More

    727 ಮಾದರಿ ನೆಗೆಟಿವ್, 774 ವರದಿ ನಿರೀಕ್ಷೆ

    ತುಮಕೂರು: ಜಿಲ್ಲೆಯಲ್ಲಿ ಮಂಗಳವಾರ 727 ಮಂದಿಯ ಕೋವಿಡ್ 19 ಪರೀಕ್ಷಾ ವರದಿಗಳು ನೆಗೆಟಿವ್ ಬಂದಿರುವುದು ಕೊಂಚ ಸಮಾಧಾನ ಮೂಡಿಸಿದೆಯಾದರೂ ಇನ್ನೂ ಬರಬೇಕಿರುವ 774 ವರದಿ ಮೇಲೆ ಜನರ ಚಿತ್ತ ಹರಿದಿದೆ.

    ಪ್ರಸ್ತುತ ಜಿಲ್ಲೆಯಲ್ಲಿ 8900 ಜನರ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು ಮಂಗಳವಾದವರೆಗೆ 27 ಪಾಸಿಟಿವ್, 8040 ನೆಗೆಟಿವ್ ವರದಿ ಬಂದಿದ್ದರೆ 59 ಮಾದರಿ ತಿರಸ್ಕೃತವಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯ 50ಕ್ಕೂ ಹೆಚ್ಚು ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರ ಮಾದರಿ ಪಡೆದು ಪರೀಕ್ಷೆ ನಡೆಸಲಾಗುತ್ತಿದೆ.

    ಜಿಲ್ಲೆಯಲ್ಲಿರುವ ವಸತಿ ಶಾಲೆಗಳಲ್ಲಿ ಶಂಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು ಜನರು ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮುಂದುವರಿದಿದೆ. ಇದರ ನಡುವೆಯೂ ತಿಪಟೂರು, ಪಾವಗಡ, ಶಿರಾ ನಗರದಲ್ಲಿ ಜನರು ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ.

    ಜಿಲ್ಲಾಡಳಿತದ ಕಣ್ಣುತಪ್ಪಿಸಿ ಸಾಕಷ್ಟು ಸಂಖ್ಯೆಯಲ್ಲಿ ಹೊರರಾಜ್ಯಗಳಿಂದ ಜನರು ಆಗಮಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಎಚ್ಚರಿಕೆಯಿಂದಲೇ ಓಡಾಡಬೇಕಿದೆ. ಜತೆಗೆ ಗ್ರಾಮಗಳಿಗೆ ಆಗಮಿಸಿದವರ ಬಗ್ಗೆ ಜಿಲ್ಲಾಡಳಿತಕ್ಕೆ ಸಕಾಲದಲ್ಲಿ ಮಾಹಿತಿ ಹಂಚಿಕೊಂಡು ಸೋಂಕು ಹರಡದಂತೆ ತಡೆಯಬೇಕಿದೆ. ಕಂಟೇನ್ಮೆಂಟ್ ವಲಯದ ಜನರಿಗೆ ಆರ್ಥಿಕ ಸಂಕಷ್ಟ: ತುಮಕೂರು ತಾಲೂಕು ಬೆಳ್ಳಾವಿ ಸಮೀಪದ ಮಾವಿನಕುಂಟೆ, ಹೆಬ್ಬೂರು ಸಮೀಪದ ಮಾಯಮ್ಮನ ಪಾಳ್ಯದಲ್ಲಿ ಜನರು ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದ್ದು ಜಾನುವಾರುಗಳ ನಿರ್ವಹಣೆ ಕಷ್ಟವಾಗಿದೆ. ಕಂಟೇನ್ಮೆಂಟ್ ವಲಯ ಎಂದು ಘೋಷಿತವಾಗಿರುವ ಈ ಗ್ರಾಮಗಳಲ್ಲಿ ಉತ್ಪಾದಿಸಲಾಗುತ್ತಿರುವ ಹಾಲು, ತರಕಾರಿ, ಹಣ್ಣು ಮಾರಾಟಕ್ಕೆ ನಿರ್ಬಂಧವಿದ್ದು ಜನರು ಆರ್ಥಿಕ ನಷ್ಟಕ್ಕೂ ಸಿಲುಕುವಂತಾಗಿದೆ.

    ಸೋಂಕಿತರ ಚಿಕಿತ್ಸೆಗೆ ನಿರ್ಲಕ್ಷ್ಯ ಬೇಡ: ಕರೊನಾ ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಲು ಸಾಧ್ಯವಿದೆ, ಉದಾಸೀನತೆ ತೊರದೇ ಉತ್ತಮ ಚಿಕಿತ್ಸೆ ನೀಡಬೇಕು, ಚಿಕಿತ್ಸೆ ನೀಡುವಲ್ಲಿ ಯಾವುದೇ ಲೋಪವಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕರೊನಾ ನಿಯಂತ್ರಣ ಕುರಿತ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚಿಕಿತ್ಸೆ ಮೂಲಕ ಕರೊನಾ ಸೋಂಕು ನಿಯಂತ್ರಿಸಲು ಸಾಧ್ಯವಿದ್ದು ಗುಣಮುಖರಾಗುವವರ ಸಂಖ್ಯೆಯೂ ಜಾಸ್ತಿಯಿದೆ, ಹಾಗಾಗಿ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಬೇಕು, ಔಷಧ, ಪಿಪಿಇ ಕಿಟ್, ಸುರಕ್ಷತೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ಎಚ್ಚರಿಸಿದರು.
    ಎಲ್ಲರ ಜೀವಕ್ಕೂ ಬೆಲೆಯಿದೆ, ಸೋಂಕು ತಗುಲಿದವರು ಸಾವನ್ನಪ್ಪದಂತೆ ಜಾಗ್ರತೆ ವಹಿಸಬೇಕು, ಜಿಲ್ಲೆಯಲ್ಲಿ ಈಗಾಗಲೇ ಮೂವರು ಮೃತಪಟ್ಟಿದ್ದು, ಅವರಿಗೆ ಬೇರೆ ಗಂಭೀರ ಸಮಸ್ಯೆಗಳಿದ್ದವು, ಸೋಂಕಿನಿಂದ ಮೃತಪಡುವ ಪ್ರಕರಣಗಳು ನಡೆಯದಂತೆ ನಿಗಾ ವಹಿಸಬೇಕೇಂದು ಸೂಚನೆ ನೀಡಿದರು.

    ಹೇಮಾವತಿ ಹಾಗೂ ಎತ್ತಿನಹೊಳೆ ಯೋಜನೆಗಳ ಅನುಷ್ಠಾನ ಹಾಗೂ ಪ್ರಸ್ತುತ ಕಾಮಗಾರಿಗಳ ಪ್ರಗತಿ ಹಾಗೂ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಸಭೆಯಲ್ಲಿ ಪ್ರಗತಿ ಪರೀಶಿಲನೆ ನಡೆಸಲಾಯಿತು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಪಂ ಸಿಇಒ ಶುಭಾಕಲ್ಯಾಣ್, ಪಾಲಿಕೆ ಆಯುಕ್ತ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts