕ್ಷಿತವಾಗಿದ್ದಾರೆ ಎಂದು ವರದಿ. ತೆರವು ಕಾರ್ಯ ಆರಂಭಮಾಡುತ್ತಿದ್ದಂತೆ ಮತ್ತೆ ಕುಸಿತ. ಸುಮಾರು 30 ಮೀಟರ್ ಪ್ರದೇಶದಲ್ಲಿ ಸಂಗ್ರಹವಾದ ಶಿಲಾಖಂಡರಾಶಿಗಳು 60 ಮೀಟರ್​ಗಳಿಗೆ ವಿಸ್ತರಣೆ.
    * ನ.14: 900 ಮಿಲಿ ಮೀಟರ್ ವ್ಯಾಸದ ಉಕ್ಕಿನ ಕೊಳವೆಗಳನ್ನು ಒಳಗೆ ತೂರಿಸುವ ಸಲುವಾಗಿ ಆಗರ್ ಯಂತ್ರ ಸ್ಥಳಕ್ಕೆ ರವಾನೆ.
    * ನ.16: ಕೊರೆಯುವ ಯಂತ್ರವನ್ನು ಜೋಡಿಸಿ, ಮಧ್ಯರಾತ್ರಿಯ ನಂತರ ಕೆಲಸ ಪ್ರಾರಂಭ.
    * ನ.17: ಯಂತ್ರವು ಮಧ್ಯಾಹ್ನದ ವೇಳೆಗೆ 24 ಮೀಟರ್ ಕೊರೆಯುವಲ್ಲಿ ಯಶಸ್ವಿ. ಇನ್ನೂ 4 ಪೈಪ್ ಅಳವಡಿಕೆ. ಐದನೇ ಪೈಪ್ ಜೋಡಣೆ ವೇಳೆ ತಾಂತ್ರಿಕ ದೋಷ. ಸಂಜೆ ವೇಳೆಗೆ ಸುರಂಗದಲ್ಲಿ ದೊಡ್ಡ ಬಿರುಕು, ಧ್ವನಿ ಕೇಳಿ ಬಂದ ಬಗ್ಗೆ ವರದಿ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತಷ್ಟು ಕುಸಿತದ ಸಾಧ್ಯತೆಯ ಬಗ್ಗೆ ತಜ್ಞರ ಎಚ್ಚರಿಕೆ. ಕಾರ್ಯಾಚರಣೆ ಸ್ಥಗಿತ.
    * ನ.15: ಮೊದಲ ಡ್ರಿಲ್ಲಿಂಗ್ ಮೆಷಿನ್ ಕೆಲಸ ವಿಫಲಗೊಂಡ ಕಾರಣ ಅತ್ಯಾಧುನಿಕ ಆಗರ್ ಯಂತ್ರ ದೆಹಲಿಯಿಂದ ವಾಯುಪಡೆ ವಿಮಾನ ಮೂಲಕ ರವಾನೆ
    * ನ.18: ಕಾರ್ವಿುಕರನ್ನು ರಕ್ಷಿಸಲು ಸುರಂಗದ ಮೇಲ್ಭಾಗದಲ್ಲಿ ಲಂಬವಾಗಿ ಸಣ್ಣ ಸುರಂಗ ಕೊರೆಯುವುದು ಸೇರಿ ಏಕಕಾಲದಲ್ಲಿ ಐದು ಯೋಜನೆಗಳಲ್ಲಿ ಕೆಲಸ ಮಾಡಲು ನಿರ್ಧಾರ. ಪರ್ಯಾಯ ಆಯ್ಕೆಗಳ ಬಗ್ಗೆ ಪರಿಶೀಲನೆ.
    * ನ.20: ಪ್ರಧಾನಿ ಮೋದಿ, ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿ ದೂರವಾಣಿ ಮೂಲಕ ಮಾತುಕತೆ. ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದ ಪ್ರಧಾನಿ. ಹೆವಿ-ಡ್ಯೂಟಿ ಆಗರ್ ಯಂತ್ರದ ಡ್ರಿಲ್ಲಿಂಗ್​ಗೆ ಬಂಡೆ ಕಾಣಿಸಿಕೊಂಡ ನಂತರ ಕಾರ್ಯ ಸ್ಥಗಿತ.
    * ನ. 21: ಸುರಂಗದೊಳಗೆ ಕ್ಯಾಮರಾ ಕಳಿಸುವಲ್ಲಿ ಯಶಸ್ವಿ. ಕಾರ್ವಿುಕರು ಆಹಾರ ಪದಾರ್ಥಗಳನ್ನು ಸೇವಿಸುವುದು, ಪರಸ್ಪರ ಮಾತನಾಡುತ್ತಿರುವ ಮೊದಲ ವೀಡಿಯೊ ಬಹಿರಂಗ.
    * ನ.22: ಸುರಂಗದ ಹೊರಗೆ ಆಂಬ್ಯುಲೆನ್ಸ್​ಗಳು ಸಿದ್ಧ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ವಿಶೇಷ ವಾರ್ಡ್. 57 ಮೀಟರ್ ಡ್ರಿಲ್ಲಿಂಗ್ ಯಶಸ್ವಿ. ಇನ್ನು ಕೇವಲ 12 ಮೀಟರ್ ಬಾಕಿ. ಸಂಜೆ ವೇಳೆಗೆ ಕೆಲವು ಕಬ್ಬಿಣದ ರಾಡ್​ಗಳು ಆಗರ್ ಯಂತ್ರದ ದಾರಿಗೆ ಅಡ್ಡ ಬಂದಾಗ ಕೊರೆಯುವಿಕೆ ಸ್ಥಗಿತ.
    * ನ.23: ರಕ್ಷಣಾ ಕಾರ್ಯಾಚರಣೆ ಪುನರಾರಂಭ. ಕೊರೆಯುವ ಯಂತ್ರ ನಿಂತಿರುವ ಪ್ಲಾಟ್​ಫಾಮ್ರ್ ನಲ್ಲಿ ಬಿರುಕಿನಿಂದ ಮತ್ತೆ ಕಾರ್ಯಾಚರಣೆಗೆ ಅಡ್ಡಿ.
    * ನ.24: ಬೆಳಗ್ಗೆ ಕೊರೆಯುವ ಕೆಲಸ ಆರಂಭಿಸಿದಾಗ ಆಗರ್ ಯಂತ್ರದ ದಾರಿಯಲ್ಲಿ ಸ್ಟೀಲ್ ಪೈಪ್ ಅಡ್ಡ ಬಂದ ಕಾರಣ ಆಗರ್ ಯಂತ್ರಕ್ಕೆ ಹಾನಿ. ಕಾರ್ಯಾಚರಣೆ ಸ್ಥಗಿತ.
    * ನ.25: ಕಾರ್ವಿುಕರ ರಕ್ಷಣೆಗೆ ಇರುವ ಇತರ ಆಯ್ಕೆಗಳ ಬಗ್ಗೆ ಪರಿಶೀಲನೆ. ಸುರಂಗದ ಮೇಲಿನಿಂದ ಲಂಬವಾಗಿ ಕೊರೆಯಲು ಸಿದ್ಧತೆ ಆರಂಭ.
    * ನ.26: ಲಂಬವಾಗಿ ಕೊರೆಯುವಿಕೆ ಪ್ರಕ್ರಿಯೆ ರಾತ್ರಿ 11 ಗಂಟೆಯವರೆಗೆ 20 ಮೀಟರ್ ವರೆಗೆ ನಡೆಯಿತು.
    * ನ.27: ಸಂಜೆಯ ವೇಳೆಗೆ ಆಗರ್ ಯಂತ್ರದ ಹೊರತೆಗೆಯ ಲಾಯಿತು. ರ್ಯಾಟ್ ಹೋಲ್ ಮೈನರ್ಸ್​ರಿಂದ ಭೌತಿಕವಾಗಿ ಅಗೆಯುವ ಕೆಲಸ ಆರಂಭ
    * ನ.28: ರ್ಯಾಟ್ ಹೋಲ್ ಮೈನರ್ಸ್ ಕೊರೆದ ರಂಧ್ರದ ಮೂಲಕ ಉಕ್ಕಿನ ಪೈಪ್ ಅಳವಡಿಕೆ ಯಶಸ್ವಿ. ಈ ಪೈಪ್ ಮೂಲಕ ಕಾರ್ವಿುಕರು ಸುರಂಗದಿಂದ ಹೊರಕ್ಕೆ.

    ಏನಿದು ಯೋಜನೆ?: 4.5 ಕಿ.ಮೀ. ಉದ್ದದ ಸುರಂಗವು ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷೆಯ ಚಾರ್ ಧಾಮ್ ಹೆದ್ದಾರಿ ಯೋಜನೆಯ ಭಾಗವಾಗಿದೆ. ಉತ್ತರಾಖಂಡದ ನಾಲ್ಕು ಪ್ರಮುಖ ಹಿಂದು ಪುಣ್ಯಕ್ಷೇತ್ರಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ನಡುವೆ ಈ ಹೆದ್ದಾರಿ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗವು ಉತ್ತರಕಾಶಿ ಜಿಲ್ಲೆಯ ಸಿಲ್ಕಾ್ಯರಾ ಮತ್ತು ದಂಡಲ್ಗಾಂವ್ ಸಂರ್ಪಸುವ ಮಾರ್ಗದಲ್ಲಿದೆ. ಇದು ಡಬಲ್ ಲೇನ್ ಸುರಂಗವಾಗಿದ್ದು, ಅತಿ ಉದ್ದದ ಸುರಂಗವಾಗಿದೆ. ಇದು ಪೂರ್ಣಗೊಂಡ ನಂತರ ಒಟ್ಟು ಪ್ರಯಾಣದ ಸಮಯದಲ್ಲಿ ಒಂದು ಗಂಟೆ ಉಳಿತಾಯವಾಗಲಿದೆ. ಸುರಂಗ ನಿರ್ವಿುಸುವ ಯೋಜನೆಯನ್ನು ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ನಡೆಸುತ್ತಿದೆ. (ಏಜೆನ್ಸೀಸ್​)

    20 ಸಂಸ್ಥೆಗಳು, 408 ಗಂಟೆ ನಿರಂತರ ಕೆಲಸ!; ತ್ವರಿತ ನಿರ್ಧಾರ

    ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ: ಫಲಿಸಿತು ಶತಕೋಟಿ ಭಾರತೀಯರ ಪ್ರಾರ್ಥನೆ, ಸಿಹಿ ಹಂಚಿ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts