More

    ಭೋಜನ ಯೋಜನೆ ವಿವಿಗಳಿಗೆ ಮಾದರಿ; ಮೈಸೂರ ರಾಜವಂಶಸ್ಥ ಯದುವೀರ್ ಹೇಳಿಕೆ

    ತುಮಕೂರು: ದೇಶದಲ್ಲೇ ಪ್ರಥಮ ಎನಿಸಿದ ತುಮಕೂರು ವಿಶ್ವವಿದ್ಯಾಲಯದ ಮಧ್ಯಾಹ್ನದ ಭೋಜನ ಯೋಜನೆಗೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸೋಮವಾರ ಚಾಲನೆ ನೀಡಿದರು.

    ಜ್ಞಾನದ ಹಸಿವಿನ ಜತೆಗೆ ಹೊಟ್ಟೆಯ ಹಸಿವು ತಣಿಸುವ ವಿವಿಯ ಯೋಜನೆ ದೇಶದ ಎಲ್ಲ ವಿವಿಗಳಿಗೆ ಮಾದರಿ ಆಗಲಿ. ಇದು ದೊಡ್ಡಮಟ್ಟಕ್ಕೆ ಬೆಳೆಯಲಿ ಎಂದು ಒಡೆಯರ್ ಆಶಿಸಿದರು.

    ವಿವಿಯ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ ವತಿಯಿಂದ ಆಯೋಜಿಸಿರುವ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಲು ವಿದ್ಯೆಯ ಜತೆಗೆ ಆರೋಗ್ಯವೂ ಮುಖ್ಯ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ವಿದ್ಯಾರ್ಥಿಗಳಿಗೆ ಅತ್ಯವಶ್ಯ ಎಂದರು.

    ನಮ್ಮ ದೇಶದಲ್ಲಿ ಪೌಷ್ಟಿಕ ಆಹಾರದ ಕೊರತೆ ಇದೆ. ಪಾಶ್ಚಿಮಾತ್ಯ ಪದ್ಥತಿ ಆಹಾರದ ಬದಲು ಸ್ಥಳೀಯ ಆಹಾರ ಪದ್ಥತಿಯನ್ನು ಈ ಯೋಜನೆಯಲ್ಲಿ ಬಳಸಿಕೊಂಡು ರೈತರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುತ್ತಿರುವುದು ಶ್ಲಾಘನೀಯ. ಈ ಸೇವೆಯಲ್ಲಿ ಕೈಜೋಡಿಸಿರುವ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

    ಭೋಜನ ಯೋಜನೆ ವಿವಿಗಳಿಗೆ ಮಾದರಿ; ಮೈಸೂರ ರಾಜವಂಶಸ್ಥ ಯದುವೀರ್ ಹೇಳಿಕೆ

    ಹಸಿವಿನಿಂದ ಬಳಲುತ್ತಿರುವ ಶೇ.14.8 ಜನ!: ದೇಶದ ಜನಸಂಖ್ಯೆಯಲ್ಲಿ ಶೇ.14.8 ಜನ ಹಸಿವಿನಿಂದ ನರಳಾಡುತ್ತಿದ್ದಾರೆ. ಜಾಗತಿಕ ಹಸಿವಿನ ಸೂಚ್ಯಂಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 104ನೇ ಸ್ಥಾನದಲ್ಲಿದೆ. ಆಹಾರ ಉತ್ಪಾದನೆ ಕೊರತೆಯಿಂದ ಈ ಸಮಸ್ಯೆ ಎದುರಾಗಿಲ್ಲ. ಬದಲಾಗಿ ಆಹಾರ ಶೇಖರಣೆ ಮಾಡಿಟ್ಟುಕೊಳ್ಳುವ ವ್ಯಕ್ತಿಗಳಿಂದ ಹಸಿವಿನ ಸಮಸ್ಯೆ ಎದುರಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

    ಮಾನವೀಯತೆ ಇದ್ದರೆ ಹಸಿದ ಹೊಟ್ಟೆಗಳ ಸಂಖ್ಯೆ ಕಡಿಮೆ ಆಗಲಿದೆ. ಮೀಸಲಾತಿ ಕೇಳುವ ಬದಲು ಸ್ವಾಮೀಜಿಗಳು ಹಸಿದ ಹೊಟ್ಟೆಗೆ ಅನ್ನ ಹಾಕಿದರೆ ಸಾಕು. ದುರಾಸೆ ತುಂಬಿದ ಈ ಸಮಾಜ ಬದಲಾಯಿಸದೇ ಇದ್ದರೆ ಕಂಟಕ ಎದುರಾಗಲಿದೆ. ಆದರೆ, ಮನೆಯಲ್ಲೂ ಇದನ್ನು ಮಕ್ಕಳಿಗೆ ಕಲಿಸುವವರೇ ಇಲ್ಲವಾಗಿದೆ. ಮಾನವೀಯತೆಯ ಅಂಶಗಳಿಗೆ ಸಾಕ್ಷಿಯಾಗಿರುವ ಈ ಯೋಜನೆ ಮಧ್ಯಾಹ್ನದ ಊಟಕ್ಕೆ ಸೀಮಿತವಾಗಬಾರದು. ಹಿರಿಯರು ಕಟ್ಟಿರುವ ಸಮಾಜದಲ್ಲಿ ಮೌಲ್ಯಯುತ ಬದುಕು ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಸಲಹೆಯಿತ್ತರು.

    ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಶಿಕ್ಷಣದ ಜತೆಗೆ ಆಹಾರ ನೀಡುವಂಥ ಶಕ್ತಿ ವಿವಿಗೆ ದೊರೆತಿರುವುದು ನಮ್ಮ ಭಾಗ್ಯವೇ ಸರಿ. ಒಂದೂವರೆ ಸಾವಿರ ವಿದ್ಯಾರ್ಥಿಗಳಿಗೆ ಪೌಷ್ಟಿಕಯುಕ್ತ ಆಹಾರ ನೀಡುವ ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ವಿವಿ ಪರವಾಗಿ ಧನ್ಯವಾದಗಳು ಎಂದರು.
    ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ ಅಧ್ಯಕ್ಷ ಸ್ವಾಮಿ ಜಪಾನಂದಜೀ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರತ್ನಕಲಾ, ವಿವಿ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

    ಕರ್ನಾಟಕದಲ್ಲಿ ಮಠಮಾನ್ಯಗಳಿಗೆ ಜ್ಞಾನ, ಅನ್ನ ದಾಸೋಹದ ದೊಡ್ಡ ಪರಂಪರೆ ಇದೆ. ಕನ್ನಡದಲ್ಲಿ ಇಷ್ಟು ಸಾಕ್ಷರತೆ ಪ್ರಮಾಣ ಇದೆ ಅಂದರೆ ಅದಕ್ಕೆ ಮಠಗಳ ಕೊಡುಗೆ ಬಹಳ. ಬಹಳ ಅಗತ್ಯವಿರುವ ಮಧ್ಯಾಹ್ನ ಭೋಜನ ಯೋಜನೆ ದೇಶಕ್ಕೆ ಮಾದರಿ ಆಗಲಿ. ಬೇರೆ ವಿವಿಗಳು ಇದನ್ನು ಅನುಸರಿಸಲಿ. ರಾಜಪ್ರಭುತ್ವದಲ್ಲೂ ಪ್ರಜಾಪ್ರಭುತ್ವವನ್ನು ಪಾಲಿಸಿದ ಏಕೈಕ ಸಂಸ್ಥಾನ ಮೈಸೂರು ಸಂಸ್ಥಾನ.
    |ಸಿದ್ದಲಿಂಗ ಶ್ರೀಗಳು, ಮಠಾಧ್ಯಕ್ಷ, ಸಿದ್ಧಗಂಗಾ ಮಠ

    ಸರ್ಕಾರದ ನೆರವಿನಿಂದ ಈ ಯೋಜನೆ ಆರಂಭಿಸಿಲ್ಲ. ಇದು ತುಮಕೂರು ಜನತೆಯ ಯೋಜನೆ. ನಾನು ವಿವೇಕಾನಂದರ ಸೇನಾನಿ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರಸಾದ ಕೊಡುತ್ತಿದ್ದು ಪ್ರತೀ ಅನ್ನದ ಅಗಳು ವ್ಯರ್ಥವಾಗದೆ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು.
    ಜಪಾನಂದ ಜೀ ಅಧ್ಯಕ್ಷರು, ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ

    ಭೋಜನ ಯೋಜನೆ ವಿವಿಗಳಿಗೆ ಮಾದರಿ; ಮೈಸೂರ ರಾಜವಂಶಸ್ಥ ಯದುವೀರ್ ಹೇಳಿಕೆ

    ಪ್ಲಾಸ್ಟಿಕ್ ತ್ಯಾಜ್ಯ ಯದುವೀರ್ ಕಳವಳ: ಹಳ್ಳಿಹಳ್ಳಿಯಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ರಾಶಿಯು ಸ್ವಾಗತಿಸುವ ದೃಶ್ಯ ಕಳವಳಕಾರಿ ಎನಿಸಿದೆ ಎಂದ ಯದುವೀರ್ ಕೃಷ್ಣದತ್ತ ಒಡೆಯರ್, ಪ್ಲಾಸ್ಟಿಕ್ ಬಳಕೆ ಪರಿಸರದ ಮೇಲೆ ಮಾತ್ರವಲ್ಲ, ಮನುಷ್ಯ ಸೇವಿಸುವ ಆಹಾರದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇದನ್ನು ನಿಯಂತ್ರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಯುವಜನತೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಮಾರುಕಟ್ಟೆಗೆ ಏನೇ ಖರೀದಿಸಲು ಹೋದರೂ ಹಳೆಯ ಪದ್ಧತಿಗಳನ್ನು ಅನುಸರಿಸಬೇಕು ಎಂದು ಸಲಹೆಯಿತ್ತರು.

    ಜೈಲಿಗೆ ಹೋಗಿ ಬಂದವರಿಗೆ ಏರ್‌ಪೋರ್ಟ್‌ನಲ್ಲಿ ಸ್ವಾಗತ ! ಶ್ರೀಮಂತಿಕೆ, ಅಧಿಕಾರದಲ್ಲಿದ್ದವರನ್ನು ಈ ಸಮಾಜ ಪೂಜಿಸುತ್ತದೆಯೇ ಹೊರತು ಪ್ರಾಮಾಣಿಕರನ್ನಲ್ಲ. ಈ ಹಿಂದೆ ಜೈಲಿಗೆ ಹೋದರೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತಿತ್ತು. ಆದರೆ, ಈಗ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆ ಆಗಿ ಬಂದವರನ್ನು ಏರ್‌ಪೋರ್ಟ್‌ನಲ್ಲೇ ಸೇಬಿನ ಹಾರ ಹಾಕಿ ಸ್ವಾಗತಿಸುತ್ತಿರುವುದು ವಿಪರ್ಯಾಸ ಎಂದು ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಬೇಸರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts