More

    ಲಾಕ್‌ಡೌನ್ ವೇಳೆ ದರೋಡೆ ಮಾಡುತ್ತಿದ್ದ ಗ್ಯಾಂಗ್ ಸೆರೆ; ಕದ್ದ ಕಾರಿನಲ್ಲೇ ಸುತ್ತಾಡಿ ದರೋಡೆಗೆ ಇಳಿದಿದ್ದ ಕದೀಮರು

    ಬೆಂಗಳೂರು: ಲಾಕ್‌ಡೌನ್ ವೇಳೆ ಒಂಟಿಯಾಗಿ ಓಡಾಡುವ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ಕಾರಿನಲ್ಲಿ ಬಂದು ಅಡ್ಡಗಟ್ಟಿ ಚೂರಿ ತೋರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಆರೋಪಿಗಳು ವಾಹನ ತಪಾಸಣೆ ವೇಳೆ ಹನುಮಂತನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

    ಮೊಹಮ್ಮದ್ ಯೂಸಫ್ (19), ಮೊಹಮ್ಮದ್ (19), ಶ್ರೀನಿವಾಸ್ (22) ಹಾಗೂ ಸೈಯ್ಯದ್ ಸಾಹೇಬ (22) ಬಂಧಿತರು. ತಲೆಮರೆಸಿಕೊಂಡಿರುವ ಇಬ್ಬರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳಿಂದ 1 ಮಾರುತಿ ಆಲ್ಟೋ 800 ಕಾರು, 2 ದ್ವಿಚಕ್ರವಾಹನ, ಕೃತ್ಯಕ್ಕೆ ಬಳಸಿದ ಚೂರಿ ಸೇರಿ 5.30 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇವರ ಬಂಧನದಿಂದ ಮೈಸೂರು ನಗರದ 1 ಕಾರು ಕಳವು, ಹನುಮಂತನಗರದ 1 ಸುಲಿಗೆ, ಬ್ಯಾಟರಾಯನಪುರ ಠಾಣೆಯ 1 ದ್ವಿಚಕ್ರವಾಹನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

    ಆರೋಪಿಗಳು ಮೈಸೂರಿನಲ್ಲಿ ಆಲ್ಟೋ 800 ಕಾರನ್ನು ಕಳ್ಳತನ ಮಾಡಿದ್ದರು. ಲಾಕ್‌ಡೌನ್ ಸಮಯದಲ್ಲಿ ಇದೇ ಕಾರಿನಲ್ಲಿ ಬೆಂಗಳೂರಿನ ವಿವಿಧೆಡೆ ಸುತ್ತಾಡಿ ಒಂಟಿಯಾಗಿ ವಾಹನದಲ್ಲಿ ಓಡಾಡುತ್ತಿದ್ದವರನ್ನು ಗುರುತಿಸುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಹೋಗಿ ಅಡ್ಡಗಟ್ಟಿ ಚೂರಿ ತೋರಿಸಿ ದರೋಡೆ ಮಾಡಿ ಪರಾರಿಯಾಗುತ್ತಿದ್ದರು. ಲಾಕ್‌ಡೌನ್ ವೇಳೆ ಜನರ ಓಡಾಟ ಕಡಿಮೆ ಇರುವುದನ್ನು ಗಮನಿಸುತ್ತಿದ್ದ ಆರೋಪಿಗಳು ತಮ್ಮ ಬಗ್ಗೆ ಸುಳಿವು ಸಿಗುವುದಿಲ್ಲ ಎಂದು ಭಾವಿಸಿ ಅದೇ ಸಮಯದಲ್ಲಿ ಕೃತ್ಯ ಎಸಗುತ್ತಿದ್ದರು.

    ಸಿಕ್ಕಿಬಿದ್ದಿದ್ದು ಹೇಗೆ ?
    ಮೇ 29ರಂದು ರಾಮಾಂಜನೇಯಾ ಗುಡ್ಡದ ಬಳಿ ಚೆಕ್‌ಪೋಸ್ಟ್ ಹಾಕಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಅದೇ ದಾರಿಯಲ್ಲಿ 2 ದ್ವಿಚಕ್ರವಾಹನದಲ್ಲಿ ಆರೋಪಿಗಳು ಬಂದಿದ್ದರು. ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ಹಿಂಬಾಲಿಸಿಕೊಂಡು ಹೋಗಿ ಹಿಡಿದು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ದರೋಡೆ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.

    ಬೈಕ್ ಕದ್ದಿದ್ದ ಆರೋಪಿಗಳು:
    ಶ್ರೀನಗರ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಸ್ನೇಹಿತನನ್ನು ನೋಡಲು ಹಲಸೂರು ನಿವಾಸಿ ಶಬರೀಶ್ ಮೇ 25ರಂದು ಮುಂಜಾನೆ 5 ಗಂಟೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಆಲ್ಟೋ ಕಾರಿನಲ್ಲಿ ಬಂದ ಆರೋಪಿಗಳು ಇವರನ್ನು ಅಡ್ಡಗಟ್ಟಿದ್ದರು. ಓರ್ವ ಆರೋಪಿ ಶಬರೀಶ್‌ನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಮತ್ತೋರ್ವ ಚೂರಿ ತೋರಿಸಿ ಹಲ್ಲೆ ಮಾಡುವುದಾಗಿ ಬೆದರಿಸಿ ಬೈಕ್ ಕೀ ಕಸಿದುಕೊಂಡು ಬೈಕ್‌ನೊಂದಿಗೆ ಪರಾರಿಯಾಗಿದ್ದರು. ಶಬರೀಶ್ ಈ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

    ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಮಗು ಕದ್ದಿದ್ದು ವೈದ್ಯೆಯೇ! ವರ್ಷದ ಹಿಂದಿನ ಪ್ರಕರಣವನ್ನು ಬೇಧಿಸಿದ ಪೊಲೀಸರು

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts