More

  ಸಿಎಎ ಪರ ರ‌್ಯಾಲಿ ಹಿನ್ನೆಲೆಯಲ್ಲಿ ಬೂದಿ ಮುಚ್ಚಿದ ಕೆಂಡವಾಗಿದೆ ಕೋಲಾರ

  ಕೋಲಾರ: ಪೌರತ್ವ ತಿದ್ದುಪಡಿ ಕಾಯ್ದೆ ಪರ ಶನಿವಾರ ವಿವಿಧ ಸಂಘಟನೆಳು ಹಮ್ಮಿಕೊಂಡಿದ್ದ ಸಭೆ ವೇಳೆ ಉಂಟಾದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ತಿಳಿಸಿದ್ದಾರೆ.

  ರ‌್ಯಾಲಿಗೆ ಅನುಮತಿ ನೀಡದಿದ್ದರೂ ಗುಂಪೊಂದು ಎಸ್ಸೆನ್ನಾರ್ ಆಸ್ಪತ್ರೆ ವೃತ್ತದಲ್ಲಿ ಕ್ಲಾಕ್ ಟವರ್‌ಗೆ ಹೋಗಲು ಪಟ್ಟು ಹಿಡಿದಿದ್ದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಲಘು ಲಾಠಿ ಪ್ರಹಾರ ಮಾಡಲಾಗಿದೆ. ಜತೆಗೆ ರ‌್ಯಾಲಿಗೆ ಮುಂದಾದ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

  ಕ್ಲಾಕ್ ಟವರ್‌ನಲ್ಲೂ ಅನಧಿಕೃತವಾಗಿ ಗುಂಪು ಸೇರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಲ್ಲದೆ ಪತ್ರಿಕಾ ಛಾಯಾಗ್ರಾಹಕ ಸರ್ವಜ್ಞಮೂರ್ತಿ ಅವರ ಕ್ಯಾಮರಾ ಕಸಿದುಕೊಂಡು ಹಲ್ಲೆಗೆ ಮುಂದಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸುಮೋಟೋ (ಸ್ವಯಂ ಪ್ರೇರಿತ) ದೂರು ದಾಖಲಿಸಿಕೊಳ್ಳಲಾಗಿದೆ. ಎರಡೂ ಘಟನೆಗಳಿಗೆ ಕಾರಣರಾದವರನ್ನು ಗುರುತಿಸುವ ಸಂಬಂಧ ತನಿಖೆ ನಡೆಯುತ್ತಿದ್ದು, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.

  ಬೂದಿ ಮುಚ್ಚಿದ ಕೆಂಡ: ಶನಿವಾರ ಮಧ್ಯಾಹ್ನ ನಡೆದ ಲಾಠಿ ಪ್ರಹಾರದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಂದೋಬಸ್ತ್ ಹೆಚ್ಚಿಸಿದ್ದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಭಾನುವಾರ ಸಹ ಬಂದೋಬಸ್ತ್ ಯಥಾಸ್ಥಿತಿ ಮುಂದುವರಿದಿದ್ದು, ಕ್ಲಾಕ್‌ಟವರ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತ, ಅಮ್ಮನವರಪೇಟೆ, ಬಂಗಾರಪೇಟೆ ವೃತ್ತ ಹಾಗೂ ಡೂಂಲೈಟ್ ವೃತ್ತ, ಸಂಚಾರಿ ಠಾಣೆ ಸೇರಿ ಪ್ರಮುಖ ಸ್ಥಳಗಳಲ್ಲಿ ಡಿಎಆರ್, ಕೆಎಸ್‌ಆರ್‌ಪಿ ತುಕಡಿ ಹಾಗೂ ನಾಗರಿಕ ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಲಾಗಿದೆ.

  ಭಕ್ತರಿಗೆ ಭದ್ರತೆ: ಸೋಮವಾರ ವೈಕುಂಠ ಏಕಾದಶಿ ಪ್ರಯುಕ್ತ ಮಾಲೂರು ತಾಲೂಕಿನ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದರ್ಶನಕ್ಕೆ 1 ಲಕ್ಷಕ್ಕೂ ಅಧಿಕ ಭಕ್ತರು ಬರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಭಕ್ತರ ರಕ್ಷಣೆಗಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೋಲಾರ ನಗರದ ದೇವಾಲಯಗಳ ಬಳಿಯೂ ಪೊಲೀಸ್ ಭದ್ರತೆ ಒದಗಿಸಲಾಗುವುದು ಎಂದು ಕಾರ್ತಿಕ್‌ರೆಡ್ಡಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts