More

    ನ್ಯಾಯದೇವತೆ: ವಿಚ್ಛೇದನ ಆದ ತಕ್ಷಣ ಮರು ಮದುವೆ ಆಗಬಹುದೇ?

    ನ್ಯಾಯದೇವತೆ: ವಿಚ್ಛೇದನ ಆದ ತಕ್ಷಣ ಮರು ಮದುವೆ ಆಗಬಹುದೇ?ಪ್ರಶ್ನೆ: ನಾನು ನನ್ನ ಪತ್ನಿ ವಿರುದ್ಧ ವಿಚ್ಛೇದನಕ್ಕೆ ಪ್ರಕರಣ ಹಾಕಿದ್ದೆ. ಅದು ನನ್ನ ಕಡೆಯೇ ಆಗಿದೆ. ತೀರ್ಪು ಆಗಿ ಒಂದು ತಿಂಗಳಾಗಿದೆ. ನಾನು ಮರುಮದುವೆ ಆಗಬಹುದೇ?

    ಉತ್ತರ: ವಿಚ್ಛೇದನದ ಆದೇಶ ಬಂದ ನಂತರ, ಅಪೀಲು ಹಾಕಲು ಕಾನೂನಿನಲ್ಲಿ ಅವಕಾಶದ ಸಮಯ ಆಗುವವರೆಗೂ ನೀವು ಮರುಮದುವೆ ಆಗುವಂತಿಲ್ಲ. ಆ ಸಮಯವನ್ನು ಲೆಕ್ಕ ಹಾಕುವಾಗ, ನ್ಯಾಯಾಲಯದಿಂದ ಕಾಪಿ ಪಡೆಯಲು ಆಗಿರುವ ಸಮಯವನ್ನು ನಿಮ್ಮ ಎದುರುದಾರರ ಪರವಾಗಿ ಸೇರಿಸಲಾಗುತ್ತದೆ. ಮೇಲಾಗಿ ಅವರು ಅಪೀಲನ್ನು ಹಾಕಿದ್ದಾರೋ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳುವುದೂ ನಿಮ್ಮ ಜವಾಬ್ದಾರಿ ಆಗಿರುತ್ತದೆ. ಆದ್ದರಿಂದ ಆತುರದಿಂದ ಇನ್ನೊಂದು ಮದುವೆ ಆಗಿ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಡಿ.

    ಪ್ರಶ್ನೆ: ನನ್ನ ಪತಿ ಮುಂಬೈಯಲ್ಲಿ ದೊಡ್ಡ ಕೆಲಸದಲ್ಲಿ ಇದ್ದಾರೆ. ಅವರ ಹೆಸರಿನಲ್ಲಿ ತುಂಬಾ ಆಸ್ತಿಗಳು ಇವೆ. ಆದರೆ ನನಗೆ ಅವುಗಳ ವಿವರ ಗೊತ್ತಿಲ್ಲ. ನಮಗೆ ಇಬ್ಬರು ಮಕ್ಕಳು. ಈಗ ನನ್ನನ್ನು ಮತ್ತು ಮಕ್ಕಳನ್ನು ಬಿಟ್ಟು ಅವರು ಮುಂಬೈಗೆ ಹೋಗಿ ಮೂರು ವರ್ಷಗಳಾಗಿವೆ. ನಮಗೆ ಯಾವ ಸಹಾಯವನ್ನೂ ಮಾಡುತ್ತಿಲ್ಲ. ನನ್ನ ತಂದೆ ಸ್ವಲ್ಪ ಸಹಾಯ ಮಾಡುತ್ತಿದ್ದರು. ಈಗ ಅವರೂ ತೀರಿಕೊಂಡಿದ್ದಾರೆ. ಈಗ ನಾನು ಜೀವನಾಂಶ ಕೇಳೋಣ ಎಂದರೆ, ನಾನು ಟೀಚರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಹತ್ತು ಸಾವಿರ ರೂಪಾಯಿ ತಿಂಗಳಿಗೆ ಸಂಬಳ ಇದೆ. ಹೀಗಾಗಿ ಕೇಸು ಸೋಲುತ್ತದೆ ಎಂದು ಎಲ್ಲರೂ ಹೆದರಿಸುತ್ತಿದ್ದಾರೆ. ಮಕ್ಕಳಿಗೆ ತಿಂಗಳಿಗೆ ಇಪ್ಪತ್ತು ಮೂವತ್ತು ಸಾವಿರ ರೂಪಾಯಿ ಖರ್ಚು ಬರುತ್ತದೆ. ನನ್ನ ಗಂಡನ ಆದಾಯದ ಬಗ್ಗೆ ನನಗೆ ಯಾವ ದಾಖಲೆಯೂ ಇಲ್ಲ. ಈಗ ನಾನು ಏನು ಮಾಡುವುದು ಎಂದು ತಿಳಿಸಿ.

    ಉತ್ತರ: ನೀವು ಧೈರ್ಯವಾಗಿ ನಿಮಗೂ ಮತ್ತು ನಿಮ್ಮ ಮಕ್ಕಳಿಗೂ ಜೀವನಾಂಶವನ್ನು ನಿಮ್ಮ ಪತಿ ಕೊಡಬೇಕೆಂದು ಪ್ರಕರಣ ದಾಖಲಿಸಿ. ನಿಮ್ಮ ಸಂಬಳ ಮತ್ತು ನಿಮ್ಮ ಚರ ಸ್ಥಿರ ಆಸ್ತಿಗಳ ವಿವರ ಕೊಡಿ. ನಿಮಗೆ ಮತ್ತು ಮಕ್ಕಳಿಗೆ ತಿಂಗಳಿಗೆ ಎಷ್ಟು ಖರ್ಚಾಗುತ್ತಿದೆ ಎನ್ನುವುದನ್ನು ತಿಳಿಸಿ. ಪ್ರಕರಣದಲ್ಲಿ ನೋಟೀಸು ಜಾರಿ ಆದ ಮೇಲೆ ನಿಮ್ಮ ಪತಿ ಬರುತ್ತಾರೆ. ಇತ್ತೀಚಿನ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಜೀವನಾಂಶದ ಪ್ರಕರಣಗಳಲ್ಲಿ ಎರಡೂ ಕಡೆಯವರೂ ತಮ್ಮ ಆದಾಯ, ಚರ ಸ್ಥಿರ ಸ್ವತ್ತುಗಳ ವಿವರವನ್ನು ಪ್ರಮಾಣ ಪತ್ರದ ಮೂಲಕ ಕೊಡಲೇ ಬೇಕು. ಹೀಗಾಗಿ ನೀವು ಹೆದರಬೇಕಾಗಿಲ್ಲ. ನೀವು ಸಂಪಾದಿಸುತ್ತಿದ್ದರೂ ಸಹ, ನಿಮ್ಮ ಪತಿಯ ಸಂಪಾದನೆ ನಿಮ್ಮ ಸಂಪಾದನೆಗಿಂತ ಬಹಳ ಹೆಚ್ಚಾಗಿರುವುದರಿಂದ, ಮತ್ತು ನಿಮ್ಮ ಮತ್ತು ಮಕ್ಕಳ ಖರ್ಚೂ ಹೆಚ್ಚಾಗಿರುವುದರಿಂದ, ನಿಮ್ಮ ಪತಿಯ ಆದಾಯವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಳ್ಳುತ್ತದೆ. ನಿಮಗೆ ಮತ್ತು ಮಕ್ಕಳಿಗೆ ಜೀವನಾಂಶ ಖಂಡಿತ ಸಿಗುತ್ತದೆ. ನೀವು ಹೆದರಬೇಕಾಗಿಲ್ಲ.

    (ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು.)

    ಅವಳು ಕೊಟ್ಟ ನಾಟಿ ಚಿಕಿತ್ಸೆಗೆ ಮೂರು ತಿಂಗಳ ಮಗುವೇ ಬಲಿಯಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts