More

    ಸಂಕೀರ್ಣ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಯಶಸ್ವಿ, ಮಣಿಪಾಲ ಕೆಎಂಸಿ ಆಸ್ಪತ್ರೆಯ ಹೆಗ್ಗಳಿಕೆ

    ಉಡುಪಿ: ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯರು ಶ್ವಾಸನಾಳ, ಅನ್ನನಾಳ, ಎದೆಭಾಗದ ಕ್ಲಿಷ್ಟಕರ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ಇತ್ತೀಚೆಗೆ ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯ ಶಸ್ತ್ರಚಿಕಿತ್ಸಕ ಡಾ.ನವೀನ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಶ್ವಾಸನಾಳದ (ವಿಂಡ್‌ಪೈಪ್) ಕ್ಯಾನ್ಸರ್ ಶಸ್ತ್ರಚಿಕಿತ್ಸೆಯು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳಲ್ಲಿ ಒಂದಾಗಿದ್ದು, ಅಲ್ಲಿ ಕ್ಯಾನ್ಸರ್ ಗಡ್ಡೆಯ ಜತೆಗೆ ಶ್ವಾಸನಾಳದ ಭಾಗವನ್ನು ತೆಗೆದುಹಾಕಲಾಗುತ್ತದೆ. ಉಳಿದ ಶ್ವಾಸನಾಳವನ್ನು ಕೆಳಗಿನ ಭಾಗ ಅಥವಾ ಶಾಖೆಗಳಿಗೆ ಸಂಪರ್ಕಿಸಲಾಗುತ್ತದೆ. ಶ್ವಾಸನಾಳದ ಕ್ಯಾನ್ಸರ್ ಶ್ವಾಸನಾಳ ಮುಚ್ಚುವುದರ ಮೂಲಕ ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತದೆ. ಇತ್ತೀಚೆಗೆ 70 ವರ್ಷದ ರೋಗಿ ಸಹಿತ ನಾಲ್ವರ ಪ್ರಮುಖ ಶ್ವಾಸನಾಳ ಶಸ್ತ್ರಚಿಕಿತ್ಸೆ ನಡೆಸಿದ್ದು ಎಲ್ಲರೂ ಆರೋಗ್ಯದಿಂದ ಇದ್ದಾರೆ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಬಳಿಕ ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಮಣಿಪಾಲ ಆಸ್ಪತ್ರೆಯದ್ದಾಗಿದೆ ಎಂದು ಹೇಳಿದರು.

    ಎದೆಯೊಳಗಿನ ಫುಟ್ಬಾಲ್ ಗಾತ್ರದ ಕ್ಯಾನ್ಸರ್ ಗಡ್ಡೆಗೆ 2 ಪ್ರಮುಖ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕ್ಯಾನ್ಸರ್ ಗಡ್ಡೆಯಿಂದ ಹೃದಯ, ಪ್ರಮುಖ ರಕ್ತನಾಳಗಳು, ಶ್ವಾಸಕೋಶ ಮತ್ತು ಶ್ವಾಸನಾಳವು ಸಂಕುಚಿತವಾಗಿದ್ದವು. 15 ವರ್ಷದ ಬಾಲಕನ ಎದೆಯ ಮೂಳೆ ಮತ್ತು ಎದೆಯ ಎಡಭಾಗ ವ್ಯಾಪಿಸಿದ್ದ 3 ಕೆಜಿಯಷ್ಟು ತೂಕದ ಗಡ್ಡೆಯನ್ನು 10 ಗಂಟೆ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ. 15 ವರ್ಷದ ಬಾಲಕಿಯ ಕುತ್ತಿಗೆಯಲ್ಲಿದ್ದ 5 ಕೆ.ಜಿ. ಗಡ್ಡೆಯನ್ನು 14 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ಮೂಲಕ ಸಂಪೂರ್ಣ ತೆಗೆದುಹಾಕಲಾಯಿತು. ಬಳಿಕ ಕುತ್ತಿಗೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಇಬ್ಬರೂ ಆರೋಗ್ಯಯುತರಾಗಿದ್ದಾರೆ ಎಂದರು.

    13 ವರ್ಷದ ಬಾಲಕಿಗೆ ತೊಡೆಯ ಮೂಳೆಯ ಕ್ಯಾನ್ಸರ್‌ಗಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅಲ್ಲಿ ಮೂಳೆಯ ಕ್ಯಾನ್ಸರ್ ಭಾಗವನ್ನು ತೆಗೆದುಹಾಕಿ ಹೆಚ್ಚಿನ ಪ್ರಮಾಣದ ರೇಡಿಯೊಥೆರಪಿಗೆ ಒಳಪಡಿಸಿ ರೋಗಿಗೆ ಮರುಜೋಡಣೆ ಮಾಡಲಾಗಿದೆ. ಅವರು ಕಳೆದ ಒಂದೂವರೆ ವರ್ಷಗಳಿಂದ ವೈದ್ಯರ ನಿಯಮಿತ ತಪಾಸಣೆಯೊಂದಿಗೆ ಉತ್ತಮವಾಗಿದ್ದಾರೆ ಎಂದು ತಿಳಿಸಿದರು. ಉಪವೈದ್ಯಕೀಯ ಅಧೀಕ್ಷಕ ಡಾ. ಪದ್ಮರಾಜ ಹೆಗ್ಡೆ, ಮಣಿಪಾಲ ಸಮಗ್ರ ಆರೈಕೆ ಕೇಂದ್ರದ ಸಂಯೋಜಕ ಡಾ. ನವೀನ್ ಎಸ್. ಸಲಿನ್ಸ್, ಡಾ. ಕಾರ್ತಿಕ್ ಉಡುಪ, ಡಾ. ಸುಮಿತ್ ಎಸ್. ಮಾಲಾಪುರೆ, ಡಾ. ವಾಸುದೇವ ಭಟ್, ಡಾ.ನವಾಜ್ ಉಸ್ಮಾನ್, ಡಾ. ಕೇಶವ ರಾಜನ್, ಸುಧಾಕರ್ ಪ್ರಭು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts