More

    ಅಭ್ಯರ್ಥಿಗಳಿಗೆ ನಾಲ್ಕು ಕ್ಷೇತ್ರಗಳ ಭಯ!

    ಬೆಳಗಾವಿ: ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ದಿನದಿನವೂ ರೋಚಕ ಘಟ್ಟ ತಲುಪುತ್ತಿವೆ. ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಿಗೆ ಗೋಕಾಕ, ಅರಬಾವಿ, ರಾಮದುರ್ಗ ಮತ್ತು ಬೆಳಗಾವಿ ಉತ್ತರ ವಿಧಾನಸಭಾ ‘ಕ್ಷೇತ್ರಗಳ ಭಯ’ ಆವರಿಸತೊಡಗಿದೆ.

    ಪ್ರತಿ ಚುನಾವಣೆಯಲ್ಲೂ ‘ಹೊಂದಾಣಿಕೆ ರಾಜಕಾರಣ’ದ ಮೂಲಕ ಒಬ್ಬರನ್ನೊಬ್ಬರು ಗೆಲ್ಲಿಸಿ, ಮತ್ತೊಬ್ಬರನ್ನು ಸೋಲಿಸಿಕೊಂಡು ಬರುತ್ತಿದ್ದ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳಿಗೆ ಪ್ರಸಕ್ತ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ವಿಧಾನಸಭಾ ಕ್ಷೇತ್ರದಲ್ಲಿ ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರ ಪ್ರತ್ಯೇಕ ಗುಂಪು ಸೃಷ್ಟಿಯಾಗಿದೆ. ಅಲ್ಲದೆ, ಚುನಾವಣಾ ಪ್ರಚಾರದಿಂದ ರಾಜ್ಯದ ಮಟ್ಟದ ನಾಯಕರು ದೂರವೇ ಉಳಿಯುತ್ತಿದ್ದು, ಸ್ಥಳೀಯ ನಾಯಕರಲ್ಲಿ ಆತಂಕ ಮೂಡಿಸಿದೆ.

    ವಕ್ರದೃಷ್ಟಿ ತಳಮಳ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಬೆಳಗಾವಿ ಲೋಕಸಭಾ ಕ್ಷೇತ್ರ ಉಳಿಸಿಕೊಳ್ಳುವುದರ ಜತೆಗೆ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲೇಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಚಿವರು, ಸಂಸದರು ಪ್ರಯತ್ನಿಸುತ್ತಿದ್ದಾರೆ. ಆದರೂ ಗೋಕಾಕ, ಅರಬಾವಿ, ರಾಮದುರ್ಗ ಮತ್ತು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಗಳದ್ದೇ ಚಿಂತೆ ಕಾಡತೊಡಗಿದೆ.

    ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ, ಅಭಿವೃದ್ಧಿ ಕಾಮಗಾರಿಗಳ ಟೆಂಡರ್, ಅನುದಾನ ಹಂಚಿಕೆ ವಿಚಾರವಾಗಿ ಜಿಪಂ, ತಾಪಂನ ಮಾಜಿ ಸದಸ್ಯರು, ಗ್ರಾಪಂನ ಹಾಲಿ ಸದಸ್ಯರು, ಶಾಸಕರ ಬೆಂಬಲಿಗರ ನಡುವೆ ಗಲಾಟೆ ಆಗುತ್ತಲೇ ಇವೆ. ಇದೀಗ ಉಪ ಚುನಾವಣೆಯ ಮೇಲೆ ಅದೇ ವಿಚಾರದ ವಕ್ರದೃಷ್ಟಿ ಬಿದ್ದಿದೆ. ಅಲ್ಲದೆ, ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸುತ್ತಿರುವುದರಿಂದ ಬಿಜೆಪಿ ನಾಯಕರಲ್ಲಿ ತಳಮಳ ಉಂಟಾಗಿದೆ ಎನ್ನಲಾಗುತ್ತಿದೆ.

    ಕೈಯಲ್ಲಿ ವೈಮನಸ್ಸು: ಇತ್ತ ಕಾಂಗ್ರೆಸ್‌ನಲ್ಲಿಯೂ ಹಾಲಿ-ಮಾಜಿ ಶಾಸಕರು, ಪಕ್ಷದ ಸ್ಥಳೀಯ, ತಾಲೂಕು-ಜಿಲ್ಲಾ ಮಟ್ಟದ ನಾಯಕರು ಹಾಗೂ ಕಾರ್ಯಕರ್ತರ ನಡುವಿನ ವೈಮನಸ್ಸು ಚುನಾವಣಾ ಪ್ರಚಾರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದು ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ಗೋಕಾಕ, ಅರಬಾವಿ, ರಾಮದುರ್ಗ ಮತ್ತು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿನ ಸಾಂಪ್ರದಾಯಿಕ ಮತಗಳನ್ನು ಉಳಿಸಿಕೊಳ್ಳಲು ತೊಡಕಾಗುವ ಸಾಧ್ಯತೆ ಇದೆ. ಅಲ್ಲದೆ, ಪಕ್ಷದಲ್ಲಿನ ಸ್ಥಳೀಯ ಮಟ್ಟದ ಪ್ರಮುಖ ನಾಯಕರು ಯಾವುದೇ ಜವಾಬ್ದಾರಿ ವಹಿಸಿಕೊಳ್ಳದಿರುವುದರಿಂದ ಮತ್ತು ಎಲ್ಲದಕ್ಕೂ ಅಭ್ಯರ್ಥಿ ಸತೀಶ ಜಾರಕಿಹೊಳಿ ಹಾಗೂ ರಾಜ್ಯ ಮಟ್ಟದ ನಾಯಕರನ್ನೇ ಅವಲಂಬಿಸಿರುವುದರಿಂದ ಕಾಂಗ್ರೆಸ್‌ನ ರಾಜ್ಯ-ರಾಷ್ಟ್ರ ಮಟ್ಟದ ನಾಯಕರನ್ನೂ ಚಿಂತೆಗೀಡು ಮಾಡಿದೆ.

    ಜಾರಕಿಹೊಳಿ ಬೆಂಬಲಿಗರಲ್ಲಿ ಗೊಂದಲ

    ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಪೈಕಿ 4 ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಕಿಹೊಳಿ ಕುಟುಂಬವು ಎಲ್ಲ ವರ್ಗದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ಪಕ್ಷಕ್ಕಿಂತ ಜಾರಕಿಹೊಳಿ ಕುಟುಂಬವೇ ಮುಖ್ಯವಾಗಿದೆ. ಹಾಗಾಗಿ ಪ್ರತಿ ಚುನಾವಣೆಯಲ್ಲಿ ಜಾರಕಿಹೊಳಿ ಬೆಂಬಲಿಗರು ಸಂದರ್ಭಕ್ಕೆ ಅನುಗುಣವಾಗಿ ಕಾಂಗ್ರೆಸ್, ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಆದರೆ, ಇದೀಗ ಬೆಳಗಾವಿಯಲ್ಲಿ ‘ಬದಲಾದ ರಾಜಕೀಯ’ ವ್ಯವಸ್ಥೆಯಿಂದಾಗಿ ಪ್ರಸ್ತುತ ಉಪ ಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬದ ಇತರ ಸದಸ್ಯರು ಬಹಿರಂಗಾಗಿ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿಲ್ಲ. ಹೀಗಾಗಿ ರಮೇಶ ಜಾರಕಿಹೊಳಿ ಅವರ ಗೋಕಾಕ ಕ್ಷೇತ್ರ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರ ಅರಬಾವಿ ಕ್ಷೇತ್ರಗಳ ಜನರು ಪಕ್ಷಕ್ಕೆ ಬೆಂಬಲ ನೀಡಬೇಕೋ ಅಥವಾ ಜಾರಕಿಹೊಳಿ ಕುಟುಂಬಕ್ಕೆ ಬೆಂಬಲ ನೀಡಬೇಕೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts