More

    ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ 2.30 ಲಕ್ಷ ಗಿಡ ನೆಡುವ ಯೋಜನೆ

    ನರಸಿಂಹ ನಾಯಕ್ ಬೈಂದೂರು

    ಕಳೆದ ಎರಡು ವರ್ಷದಿಂದ ಕೋವಿಡ್ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ವನಮಹೋತ್ಸವ ಆಚರಣೆ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಸರಳ ಹಾಗೂ ಸಾಂಕೇತಿಕವಾಗಿ ನಡೆಯುತ್ತಿದೆ. ಆದರೆ ಬೈಂದೂರು ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅರಣ್ಯಾಧಿಕಾರಿಗಳ ಹಾಗೂ ಸಿಬ್ಬಂದಿಯ ವಿಶೇಷ ಕಾಳಜಿಯಿಂದಾಗಿ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಬರೋಬ್ಬರಿ 2.30ಲಕ್ಷ ಗಿಡ ನೆಡುವ ಯೋಜನೆ ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ.

    ತಾಲೂಕು ವ್ಯಾಪ್ತಿಯಲ್ಲಿನ ಹಿಲ್‌ಗಾರ್, ಬೋಳ್ಳಂಬಳ್ಳಿ, ರಾಗಿಹಕ್ಲು, ಸರ್ಪನಮನೆ, ಹೊಸೂರು ಹಾಗೂ ಯಳಜಿತ್ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಪ್ಲಾಂಟೆಷನ್‌ಗಳಿದ್ದು, ಅದರಲ್ಲಿ ನಾಗಬೆತ್ತ, ನೇರಳೆ, ಹಲಸು, ಮತ್ತಿ, ಮುರಿಯಾ, ಬೋಗಿ, ತಾರೆ, ವಾಟಡ, ಗುಳ್ಮಾವು, ತೋರ‌್ನುಕ್ಕಿ, ಹಂದಿ ಬೆತ್ತ, ಗುಂಟ ನೇರಳೆ, ಮಹಾಗನಿ, ನಾಗಲಿಂಗ ಪುಷ್ಪ, ನೆಲ್ಲಿ, ಮಾವು, ಬೆಳ್ಪಾಲೆ, ಹೆಬ್ಬಲಸು, ಕೋಡು ನೇರಳೆ, ಕಾಯಿದೂಪ, ಹಿಪ್ಪೆನೇರಳೆ, ನೇತ್ರಹೊನ್ನೆ, ಹೊಳೆದಾಸವಾಳ, ಸಾಗುವಾನಿ, ಗೇರು, ಶ್ರೀಗಂಧ, ಗಾಳಿಮರ ಸೇರಿದಂತೆ ನಾನಾ ಜಾತಿಯ 2,03,460 ಗಿಡಗಳನ್ನು ಬೆಳೆಸಲಾಗಿದೆ. ಇವುಗಳಲ್ಲಿ 11,500 ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದ್ದು, ಉಳಿದ 1,91,960 ಗಿಡಗಳನ್ನು ಅರಣ್ಯ ಪ್ರದೇಶಗಳಲ್ಲಿ ನೆಡಲು ಯೋಜನೆ ರೂಪಿಸಲಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆಯಡಿ ಇಲಾಖಾ ವತಿಯಿಂದ ಕೃಷಿಕರಿಗೆ ಗಿಡ ವಿತರಿಸುವ ಕೆಲಸ ಮಾಡಲಾಗುತ್ತಿದ್ದು, ಕೃಷಿಕರು ಸಂಬಂಧಿತ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರೆ ಅವರ ಬೇಡಿಕೆಗಳಿಗೆ ಅನುಗುಣವಾಗಿ ಅರಣ್ಯ ಇಲಾಖೆ ಗಿಡ ಪೂರೈಸುತ್ತದೆ.

    ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಕೊಂಚ ಹಿನ್ನಡೆಯಾದರೂ ಈ ಬಾರಿ ಅರಣ್ಯ ಇಲಾಖೆಯ ಪರಿಶ್ರಮದಿಂದಾಗಿ ದಾಖಲೆಯ ಗಿಡಗಳನ್ನು ನೆಡುವ ಕಾರ್ಯ ನಡೆಯುತ್ತಿರುವುದು ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಆದರೆ ಕಾರವಾರ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ಕಾಮಗಾರಿಗಾಗಿ ರಸ್ತೆಯ ಇಕ್ಕೆಲಗಳಲ್ಲಿರುವ ಸಾಕಷ್ಟು ಮರಗಳನ್ನು ಕಡಿಯಲಾಗಿದ್ದು, ಈಗಾಗಲೇ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪುನಃ ಹೆದ್ದಾರಿ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುವ ನಿಟ್ಟಿನಲ್ಲಿ ಸಂಬಧಿಂತ ಇಲಾಖೆಗಳು ಯೋಜನೆ ರೂಪಿಸಬೇಕಾಗಿದೆ ಎಂದು ಈ ಭಾಗದ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ವಲಯ ವ್ಯಾಪ್ತಿಯಲ್ಲಿ ಈ ಬಾರಿ 2 ಲಕ್ಷ 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸಿ ಅರಣ್ಯ ಅಭಿವೃದ್ಧಿಪಡಿಸುವ ಬಗ್ಗೆ ಜನರಿಗೆ ಮನವರಿಕೆ ಮಾಡಲು ಸಾಧ್ಯವಾಗದಿದ್ದರೂ, ರಕ್ಷಿತಾರಣ್ಯ ಪ್ರದೇಶಗಳಲ್ಲಿ ದಾಖಲೆಯ ಗಿಡ ನೆಡುವ ಕಾರ್ಯ ಮಾಡಲಾಗುತ್ತದೆ. ಕೃಷಿ ಅರಣ್ಯ ಪ್ರೋತ್ಸಾಹಕ ಯೋಜನೆಯಡಿ ಕೃಷಿಕರ ಬೇಡಿಕೆಗನುಗುಣವಾಗಿ ಇಲಾಖೆಯಿಂದ ಗಿಡಗಳನ್ನು ವಿತರಿಸಲಾಗುತ್ತದೆ.
    ಕಿರಣ್‌ಬಾಬು, ವಲಯ ಅರಣ್ಯಾಧಿಕಾರಿ ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts