More

    ಬೆಳಗಾವಿ ಉಪಚುನಾವಣೆ ಟಿಕೆಟ್ ಯಾರಿಗೆ?

    ಬೆಳಗಾವಿ: ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿರುವ ಬೆಳಗಾವಿ ಲೋಕಸಭಾ ಉಪ ಚುನಾವಣೆ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇಂದ್ರ ಚುನಾವಣೆ ಆಯೋಗವು ಶೀಘ್ರ ಚುನಾವಣೆ ದಿನಾಂಕ ಘೋಷಣೆ ಮಾಡಲಿದೆ. ಆದರೆ, ಈವರೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿಲ್ಲ. ಹಾಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಟಿಕೆಟ್ ಯಾರಿಗೆ ನೀಡಲಿವೆ ಎಂಬ ಕುತೂಹಲ ಮೂಡಿದ್ದು, ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

    ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷದಲ್ಲಿ ಆಕಾಂಕ್ಷಿಗಳ ದಂಡು ದಿನದಿಂದ ದಿನಕ್ಕೆ ಏರುತ್ತಿದ್ದು, ಈ ಬಾರಿ ಬಿಜೆಪಿ ಹೊಸಬರಿಗೆ ಅವಕಾಶ ನೀಡಲಿದೆಯೋ ಅಥವಾ ಹಳೆಯ ಮುಖಗಳಿಗೆ ಟಿಕೆಟ್ ನೀಡಲಿದೆಯೇ ಎಂಬುದು ನಿಗೂಢವಾಗಿದೆ.

    ಬಿಜೆಪಿಯಲ್ಲಿ ಆಕಾಂಕ್ಷಿಗಳ ದಂಡು: ದಿ.ಸುರೇಶ ಅಂಗಡಿ ಅವರ ಪುತ್ರಿ ಶ್ರದ್ಧಾ ಅಂಗಡಿ(ಶೆಟ್ಟರ್), ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬಿಜೆಪಿ ಹಿರಿಯ ಮುಖಂಡ ಹಾಗೂ ಸಿಎಂ ಆಪ್ತ ಶಂಕರಗೌಡ ಪಾಟೀಲ, ಮಾಜಿ ಸಂಸದರಾದ ರಮೇಶ ಕತ್ತಿ, ಅಮರಸಿಂಹ ಪಾಟೀಲ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಸಂಜಯ ಪಾಟೀಲ, ವೈದ್ಯ ಸೋನವಾಲ್ಕರ್, ನ್ಯಾಯವಾದಿ ಎಂ.ಬಿ.ಝಿರಲಿ, ಕುರುಬ ಸಮುದಾಯದ ಮುಖಂಡ ವಸಂತ ದಳವಾಯಿ, ರಾಮದುರ್ಗ ಜಿಪಂ ಸದಸ್ಯ ರಮೇಶ ದೇಶಾಪಾಂಡೆ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಅವರನ್ನು ಹೊರತುಪಡಿಸಿ ಇನ್ನೂ ಕೆಲವರು ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಕಾಂಗ್ರೆಸ್‌ನ ಅಭ್ಯರ್ಥಿ ಹುಡುಕಾಟಕ್ಕೆ ಹರಸಾಹಸ: 73 ವರ್ಷ ದೇಶವನ್ನಾಳಿರುವ ಕಾಂಗ್ರೆಸ್ ಪಕ್ಷಕ್ಕೆ ಉಪ ಚುನಾವಣೆಗೆ ಪ್ರಬಲ ಅಭ್ಯರ್ಥಿ ಹುಡುಕಾಡುವ ದಯನೀಯ ಪರಿಸ್ಥಿತಿ ಎದುರಾಗಿದೆ. ಒಂದು ಕಾಲಕ್ಕೆ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಸಾಕು ಎನ್ನುವಂತಿತ್ತು. ಆದರೆ, ಈಗ ಕಾಲ ಬದಲಾದ ನಂತರ ಕಾಂಗ್ರೆಸ್ ಟಿಕೆಟ್‌ಗಾಗಿ ಅಭ್ಯರ್ಥಿಗಳ ಶೋಧಕ್ಕಾಗಿ ಹರಸಾಹಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಾಂಗ್ರೆಸ್ ಮೂಲಗಳ ಪ್ರಕಾರ ಸವದತ್ತಿ, ರಾಮದುರ್ಗ ಹಾಗೂ ಗೋಕಾಕ ತಾಲೂಕುಗಳಲ್ಲಿ ಹಿಡಿತ ಹೊಂದಿರುವ ಕೆಪಿಸಿಸಿ ರಾಜ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಬೇಕು ಎಂಬ ನಿಲುವನ್ನು ಅನೇಕ ಮಾಜಿ ಶಾಸಕರು, ಪಕ್ಷದ ಹಾಲಿ ಶಾಸಕರು ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಸೇರಿ ಇನ್ನೂ ಅನೇಕರು ತೆರೆಮರೆಯಲ್ಲಿ ಟಿಕೆಟ್ ಪಡೆಯುವುದಕ್ಕಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts