More

    ಮತಪೆಟ್ಟಿಗೆ ಕಾವಲಿಗೆ ನಿಂತ ಅಭ್ಯರ್ಥಿಗಳು!

    ಶ್ರೀಧರ ಅಣಲಗಾರ ಯಲ್ಲಾಪುರ

    ಚುನಾವಣೆ ಮುಗಿದ ಮೇಲೆ ಅಭ್ಯರ್ಥಿಗಳು ತುಸು ನಿರಾಳರಾಗುತ್ತಾರೆ. ಮತ ಎಣಿಗೆ ವೇಳೆಗಿಂತ ಸ್ವಲ್ಪ ಮುಂಚೆ ಬೆಂಬಲಿಗರೊಂದಿಗೆ ಎಣಿಕೆ ಕೇಂದ್ರಕ್ಕೆ ಹಾಜರಾಗುವುದು ಸಾಮಾನ್ಯ. ಆದರೆ, ಇಲ್ಲೊಂದು ಚುನಾವಣೆ ಸ್ವಾರಸ್ಯ ಮೂಡಿಸಿದೆ. ಏಕೆಂದರೆ, ಮತಪೆಟ್ಟಿಗೆ ಇಟ್ಟಿರುವ ಸ್ಥಳದಲ್ಲಿ ಅಭ್ಯರ್ಥಿಗಳು ಸರದಿ ಮೇಲೆ ಹಗಲು-ರಾತ್ರಿ ಕಾವಲು ಮಾಡುತ್ತಿದ್ದಾರೆ.

    ಹೌದು. ಇದು ಯಲ್ಲಾಪುರ ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘ ಹಾಗೂ ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯ ಸ್ವಾರಸ್ಯ.

    ಈ ಸಂಘಗಳಿಗೆ ಚುನಾವಣೆ ನಡೆದು ವಾರ ಕಳೆದರೂ ಮತ ಎಣಿಕೆಗೆ ಮುಹೂರ್ತ ಕೂಡಿ ಬಂದಿಲ್ಲ. ಹಲವು ಸದಸ್ಯರ ಮತದಾನದ ಮಾನ್ಯತೆಯ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಮತ ಎಣಿಕೆ ವಿಳಂಬವಾಗಿದೆ. ಸದ್ಯ ಉಪಖಜಾನೆಯಲ್ಲಿ ಇರಿಸಿರುವ ಮತ ಪೆಟ್ಟಿಗೆಯನ್ನು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಉಪಖಜಾನೆಯ ಹೊರಗೆ ನಿಂತು ಪಾಳಿ ಪ್ರಕಾರ ಕಾಯುತ್ತಿದ್ದಾರೆ.

    ಆನಗೋಡ ಸಹಕಾರಿ ಸಂಘ ಹಾಗೂ ಪಟ್ಟಣದ ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಕಳೆದ 18ರಂದು ಚುನಾವಣೆ ನಡೆದಿತ್ತು. 5 ವಾರ್ಷಿಕ ಸರ್ವಸಾಧಾರಣ ಸಭೆಗಳಲ್ಲಿ ಕನಿಷ್ಠ 2 ಸಭೆಗಾದರೂ ಹಾಜರಿರಬೇಕು. ಸಂಘದಲ್ಲಿ ವ್ಯವಹಾರ ಹೊಂದಿರಬೇಕು. ಅಂತಹ ಸದಸ್ಯರಿಗೆ ಮಾತ್ರ ಮತ ಚಲಾಯಿಸುವ ಹಕ್ಕು ನೀಡಬೇಕೆಂಬ ನಿಯಮ ಜಾರಿಯಲ್ಲಿದೆ. ಅದರಂತೆ 2 ಸಭೆಗೂ ಹಾಜರಾಗದ, ಕನಿಷ್ಠ ವ್ಯವಹಾರವನ್ನೂ ಹೊಂದಿರದ ಸದಸ್ಯರನ್ನು ಗುರುತಿಸಿ, ಮತದಾನದಿಂದ ಅನರ್ಹಗೊಳಿಸಲಾಗಿತ್ತು. ಅನರ್ಹಗೊಂಡ ಸದಸ್ಯರು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಅನರ್ಹತೆಗೆ ತಡೆಯಾಜ್ಞೆ ನೀಡಿ, ಪ್ರತ್ಯೇಕ ಕೌಂಟರ್​ನಲ್ಲಿ ಅವರಿಗೆ ಮತದಾನಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿತ್ತು. ಅಂತೆಯೇ ಮಾಡಲಾಗಿತ್ತು. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜೂ. 26ಕ್ಕೆ ಮುಂದೂಡಿದ್ದು, ತೀರ್ಪು ಬರುವವರೆಗೆ ಮತ ಎಣಿಕೆ ನಡೆಸುವಂತಿಲ್ಲ. ಅಲ್ಲಿಯವರೆಗೆ ಉಪಖಜಾನೆಯಲ್ಲಿ ಮತಪೆಟ್ಟಿಗೆಗಳನ್ನು ಭದ್ರವಾಗಿ ಇಡಲಾಗಿದೆ.

    ಪ್ರತಿಷ್ಠೆಗಾಗಿ ಕಾವಲು:

    ಎರಡೂ ಸಂಘಗಳ ಚುನಾವಣೆಯಲ್ಲಿ ಹಾಲಿ ಆಡಳಿತ ಮಂಡಳಿಯ ತಂಡ ಹಾಗೂ ಶಾಸಕ ಶಿವರಾಮ ಹೆಬ್ಬಾರ ಬೆಂಬಲಿತರ ತಂಡದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆನಗೋಡಿನಲ್ಲಿ ಟಿಎಂಎಸ್ ಅಧ್ಯಕ್ಷ ಹಾಗೂ ಸೊಸೈಟಿ ಹಾಲಿ ಅಧ್ಯಕ್ಷರೂ ಆಗಿರುವ ಎನ್.ಕೆ. ಭಟ್ಟ ಅವರ ತಂಡ ಹೆಬ್ಬಾರ ಬೆಂಬಲಿಗರ ತಂಡಕ್ಕೆ ಎದುರಾಳಿಯಾಗಿದೆ. ಯಲ್ಲಾಪುರ ಪ್ರಾಥಮಿಕ ಪತ್ತಿನ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಹಾಲಿ ಅಧ್ಯಕ್ಷ ನಾಗರಾಜ ಕವಡಿಕೆರೆ ತಂಡ ಹೆಬ್ಬಾರ ಬೆಂಬಲಿತರ ತಂಡಕ್ಕೆ ಸ್ಪರ್ಧೆಯೊಡ್ಡಿದೆ.

    ಹೆಬ್ಬಾರ ಬೆಂಬಲಿತ ತಂಡದವರು ಪ್ರಭಾವ ಬೀರಿ, ಮತಪೆಟ್ಟಿಗೆಗಳನ್ನು ಬದಲಿಸಿ, ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಎದುರಾಳಿಗಳನ್ನು ಕಾಡುತ್ತಿದೆ. ಇದೇ ಕಾರಣಕ್ಕಾಗಿ ಆನಗೋಡಿನ ಎನ್.ಕೆ. ಭಟ್ಟ ತಂಡದವರು, ಯಲ್ಲಾಪುರದ ನಾಗರಾಜ ಕವಡಿಕೆರೆ ತಂಡದ ಅಭ್ಯರ್ಥಿಗಳು ಪಾಳಿಯ ಪ್ರಕಾರ ಉಪಖಜಾನೆಯ ಎದುರು ಕಾಯುತ್ತಿದ್ದಾರೆ.

    ಮತಪೆಟ್ಟಿಗೆ ಕಾವಲಿಗೆ ನಿಯಮದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೂ, ಹೊರಭಾಗದಲ್ಲಿ ಅಭ್ಯರ್ಥಿಗಳ ತಂಡ ಹಗಲು-ರಾತ್ರಿ ಕಾವಲು ಕಾಯುತ್ತಿದೆ. ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಆನಗೋಡಿನಿಂದ ಮತಪೆಟ್ಟಿಗೆಗಳನ್ನು ಯಲ್ಲಾಪುರದ ಉಪಖಜಾನೆಗೆ ತರುವ ಸಂದರ್ಭದಲ್ಲಿಯೂ ಕೆಲ ಅಭ್ಯರ್ಥಿಗಳು ವಾಹನವನ್ನು ಹಿಂಬಾಲಿಸಿ ಬಂದಿದ್ದರು.

    ಎರಡೂ ತಂಡಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದೇ ಕಾವಲು ಕಾಯುವವರೆಗೂ ಹೋಗಲು ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts