More

    ಮಾಡರ್ನ್ ಪ್ರೀತಿಗೀತಿ ಇತ್ಯಾದಿ…: ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ: ಬೈಟು ಲವ್
    • ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್
    • ನಿರ್ದೇಶನ: ಹರಿ ಸಂತೋಷ್
    • ತಾರಾಗಣ: ಧನ್ವೀರ್, ಶ್ರೀಲೀಲಾ, ಅಚ್ಯುತ್ ಕುಮಾರ್, ರಂಗಾಯಣ ರಘು, ಶಿವರಾಜ್ ಕೆ.ಆರ್.ಪೇಟೆ ಮುಂತಾದವರು

    | ಮಂಜು ಕೊಟಗುಣಸಿ

    ಕಾಲ ಮೊದಲಿನಂತಿಲ್ಲ. ಬದಲಾಗಿದೆ. ಯುವಕ-ಯುವತಿಯರು ಲಿವ್​ಇನ್ ರಿಲೇಷನ್​ಶಿಪ್​ನತ್ತ ಒಲವು ಬೆಳೆಸಿಕೊಂಡಿದ್ದಾರೆ. ಹೊಂದಾಣಿಕೆ ಆದರೆ ಮದುವೆ, ಇಲ್ಲದಿದ್ದರೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ ಎಂಬ ಮನಸ್ಥಿತಿಯಲ್ಲಿದ್ದಾರೆ. ಈ ಪ್ರಸ್ತುತತೆಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೊಂದಿಷ್ಟು ಸಂಬಂಧಗಳೆಂಬ ಮಸಾಲೆ ಬೆರೆಸಿ ‘ಬೈಟು ಲವ್’ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹರಿ ಸಂತೋಷ್. ಲಿವ್​ಇನ್ ಸಂಬಂಧ ಹಿನ್ನೆಲೆಯಲ್ಲಿಯೇ ಹೊಸ ಪ್ರಯೋಗ ಮಾಡಿದ್ದಾರೆ.

    ಜೀವನದಲ್ಲಿ ಪ್ರತಿ ಸಂಬಂಧಗಳೂ ಮುಖ್ಯ. ಆ ಸಮಯಕ್ಕೆ ಬೇಡ ಎನಿಸಿದರೂ, ಮರೆಯಾದ ಮೇಲೆ ಅದು ಮತ್ತೆ ಮತ್ತೆ ಬೇಕೆನಿಸುತ್ತದೆ. ‘ಬೈಟು ಲವ್’ ಚಿತ್ರದ್ದೂ ಅದೇ ಕಥೆ. ಪ್ರೀತಿಸಿ ಇನ್ನೇನು ಮದುವೆಗೆ ಅಣಿಯಾಗಬೇಕೆಂದುಕೊಳ್ಳುವ ಜೋಡಿ, ತಮ್ಮ ಆಪ್ತವಲಯದ ಕೌಟುಂಬಿಕ ಕಲಹಗಳನ್ನು ಕಂಡು ಮದುವೆಯೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತದೆ. ಮನೆಯಲ್ಲಿ ಹೇಳದೇ, ಮದುವೆಯಾಗದೇ ಮಗುವೊಂದನ್ನು ದತ್ತು ಪಡೆದು ಅದರ ಪಾಲನೆ ಪೋಷಣೆಯಲ್ಲಿಯೇ ಕಾಲಕಳೆಯುತ್ತದೆ. ಸಂಸಾರದ ಏರಿಳಿತದ ಅನುಭವವೂ ಆಗುತ್ತದೆ. ಕೊನೆಗೆ ಆ ಸಂಸಾರದ ನೊಗ ಹೊರಲು ಅವರು ಯೋಗ್ಯರಾಗುತ್ತಾರಾ? ಅದೇ ಚಿತ್ರದ ಕ್ಲೈಮ್ಯಾಕ್ಸ್.

    ಶೀರ್ಷಿಕೆ ಹೇಳುವಂತೆ ಇಲ್ಲಿ ಹೆಚ್ಚೇನೂ ಪ್ರೀತಿ, ಪ್ರೇಮದ ಪಾಠವಿಲ್ಲ. ಸುತ್ತಾಟ, ಮುದ್ದು, ಪ್ರೇಮವೈಫಲ್ಯ ಅದ್ಯಾವುದೂ ಕಾಣಿಸುವುದಿಲ್ಲ. ಬದಲಿಗೆ ಮಿಡಲ್ ಕ್ಲಾಸ್ ನಾಯಕ-ನಾಯಕಿಯ ಕೋಪ, ಸ್ವಾಭಿಮಾನ, ಹತಾಶೆ, ಪ್ರಸ್ತುತ ಕಾಲಮಾನದ ಯುವಕರ ಮನಸ್ಥಿತಿ … ಹೀಗೆ ಇದೆಲ್ಲವನ್ನು ತೋರಿಸುತ್ತ ಸಂಸಾರ ಎಂದರೇನು? ಅದನ್ನು ನಿಭಾಯಿಸುವುದೆಷ್ಟು ಕಷ್ಟ ಎಂಬ ವಿಚಾರವನ್ನು ನಿರ್ದೇಶಕರು ಹೇಳಿದ್ದಾರೆ. ಹಿರಿಯರು, ಅನುಭವಸ್ಥರ ಬಾಯಿಂದ ಸುಖ ಸಂಸಾರದ ನೀತಿ ಪಾಠವನ್ನೂ ಇಲ್ಲಿ ಆಗಾಗ ಕೇಳಬಹುದು.

    ಇಡೀ ಸಿನಿಮಾದಲ್ಲಿ ನಾಯಕ ಧನ್ವಿರ್ ಮತ್ತು ಶ್ರೀಲೀಲಾ ಅವರದ್ದು ಮುದ್ದಾದ ಜೋಡಿ. ನಟನೆ ವಿಚಾರದಲ್ಲಿ ಧನ್ವೀರ್ ಮಾಗಿದರೆ, ಅವರಿಗಿಂತ ಒಂದು ಕೈ ಮೇಲೆಯೇ ಶ್ರೀಲೀಲಾ ಕಾಣಿಸುತ್ತಾರೆ. ಭಾವುಕ ಸನ್ನಿವೇಶಗಳಲ್ಲಿ ಅವರ ಆಂಗಿಕ ಅಭಿನಯ ಪೂರ್ಣಾಂಕ ಗಿಟ್ಟಿಸಿಕೊಳ್ಳುತ್ತದೆ. ಮುದ್ದು ಪುಟಾಣಿ ಸಹ ನೈಜ ಅಭಿನಯ ನೀಡಿದೆ. ಪೋಷಕ ಪಾತ್ರಗಳಲ್ಲಿ ಬಂದು ಹೋಗುವ ಅಚ್ಯುತ್ ಕುಮಾರ್, ರಂಗಾಯಣ ರಘು ಗಾಢವಾಗಿಯೇ ಪರಿಣಾಮ ಬೀರುತ್ತಾರೆ. ಸಾಧು ಕೋಕಿಲ, ಜಹಾಂಗೀರ್ ಅವರಿಂದ ನಗಿಸುವ ಪ್ರಯತ್ನವಾಗಿದೆ. ಹಾಡುಗಳ ವಿಚಾರದಲ್ಲಿ ಅಜನೀಶ್ ಲೋಕನಾಥ್ ಕಡೆಯಿಂದ ನಿರೀಕ್ಷಿತ ಸರಕು ಸಂದಾಯವಾಗಿಲ್ಲ. ಮಹೇನ್ ಸಿಂಹ ಕಲರ್​ಫುಲ್ ಆಗಿಯೇ ಎಲ್ಲರನ್ನು ಸೆರೆಹಿಡಿದಿದ್ದಾರೆ.

    ಅಪ್ಪು ಜನ್ಮದಿನದಂದು ‘ಜೇಮ್ಸ್​’ ಉತ್ಸವ; 31 ಕಟೌಟ್ಸ್​, ಹೆಲಿಕಾಪ್ಟರ್​​ನಲ್ಲಿ ಹೂಮಳೆ; ಇನ್ನೇನಿರಲಿದೆ ಅಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts