More

    ಭೂ ಹಗರಣ, ದರೋಡೆ, ಸೈಬರ್ ವಂಚನೆ ಪ್ರಕರಣ ಭೇದಿಸಿದ ಖಾಕಿ ಪಡೆ

    ವಿಜಯಪುರ: ಖೊಟ್ಟಿ ದಾಖಲೆ ಸೃಷ್ಟಿಸಿ ಭೂಮಿ ಕಬಳಿಸುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಖಾಕಿ ಪಡೆ ಭೂ ಹಗರಣದ ರೂವಾರಿಗಳ ಜನ್ಮ ಜಾಲಾಡತೊಡಗಿದೆ.

    ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಸರ್ವೆ ನಂ.48/*/1 ರಲ್ಲಿ ಬರುವ 20 ಎಕರೆ ಜಮೀನನ್ನು ಖೊಟ್ಟಿ ದಾಖಲೆ ಸೃಷ್ಠಿಸಿ ಸಾಹೇಬಗೌಡ ಮಲ್ಲನಗೌಡ ರುದ್ರಗೌಡರಗೆ ವಂಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜು ಮಾಳಪ್ಪ ಮಾನೆ, ದಯಾನಂದ ಅಮಯ್ಯ ಸಂಗಮದ, ಕಿರಣ ವಾಸುದೇವ ಬೇಡೆಕರ, ದಶರಥ ಸಿದ್ರಾಮ ಹೊಸಮನಿ, ದತ್ತಾತ್ರೇಯ ಶರಣಪ್ಪ ಶಿವಶರಣ, ಸಾಕೀಫ್ ಬಶೀರಅಹ್ಮದ ನಂದವಾಡಗಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಇನ್ನೂ ಕೆಲವರು ಕೂಡಿಕೊಂಡು ಮೋಸ ಮಾಡಿದ್ದರು.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 46,50,000ರೂ.ಗಳನ್ನು ಜಫ್ತು ಮಾಡಲಾಗಿದೆ. ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೃಷ್ಟಿ ಮಾಡಿದವರಿಗೆ ಪತ್ತೆ ಮಾಡಿ ವಿಚಾರಣೆ ಮಾಡುವ ತನಿಖೆ ಪ್ರಗತಿಯಲ್ಲಿದೆ ಎಂದು ಎಸ್‌ಪಿ ಋಷಿಕೇಶ ಸೋನಾವಣೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಇನ್ನು ತಿಕೋಟಾ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ಬರಟಗಿ ಗ್ರಾಮದ ವ್ಯಾಪ್ತಿಯಲ್ಲಿ ರೇವಣಸಿದ್ದಪ್ಪ ಮಲ್ಲಪ್ಪ ಊರ್ಫ್ ಮಲ್ಲಿಕಾರ್ಜುನ ಕೋರಿ ಪ್ರಕರಣ ಸೇರಿದಂತೆ ಇನ್ನು ಹಲವು ಪ್ರಕರಣಗಳಿಗೆ ಸಂಬಂಧಿಸಿದ ತನಿಖೆ ಪ್ರಗತಿಯಲ್ಲಿದೆ. ಹಂತ ಹಂತವಾಗಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಶೀಘ್ರದಲ್ಲಿಯೇ ಪ್ರಕರಣಕ್ಕೆ ಇತೀಶ್ರೀ ಹಾಡುವುದಾಗಿ ಎಸ್‌ಪಿ ಋಷಿಕೇಶ ಪ್ರತಿಕ್ರಿಯಿಸಿದರು.

    ದರೋಡೆ ಪ್ರಕರಣ

    ಕೊಲ್ಹಾರ ಪಟ್ಟಣದ ಉಪ್ಪಲದಿನ್ನಿ ಕ್ರಾಸ್ ಬಳಿ ಕ್ಯಾಂಟರ್ ಲಾರಿ ಅಡ್ಡಗಟ್ಟಿ ದರೋಡೆ ನಡೆಸಿದ ಪ್ರಕರಣದಲ್ಲಿ ದರೋಡೆಗೆ ಒಳಗಾದ ಕ್ಯಾಂಟರ್ ಲಾರಿಯ ಚಾಲಕನೇ ‘ಮಾಸ್ಟರ್ ಮೈಂಡ್’ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

    ಮೇ 17 ರಂದು ಜೇವರ್ಗಿಯ ಚಂದ್ರಕಾಂತ ಗುರುಪಾದಪ್ಪ ಕುಂಬಾರ ಇವರಿಗೆ ಸಂಬಂಧಿಸಿದ ಹತ್ತಿಯನ್ನು ಧಾರವಾಡ ಜಿಲ್ಲೆಯ ಅಮೀನಬಾವಿಯಲ್ಲಿರುವ ಅನೀಲಕುಮಾರ ಕಂಪನಿಗೆ ಮಾರಾಟ ಮಾಡಿದ 32,29,364 ರೂಪಾಯಿ ಹಣ ತೆಗೆದುಕೊಂಡು ಮಹಾಂತೇಶ ವಾಪಸ್ ಬರುತ್ತಿದ್ದನು. ಈತನನ್ನು ಬೆನ್ನಟ್ಟಿ ಪಿಕಪ್ ವಾಹನದಲ್ಲಿ ಬಂದಿದ್ದ ಕಿರಾತಕರು ಉಪ್ಪಲದಿನ್ನಿ ಕ್ರಾಸ್ ಬಳಿ ಕ್ಯಾಂಟರ್ ಅಡ್ಡಗಟ್ಟಿ ದರೋಡೆ ನಡೆಸಿದ್ದರು.

    ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆಲಮೇಲ ತಾಲೂಕಿನ ಕೋರಳ್ಳಿಯ ಲಾರಿ ಚಾಲಕ ಮಹಾಂತೇಶ ಶಿವಗೊಂಡ ತಳವಾರ (35), ಬ.ಬಾಗೇವಾಡಿ ತಾಲೂಕಿನ ಇಂಗಳೇಶ್ವರದ ಧರೇಶ ರೇವಣಸಿದ್ದ ದಳವಾಯಿ(21), ಸಿಂದಗಿ ತಾಲೂಕಿನ ವಿಭೂತಿಹಳ್ಳಿಯ ಶಿವಪ್ಪ ಶರಣಪ್ಪ ಮಾಶ್ಯಾಳ (39), ಬ.ಬಾಗೇವಾಡಿಯ ಇಂಗಳೇಶ್ವರದ ಸುನೀಲ ರಾಮಪ್ಪ ವಡ್ಡರ (21), ಶಿವಾನಂದ ಬಸಪ್ಪ ದಳವಾಯಿ ಬಂಧಿತ ಆರೋಪಿಗಳು. ಇವರಿಂದ 31,04,364 ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.

    ಎಎಸ್‌ಪಿ ರಾಮನಗೌಡ ಹಟ್ಟಿ, ಎಎಸ್‌ಪಿ ಶಂಕರ ಮರಿಹಾಳ, ಬ.ಬಾಗೇವಾಡಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾಂವಿ, ಪೊಲೀಸ್ ಉಪಾಧೀಕ್ಷಕ ಗಿರಿಮಲ್ಲ ತಳಕಟ್ಟಿ, ಸಿಪಿಐ ಶರಣಗೌಡ ಬಿ.ಗೌಡರ ನೇತೃತ್ವದ ತಂಡಕ್ಕೆ ಬಹುಮಾನ ಘೋಷಿಸಿದ್ದಾಗಿ ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದರು.

    ಸೈಬರ್ ಪ್ರಕರಣಗಳ ಪತ್ತೆ

    ಎರಡು ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಅಂತರ ರಾಜ್ಯ ವಂಚಕರನ್ನು ಬಂಧಿಸಿ ಅವರ ಬ್ಯಾಂಕ್ ಖಾತೆ ಫ್ರೀಜ್ ಮಾಡಿಸಿದ್ದಲ್ಲದೇ ಕೃತ್ಯಕ್ಕೆ ಬಳಸಿದ ಮೊಬೈಲ್ ಮತ್ತಿತರ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.

    ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆ ಥಾನೇಸರದ ನಿವಾಸಿ ರಾಜೀವ ಸತ್ಪಾಲ ವಲಿಯಾ, ರಾಜಸ್ಥಾನದ ಉದಯಪುರ ಜಿಲ್ಲೆಯ ಲಸಾಡಿಯಾ ನಿವಾಸಿ ರಾಕೇಶಕುಮಾರ ಶಂಕರಲಾಲ ಟೈಲರ್, ಶಾಸ್ತ್ರೀ ಸರ್ಕಲ್ ನಿವಾಸಿ ಕರಣ ತೇಜಪಾಲ ಯಾದವ ಹಾಗೂ ನಾಕೋಡಾ ನಿವಾಸಿ ಸುರೇಂದ್ರಸಿಂಗ್ ಶಿರಮಸಿಂಗ್ ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ 9 ಮೊಬೈಲ್, 7 ಸಿಮ್ ಕಾರ್ಡ್ ಹಾಗೂ 1 ಟ್ಯಾಬ್ ವಶಕ್ಕೆ ಪಡೆಯಲಾಗಿದೆ.

    ವಿಜಯಪುರ ನಿವಾಸಿ ಡಾ.ಅನಿರುದ್ಧ ರಾಘವೇಂದ್ರ ಉಮರ್ಜಿ ಇವರಿಗೆ ಆನ್‌ಲೈನ್ ಮೂಲಕ ಕರೆ ಮಾಡಿ ಕಾಬೂಲ್‌ಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದೀರಿ ಎಂದು ಹೆದರಿಸಿ 54 ಲಕ್ಷ ರೂಪಾಯಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದರು. ಮಕಣಾಪುರ ಎಲ್‌ಟಿ ನಂ.1 ರನಿವಾಸಿ ಬಬನ್ ನಾಮದೇವ ಚವಾಣ್ ಇವರಿಂದ 14,77,135 ರೂ.ಗಳನ್ನು ಹಾಕಿಸಿಕೊಂಡು ವಂಚನೆ ಮಾಡಲಾಗಿತ್ತು. ಈ ಎರಡು ಪ್ರಕರಣದಲ್ಲಿ ಒಟ್ಟು 68,77,135 ರೂ. ವಂಚನೆ ಆಗಿದ್ದು, ಈ ಪೈಕಿ ಈಗಾಗಲೇ 40 ಲಕ್ಷ ರೂ.ಗಳನ್ನು ದೂರುದಾರರಿಗೆ ಮರಳಿ ಕೊಡಿಸಲಾಗಿದೆ.
    ಸಿಇಎನ್ ಠಾಣೆ ಇನ್ಸಪೆಕ್ಟರ್ ಸುನೀಲಕುಮಾರ ಎಸ್.ನಂದೇಶ್ವರ ನೇತೃತ್ವದ ತಂಡಕ್ಕೆ ಬಹುಮಾನ ಘೋಷಿಸಿದ್ದಾಗಿ ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದರು.

    ಕಳೆದ ಹೋಗಿದ್ದ 50 ಮೊಬೈಲ್ ಪತ್ತೆ

    ವಿಜಯಪುರ ನಗರ ಹಾಗೂ ಜಿಲ್ಲಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಆಕಸ್ಮಿಕವಾಗಿ ಕಳೆದುಕೊಂಡ ಮೊಬೈಲ್‌ಗಳನ್ನು ಪತ್ತೆ ಹೆಚ್ಚಲಾಗಿದೆ.
    23 ವಿವೋ, 5 ರೆಡ್‌ಮಿ, 4 ಸ್ಯಾಮ್ಸಂಗ್, 5 ಒನ್ ಪ್ಲಸ್, 1 ಎಲ್‌ಜಿ, 8 ಓಪೋ, 1 ರಿಯಲ್ ಮಿ, 1 ಪೋಕೋ, 1 ಸ್ಯಾಮ್‌ಸಂಗ್, 1 ಐಪೋನ್ ಕಂಪನಿಯ ಹೀಗೆ ಅಂದಾಜು 10,73,000 ರೂ.ಮೌಲ್ಯದ ಒಟ್ಟು 50 ಮೊಬೈಲ್‌ಗಳನ್ನು ಪತ್ತೆ ಹೆಚ್ಚಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts