More

    ಕಾಲುವೆ ಎಡ-ಬಲದಲ್ಲಿ ಬರೀ ಗಿಡಗಂಟಿ

    ರಟ್ಟಿಹಳ್ಳಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಮದಗ ಕೆರೆಯ ಎಡ ಮತ್ತು ಬಲದಂಡೆಯ ಕಾಲುವೆಗಳಲ್ಲಿ ಯಥೇಚ್ಛ ಹೂಳು ತುಂಬಿದೆ. ಅಲ್ಲದೆ, ಕಾಲುವೆ ತುಂಬ ಗಿಡಗಂಟಿ ಬೆಳೆದು ನೀರು ಸರಾಗವಾಗಿ ಹರಿಯುತ್ತಿಲ್ಲವಾದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಬ್ರಿಟಿಷರ ಕಾಲದಲ್ಲೇ ಕೆರೆಗೆ ತೂಬು ಅಳವಡಿಸಿ ಎಡ ಮತ್ತು ಬಲದಂಡೆ ಕಾಲುವೆ ನಿರ್ವಿುಸಲಾಗಿದೆ. ಅನೇಕ ವರ್ಷಗಳ ಹಿಂದೆ ಸುಮಾರು 20 ಕಿಮೀನಷ್ಟು ಕಾಲುವೆ ನವೀಕರಣಗೊಳಿಸಲಾಗಿದೆ. ಇದರಿಂದಾಗಿ ಅಂದಾಜು 15 ಸಾವಿರ ಎಕರೆಗೆ ನೀರುಣಿಸಲಾಗುತ್ತಿದೆ. ಈ ಭಾಗದಲ್ಲಿ ಭತ್ತ, ಅಡಕೆ, ಬಾಳೆ, ತೆಂಗು ಪ್ರಮುಖ ಬೆಳೆಯಾಗಿದೆ.

    ಎಡದಂಡೆ ಕಾಲುವೆ ತಾಲೂಕಿನ ಕೋಡಮಗ್ಗಿ, ಯತ್ತಿನಹಳ್ಳಿ, ಬೆಳ್ಳೂರ ಹದ್ದು, ಮಾಸೂರು, ಖಂಡೇಬಾಗೂರು, ರಾಮತೀರ್ಥ ಹಾಗೂ ಚಪ್ಪರದಹಳ್ಳಿ ಭಾಗದಲ್ಲಿ ಹರಿಯುತ್ತಿದೆ. ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿ ಬನ್ನಿಹಟ್ಟಿ, ವೀರಾಪುರ, ತಿಪ್ಪಾಯಿಕೊಪ್ಪ, ಮಾಸೂರು ಹಾಗೂ ಹಿರೇಮೊರಬ ಗ್ರಾಮಗಳಿವೆ. ವಿಪರೀತ ಮಳೆಯಿಂದಾಗಿ ಜಮೀನಿನ ಮಣ್ಣು ನೀರಿನ ಮೂಲಕ ಹರಿದು ಬಂದು ಕಾಲುವೆಯಲ್ಲಿ ಸಂಗ್ರಹಗೊಂಡಿದೆ. ಜತೆಗೆ ನಿರ್ವಹಣೆ ಕೊರತೆಯಿಂದ ಕಾಲುವೆಯುದ್ದಕ್ಕೂ ಗಿಡಗಂಟಿ, ಪೊದೆಗಳು ಬೆಳೆದಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಇದು ಟೇಲೆಂಡ್ ರೈತರಿಗೆ ಸಮಸ್ಯೆ ತಂದೊಡ್ಡಿದೆ.

    ಪಾಳೆ ಪ್ರಕಾರ ನೀರು: ಪ್ರಸ್ತುತ ಕಾಲುವೆ ನೀರು ಅವಲಂಬಿಸಿ ರೈತರು ಹೆಚ್ಚಾಗಿ ಭತ್ತ, ಬಾಳೆ ಬೆಳೆದಿದ್ದಾರೆ. ಭತ್ತಕ್ಕೆ ಅಪಾರ ಪ್ರಮಾಣದ ನೀರು ಬೇಕು. ಆದರೆ, ಕಾಲುವೆಯಲ್ಲಿ ಅಗತ್ಯದಷ್ಟು ನೀರು ಹರಿಯುತ್ತಿಲ್ಲ. ಹೀಗಾಗಿ, ರೈತರು ಪಾಳೆ ಪ್ರಕಾರ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಆದರೂ ಕಾಲುವೆಯ ಕೊನೆ ಭಾಗದ ಕೆಲ ರೈತರಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಭತ್ತದ ಬೆಳೆ ಒಣಗುವ ಪರಿಸ್ಥಿತಿ ಬಂದೊದಗಿದೆ.

    ಕಾಲುವೆ ದುರಸ್ತಿಗೆ ಒತ್ತಾಯ: ಕಾಲುವೆಗಳು ಹಾನಗಲ್ಲ ಏತ ನೀರಾವರಿ ಉಪವಿಭಾಗ ವ್ಯಾಪ್ತಿಗೆ ಒಳಪಡುತ್ತಿವೆ. ಅನೇಕ ವರ್ಷಗಳಿಂದ ಕಾಲುವೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಆಗೊಮ್ಮೆ-ಈಗೊಮ್ಮೆ ಒಂದಷ್ಟು ಸ್ವಚ್ಛತೆ ಕಾರ್ಯ ಕೈಗೊಂಡು ಅಧಿಕಾರಿಗಳು ಕೈತೊಳೆದುಕೊಳ್ಳುತ್ತಾರೆ. ಕಾಲುವೆಯನ್ನು ಸಂಪೂರ್ಣ ನವೀಕರಣಗೊಳಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.

    ಎಡ-ಬಲದಂಡೆ ಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಜೆಸಿಬಿ ಮೂಲಕ ಕಾಲುವೆ ಸ್ವಚ್ಛಗೊಳಿಸುತ್ತಾರೆ. ಇದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದು. ಕಾಲುವೆಗಳ ಸಂಪೂರ್ಣ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು.

    | ವಾಮನ ನಾಲ್ವಡಿ, ಮಾಸೂರು ರೈತ

    ಕಾಲುವೆಗಳ ನವೀಕರಣಕ್ಕೆ ಅಂದಾಜು 50 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಮಾಡಿದ ಕೂಡಲೆ ಕಾಮಗಾರಿ ಪ್ರಾರಂಭಿಸಲಾಗುವುದು.

    | ಶಿವಮೂರ್ತಿ ಜಿ.ಆರ್., ಹಾನಗಲ್ಲ ಏತ ನೀರಾವರಿ ಉಪವಿಭಾಗ ಎಇಇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts