More

    ಬೈಂದೂರು ಅಭಿವೃದ್ಧಿಗೆ ಮುನ್ನುಡಿ

    ನರಸಿಂಹ ನಾಯಕ್ ಬೈಂದೂರು

    ಬೈಂದೂರು ಪಾಲಿಗೆ 2020 ವರ್ಷದ ಆರಂಭ ಅಭಿವೃದ್ಧಿ ವೇಗಕ್ಕೆ ಚುರುಕು ನೀಡಿದೆ. ಹೊಸ ವರ್ಷದ ಆರಂಭದಲ್ಲೇ ಮೂರು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಘೋಷಣೆಯಾಗಿದ್ದು ಬಹುವರ್ಷದ ಕನಸು ಸಾಕಾರಗೊಂಡಿದೆ. ಪಡುವರಿ ಹಾಗೂ ಯಡ್ತರೆ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ.
    ಉಡುಪಿ ಜಿಲ್ಲೆಯ ಯಡ್ತರೆ, ಬೈಂದೂರು ಹಾಗೂ ಪಡುವರಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಪರಿವರ್ತನಾ ಪ್ರದೇಶ ಅಂದರೆ ಬೈಂದೂರು ಪಟ್ಟಣ ಪಂಚಾಯಿತಿ ಎಂದು ರಾಜ್ಯ ಸರ್ಕಾರ ನಗರಾಭಿವೃದ್ಧಿ ಸಚಿವಾಲಯ ಡಿ.31ರಂದು ಆದೇಶ ಹೊರಡಿಸಿದ್ದು ಜನವರಿ 2ರಂದು ಅಧಿಕೃತಗೊಂಡಿದೆ. ಒಂದು ತಿಂಗಳ ಕಾಲ ಸಮ್ಮತಿ ಇಲ್ಲದಿದ್ದರೆ ಈ ವ್ಯಾಪ್ತಿಗೆ ಒಳಪಡುವವರು ಆಕ್ಷೇಪಣೆ ಸಲ್ಲಿಸಲು ಅವಕಾಶ ಇದ್ದು ಬಳಿಕ ಸರ್ಕಾರ ಪರಿಶೀಲನೆ ನಡೆಸಿ ಅಂತಿಮಗೊಳಿಸಲಿದೆ.

    ಲಾಭ -ನಷ್ಟಗಳೇನು ?: ಗ್ರಾಮ ಪಂಚಾಯಿತಿಗಳಲ್ಲಿ ಒಂದಿಷ್ಟು ಸೀಮಿತ ಅನುದಾನ ಬಂದರೆ ಪಟ್ಟಣ ಪಂಚಾಯಿತಿಗೆ ಅನುದಾನ ಹೆಚ್ಚುತ್ತದೆ. ರಾಜ್ಯದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಬಹುತೇಕ ಅನುದಾನ ನಗರ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಗಳಿಗೆ ಹೋಗುತ್ತದೆ. ಇದರಿಂದ ಅಭಿವೃದ್ಧಿ ಸಾಧ್ಯತೆ ಹೆಚ್ಚು. ಕಾರ್ಕಳ, ಸಾಲಿಗ್ರಾಮ, ಕುಂದಾಪುರಗಳಲ್ಲಿ ಈಗಾಗಲೇ ಅನುಷ್ಠಾನಗೊಂಡಂತೆ ಕುಡಿಯುವ ನೀರು ಕಡ್ಡಾಯವಾಗಿ ಪೂರೈಸಬೇಕಾದ ಕಾರಣ ವಿಶೇಷ ಅನುದಾನ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಬಹುದು.

    ಈಗಾಗಲೇ ಬಹುತೇಕ ಭೂ-ಪರಿವತರ್ನೆಗೊಂಡಿರುವುದರಿಂದ ದರ ಹೆಚ್ಚಳ ಹಾಗೂ ಉದ್ದಿಮೆ ಹೆಚ್ಚಳಕ್ಕೆ ಮತ್ತು ಹಳ್ಳಿ, ಪಟ್ಟಣ ಕಲ್ಪನೆಯ ಪ್ರದೇಶವಾಗಿ ಬೆಳವಣಿಗೆ ಸಾಧ್ಯ. ದಾರಿದೀಪ ಸೌಲಭ್ಯಕ್ಕೆ ತಿಂಗಳಿಗೆ ಸರಾಸರಿ 3.5 ಲಕ್ಷ ರೂ. ಅನುದಾನ ದೊರೆಯಲಿದೆ. ರಸ್ತೆಗಳ ಅಭಿವೃದ್ಧಿಗೆ 13, 14ನೇ ಹಣಕಾಸು, ಎಸ್‌ಎಫ್‌ಸಿಯಿಂದ ಎರಡು ಕೋಟಿ ರೂಪಾಯಿಗೂ ಅಧಿಕ ಹಣ ದೊರೆಯುತ್ತದೆ. ಈಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಮೂರರಿಂದ ನಾಲ್ಕು ಪೌರ ಕಾರ್ಮಿಕರಿದ್ದಾರೆ. ಮುಂದೆ 20-25 ಕಾರ್ಮಿಕರ ನೇಮಕವಾಗಬೇಕು. ಪಟ್ಟಣ ಪಂಚಾಯಿತಿಗಳಲ್ಲಿ ಬೇಡಿಕೆಗೆ ಅನುಗುಣವಾಗಿ ರಾಜ್ಯ, ಕೇಂದ್ರದಿಂದ ಅನುದಾನ ಪಡೆಯಬಹುದು. ಸಿಆರ್‌ಜಡ್ ನಿಯಮ ಸಡಲಿಕೆಯಾಗಲಿದೆ.
    ಯಡ್ತರೆ ಗ್ರಾಮ ಪಂಚಾಯಿತಿಗೆ ಪ್ರತಿವರ್ಷ 80 ಲಕ್ಷ ರೂ., ಪಡುವರಿ ಗ್ರಾಮ ಪಂಚಾಯಿತಿ ಪ್ರತಿವರ್ಷ 15 ಲಕ್ಷ ರೂ. ಹಾಗೂ ಬೈಂದೂರು ಪಂಚಾಯಿತಿಗೆ ಪ್ರತಿವರ್ಷ 12 ಲಕ್ಷ ರೂ. ಆದಾಯವಿದ್ದು, ಇದು ಇನ್ನೂ ದ್ವಿಗುಣವಾಗಬೇಕಿದೆ. ಬಹುತೇಕ ಗ್ರಾಮೀಣ ಪ್ರದೇಶಗಳನ್ನೊಳಗೊಂಡಿರುವುದು ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಪೂರಕವಾಗಿದ್ದರೂ ಹಲವು ಸವಾಲುಗಳ ಮೂಲಕ ಯಶಸ್ವಿಯಾಗಿಸಬೇಕಿದೆ. ಅಕ್ರಮ ಸಕ್ರಮ ಯೋಜನೆ, ಗ್ರಾಮೀಣ ಕೃಪಾಂಕ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರಗಳು ಕೈತಪ್ಪಲಿವೆ.

    ಕಂದಾಯ ಕಾಯ್ದೆ 94/ಎ ಪ್ರಕಾರ ಅಕ್ರಮ ಸಕ್ರಮ ಹಾಗೂ 94 ಸಿ ತೊಂದರೆಯಿಲ್ಲ. 50 ಸಾವಿರ ಜನಸಂಖ್ಯೆಯ ನಿಯಮ ಇದೆ. ಮಾತ್ರವಲ್ಲದೆ ಕೃಷಿ ಚಟುವಟಿಕೆಗೆ ಆತಂಕ ಇರದು.

    ಗಡಿ ಗ್ರಾಮಗಳಿಗೆ ಆತಂಕಗಳೇನು?: ಪಟ್ಟಣ ಪಂಚಾಯಿತಿಯಾದ ಬಳಿಕ ತೆರಿಗೆ ಹೆಚ್ಚಳವಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ಹೆಚ್ಚಳವಾಗದು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂರು ಕಿ.ಮೀ. ಅಂತರದಲ್ಲಿರುವ ಇತರ ಗ್ರಾಮಗಳಿಗೆ ಇಲ್ಲಿನ ನಿಯಮ ಅನ್ವಯವಾಗುತ್ತದೆ ಎಂಬ ಆತಂಕ ಇದೆ. ಇದರಿಂದ ಶಿರೂರು, ಗೋಳಿಹೊಳೆ ಪಂಚಾಯಿತಿಗಳಿಗೆ ಗ್ರಾಮ ಪಂಚಾಯಿತಿಯ ಸೌಲಭ್ಯ ಕಷ್ಟವಾಗುತ್ತದೆ ಎಂಬ ಅಭಿಪ್ರಾಯವಿದೆ. ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದು ಪಟ್ಟಣ ಪಂಚಾಯಿತಿ ನಿಯಮ ಆಯಾ ವ್ಯಾಪ್ತಿಗೆ ಮಾತ್ರ ಅನ್ವಯವಾಗುತ್ತದೆ ಎನ್ನುತ್ತಾರೆ.

    ಶಾಸಕ, ಸಂಸದರ ಮುತುವರ್ಜಿ: ಹಲವು ವರ್ಷಗಳ ಬೇಡಿಕೆ ಮಧ್ಯೆ ಈ ವರ್ಷ ಘೋಷಣೆಯಾಗುವಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಮುತುವರ್ಜಿ ಇದೆ. ಸರ್ಕಾರದ ಮಟ್ಟದಲ್ಲಿ ಆದೇಶ ಮಾಡಿಸುವುದು ಸುಲಭದ ಮಾತಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಕ್ಷೇತ್ರದ ಸಂಸದನಾಗಿರುವುದು ಮತ್ತು ಬೈಂದೂರಿನಿಂದ ಅತ್ಯಧಿಕ ಮತ ಪಡೆದಿರುವ ಜವಾಬ್ದಾರಿ ಜತೆಗೆ ಶಾಸಕರೂ ಸಂಸದರು ಮತ್ತು ಮುಖ್ಯಮಂತ್ರಿಯವರ ಆಪ್ತರಾಗಿರುವುದು ಈ ಮಹತ್ವದ ಬೆಳವಣಿಗೆಯ ಹಿನ್ನೆಲೆಯಾಗಿದೆ.

    ಹಿಂದೆಯೂ ಪುರಸಭೆಯಾಗಿತ್ತು: 1935ರಿಂದ ಬೈಂದೂರು, ಯಡ್ತರೆ, ಪಡುವರಿ ನಗರ ಪಂಚಾಯಿತಿ ಆಗಿತ್ತು. ಅನಂತರ 1971ರಿಂದ ಬೈಂದೂರು, ಯಡ್ತರೆ, ತಗ್ಗರ್ಸೆ ಸೇರಿ ಪುರಸಭೆಯಾಗಿ ಮಾಡಲಾಯಿತು. ಆ ಕಾಲದಲ್ಲಿ ಬೈಂದೂರು ಪುರಸಭೆ ಅತ್ಯಂತ ಪ್ರಸಿದ್ಧಿಯಾಗಿದ್ದು, ಬಳಿಕ 23 ಜೂನ್ 1997ರಿಂದ ವಿಂಗಡಿಸಿ ಗ್ರಾಮ ಪಂಚಾಯಿತಿಗಳಾಗಿ ಮಾರ್ಪಡಿಸಲಾಯಿತು. ರಾಜಕೀಯ ಲೆಕ್ಕಾಚಾರ ಒಂದೆಡೆಯಾದರೆ ಅಭಿವೃದ್ಧಿಯ ಚಿಂತನೆ ಇನ್ನೊಂದೆಡೆ. ಹೀಗಾಗಿ ಕಳೆದ ಹಲವು ವರ್ಷಗಳಿಂದ ಮತ್ತೆ ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂಬುದು ಒಂದು ಕಡೆಯಾದರೆ, ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣ ಪಂಚಾಯಿತಿ ಮಾಡಬೇಕು ಎಂಬುದು ಮತ್ತೊಂದು ಕಡೆಯಿಂದ ಚರ್ಚೆ ಶುರುವಾಯಿತು. ಇದರ ನಡುವೆ ಬೈಂದೂರು ತಾಲೂಕು ಅಧಿಕೃತ ಘೋಷಣೆಯಾಗಬೇಕು ಎಂಬ ಚಿಂತನೆಯಿಂದ ಜನಪ್ರತಿನಿಧಿಗಳು ಆ ಬಗ್ಗೆ ಗಮನ ಹರಿಸಿ ಮೊದಲು ತಾಲೂಕು ಘೋಷಣೆಗೆ ಆದ್ಯತೆ ನೀಡಿದ್ದರು. ತಾಲೂಕು ಕೇಂದ್ರವಾಗಿ ಎರಡು ವರ್ಷದಲ್ಲೇ ಪಟ್ಟಣ ಪಂಚಾಯಿತಿ ಆಗಿರುವುದು ಬೈಂದೂರು ಜನರ ಪಾಲಿಗೆ ಸಂಭ್ರಮ ಮನೆ ಮಾಡಿದಂತಾಗಿದೆ.

    ಬೈಂದೂರು ಪಟ್ಟಣ ಪಂಚಾಯಿತಿ ಆಗಬೇಕೆಂಬುದು ನನ್ನ ಕನಸಾಗಿತ್ತು. ಈಗಾಗಲೇ 370 ಕೋಟಿ ರೂಪಾಯಿಗೂ ಹೆಚ್ಚು ಅಧಿಕ ಅನುದಾನ ದೊರೆತಿದೆ. ಪಟ್ಟಣ ಪಂಚಾಯಿತಿ ಆದ ಬಳಿಕ ಇನ್ನಷ್ಟು ಅನುದಾನ ತರಲು ಸಾಧ್ಯವಾಗುತ್ತದೆ. ಬೈಂದೂರು ಅಭಿವೃದ್ಧಿಗೆ ಇದರಿಂದ ಇನ್ನಷ್ಟು ವೇಗ ದೊರೆಯಲಿದೆ. ಸಂಸದರು ಹಾಗೂ ಮುಖ್ಯಮಂತ್ರಿ ಬೈಂದೂರು ಜನರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಇದು ಬೈಂದೂರು ಪ್ರಗತಿಯ ಮುನ್ನುಡಿ.

    ಬಿ.ಎಂ.ಸುಕುಮಾರ ಶೆಟ್ಟಿ ಬೈಂದೂರು ಶಾಸಕರು

    ಬೈಂದೂರು, ಯಡ್ತರೆ, ಪಡುವರಿ ಪಂಚಾಯಿತಿಗಳನ್ನು ಸೇರಿಸಿ ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿದ್ದು ಸ್ವಾಗತಾರ್ಹ. ಈ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಂಡ ಸರ್ಕಾರ ಹಾಗೂ ಕಾರಣರಾದ ಸ್ಥಳೀಯ ಶಾಸಕ, ಸಂಸದರಿಗೆ ಅಭಿನಂದನೆಗಳು. ಬೈಂದೂರು ತಾಲೂಕು ರಚನೆಯಾಗಿದ್ದರೂ ಇಂದಿಗೂ ಜನರಿಗೆ ಸರಿಯಾದ ವ್ಯವಸ್ಥೆ ಮತ್ತು ಮೂಲಸೌಕರ್ಯಗಳ ಕೊರತೆಯಾಗುತ್ತಿದೆ. ಇಂಥ ಪರಿಸ್ಥಿತಿ ಈಗ ಘೋಷಣೆಯಾಗಿರುವ ಪಟ್ಟಣ ಪಂಚಾಯಿತಿಗೆ ಆಗಬಾರದು. ಈ ಬಗ್ಗೆ ಶಾಸಕರು ಹೆಚ್ಚಿನ ಗಮನ ಹರಿಸಬೇಕು.

    ರವಿ ಶೆಟ್ಟಿ ಜೆಡಿಎಸ್ ಮುಖಂಡ

    ಮೂರು ಕಿ.ಮೀ. ಅಂತರದಲ್ಲಿರುವ ಊರುಗಳಿಗೆ ಪಟ್ಟಣ ಪಂಚಾಯಿತಿ ನಿಯಮ ಅನ್ವಯವಾಗುವುದಾದರೆ ಶಿರೂರಿಗೆ ಸಮಸ್ಯೆಯಾಗುತ್ತದೆ. ಸೌಲಭ್ಯ ಪಡೆಯುವಾಗ ನಿಯಮ ಹೇರಿದರೆ ಗಡಿಭಾಗದ ಊರುಗಳ ಪ್ರಗತಿ ಕುಂಠಿತವಾಗುತ್ತದೆ. ಹೀಗಾಗಿ ಸ್ಪಷ್ಟತೆ ಬಹಳ ಮುಖ್ಯವಾಗಿದೆ. ಪೂರ್ಣ ಪ್ರಮಾಣದ ಪಟ್ಟಣ ಪಂಚಾಯಿತಿ ಮಾರ್ಪಾಡು ಮಾಡಿ ಶಿರೂರನ್ನು ಸೇರಿಸಿದರೆ ಜನರಿಗೆ ಅನುಕೂಲವಾಗುತ್ತದೆ.

    ಪುಷ್ಪರಾಜ ಶೆಟ್ಟಿ ತಾಪಂ ಸದಸ್ಯರು ಶಿರೂರು ಕ್ಷೇತ್ರ

    ಅಭಿವೃದ್ಧಿ ದೃಷ್ಟಿಯಿಂದ ಮೇಲ್ದರ್ಜೆಗೇರಿರುವುದು ಉತ್ತಮ ಬೆಳವಣಿಗೆ. ಇದರಿಂದ ಆಡಳಿತ ಸುಧಾರಣೆ ಹಾಗೂ ಸರ್ಕಾರಕ್ಕೆ ಉತ್ತಮ ಸೇವೆ ನೀಡಲು ಸಾಧ್ಯ. ತಾಲೂಕು ಘೋಷಣೆಯಾಗಿರುವ ಕಾರಣ ಪಟ್ಟಣ ಪಂಚಾಯಿತಿ ಆದೇಶ ಜನರ ಆಶೋತ್ತರ ಈಡೇರಲು ಪರ್ವಕಾಲ ಹಾಗೂ ಸ್ವಾಗತಾರ್ಹ.

    ಎನ್. ಭಾರತಿ ಕಾರ್ಯನಿರ್ವಹಣಾಧಿಕಾರಿ, ಬೈಂದೂರು ತಾಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts