More

    ಮರದ ಕೆಳಗೆ ಶವವಿಟ್ಟು ಹೋದ ಸಿಬ್ಬಂದಿ ; ಮನಸಿಗೆ ತೋಚಿದಂತೆ ಅಂತ್ಯಸಂಸ್ಕಾರ ಮಾಡಿದ ಕುಟುಂಬಸ್ಥರು

    ಪಾವಗಡ: ಕರೊನಾದಿಂದ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹವನ್ನು ಕರೊನಾ ಮಾರ್ಗಸೂಚಿಯಂತೆ ಶವಸಂಸ್ಕಾರ ನಡೆಸಬೇಕಿದ್ದ ಸ್ಥಳೀಯ ಗ್ರಾಪಂ ಜವಾಬ್ದಾರಿ ಮರೆತು ಶವವನ್ನು ಹೊಲದಲ್ಲಿಟ್ಟು ಹೋಗಿರುವ ಅಮಾನವೀಯ ಕೃತ್ಯಕ್ಕೆ ಸೋಮವಾರ ಮರಡಿಪಾಳ್ಯ ಸಾಕ್ಷಿಯಾಗಿದೆ.

    ನಲಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಮರಡಿಪಾಳ್ಯದ 55 ವರ್ಷದ ಮಹಿಳೆ ಸೋಮವಾರ ಕರೊನಾದಿಂದ ಮೃತಪಟ್ಟಿದ್ದರು. ಪಟ್ಟಣದ ಶಿರಾ ರಸ್ತೆಯ ಕುರುಬರಹಳ್ಳಿ ಗೇಟ್ ಬಳಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದು ಮೃತದೇಹವನ್ನು ತಾಲೂಕು ಆಸ್ಪತ್ರೆ ಆಂಬುಲೆನ್ಸ್‌ನಲ್ಲಿ ಗ್ರಾಮಕ್ಕೆ ತಂದಿಟ್ಟು ಸಿಬ್ಬಂದಿ ತೆರಳಿದ್ದರು.

    ಯಾವುದೇ ಮಾರ್ಗಸೂಚಿ ಪಾಲಿಸದೆ ಸಂಬಂಧಿಕರಿಗೆ ಸೂಕ್ತ ಸಲಹೆ ಕೂಡ ನೀಡದೆ ಬೆಳಗ್ಗೆ 8ಕ್ಕೆ ತಂದಿಳಿಸಿದ್ದ ಮೃತದೇಹವನ್ನು ಮಧ್ಯಾಹ್ನ 4 ಗಂಟೆಯಾದರೂ ಸಂಸ್ಕಾರ ಮಾಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಸ್ಥಳೀಯ ಗ್ರಾಪಂ ಹಾಗೂ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಬೇಡಿದರೂ ಅವರ ಕಲ್ಲು ಹೃದಯ ಕರಗಲಿಲ್ಲ.

    ಅಧಿಕಾರಿಗಳನ್ನು ನಂಬಿಕೊಂಡು ಕೂತರೆ ಆಗುವುದಿಲ್ಲ ಎಂದು ಪಕ್ಕದ ಕಿಲಾರಲಹಳ್ಳಿಯಿಂದ ಜನರನ್ನು ಕರೆತಂದು ಗುಂಡಿ ತೆಗೆದು, ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಅಲ್ಲಿದ್ದ ಸ್ಥಳೀಯರಿಂದ ೆಟೋ ತರಿಸಿಕೊಂಡ ಅಧಿಕಾರಿಗಳು ಕರೊನಾ ಮಾರ್ಗಸೂಚಿಯಂತೆ ಅಂತ್ಯ ಸಂಸ್ಕಾರ ನಡೆಸಲಾಗಿದೆ ಎಂದು ಮೇಲಧಿಕಾರಿಗಳನ್ನು ನಂಬಿಸಿ ಕೈತೊಳೆದುಕೊಂಡರು.

    ಸ್ಥಳೀಯ ಗ್ರಾಪಂ ಅಧಿಕಾರಿಗಳು, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜನರಿಗೆ ನೆರವಾಗದೆ ಕರ್ತವ್ಯಲೋಪ ಎಸಗಿದ್ದು ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯರು ಆಕ್ರೋಶ ಹೊರಹಾಕಿದರು.

    ಕಳೆದ ವಾರದಿಂದ ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದ ನನ್ನ ಅಕ್ಕ ಸೋಮವಾರ ಬೆಳಗ್ಗೆ ಮೃತಪಟ್ಟರು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು, ಸೂಕ್ತ ಚಿಕಿತ್ಸೆ ನೀಡದೆ ಆಕೆಯ ಸಾವಿಗೆ ಅಧಿಕಾರಿಗಳೇ ಕಾರಣರಾಗಿದ್ದಾರೆ. ಸೋಮವಾರ ಬೆಳಗ್ಗೆ ಆಂಬುಲೆನ್ಸ್‌ನಲ್ಲಿ ಮೃತದೇಹ ತಂದು ಮರದ ಕೆಳಗಿಟ್ಟು ಹೋದವರು ಮತ್ತೆ ಯಾರೂ ಬರಲಿಲ್ಲ, ನಾವೇ ಪಿಪಿಇ ಕಿಟ್ ಧರಿಸಿಕೊಂಡು ತೋಚಿದಂತೆ ಅಂತ್ಯ ಸಂಸ್ಕಾರ ನಡೆಸಿದೆವು.
    ರಂಗಸ್ವಾಮಿ, ಮೃತ ಮಹಿಳೆ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts