More

    ಶಿಮುಲ್​ನಿಂದ ಹಾಲು ಉತ್ಪಾದಕರಿಗೆ ಸಂಕ್ರಾಂತಿ ಗಿಫ್ಟ್

    ಶಿವಮೊಗ್ಗ: ಶಿಮುಲ್ (ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ) ಸಂಕ್ರಾತಿ ಸಮಯದಲ್ಲಿ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದೆ. ಜ.13ರಿಂದಲೇ ಪ್ರತಿ ಲೀಟರ್ ಹಾಲು ಖರೀದಿಗೆ 2.75 ರೂ. ಹೆಚ್ಚುವರಿ ನೀಡಲು ತೀರ್ವನಿಸಿದೆ. ಆದರೆ ನಂದಿನಿ ಹಾಲಿನ ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

    ಈಗ ಪ್ರತಿ ಲೀಟರ್​ಗೆ 22.50 ರೂ. ನೀಡಲಾಗುತ್ತಿದ್ದು, 2.75 ರೂ. ಹೆಚ್ಚಳದಿಂದ ಖರೀದಿ ದರ 25.25 ರೂ. ಆಗಲಿದೆ. ಸರ್ಕಾರದಿಂದ ಪ್ರತಿ ಲೀಟರ್​ಗೆ 5 ರೂ. ಪೋತ್ಸಾಹ ಧನ ಸಿಗಲಿದ್ದು, ಉತ್ಪಾದಕರಿಗೆ ಪ್ರತಿ ಲೀಟರ್​ಗೆ ಒಟ್ಟು 30.25 ರೂ. ಸಿಗಲಿದೆ.

    ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ಕಳೆದ ವರ್ಷ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್​ಗೆ 7.70ರೂ. ಹೆಚ್ಚಳ ಮಾಡಿತ್ತು. ಆದರೆ ಕರೊನಾ ಅವಧಿಯಲ್ಲಿ ಹಾಲಿನ ಬೇಡಿಕೆ ಕುಸಿದ ಕಾರಣ 7 ರೂ. ಕಡಿತ ಮಾಡಲಾಗಿತ್ತು. ಇದೀಗ ಕ್ರಮೇಣ ಹಾಲು ಮಾರಾಟದಲ್ಲಿ ಚೇತರಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ 2.75 ರೂ. ಹೆಚ್ಚಳಕ್ಕೆ ತೀರ್ವನಿಸಲಾಗಿದೆ.

    ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸುಮಾರು 90 ಸಾವಿರ ಹಾಲು ಉತ್ಪಾದಕರು ಶಿಮುಲ್​ಗೆ ಹಾಲು ಪೂರೈಕೆ ಮಾಡುತ್ತಿದ್ದಾರೆ. ಪ್ರತಿದಿನ ಅಂದಾಜು 5.30 ಲಕ್ಷ ಲೀ. ಹಾಲು ಒಕ್ಕೂಟಕ್ಕೆ ಬರುತ್ತಿದೆ. ಪ್ರತಿದಿನ 3 ಲಕ್ಷ ಲೀಟರ್ ಹಾಲು ನೇರವಾಗಿ ಗ್ರಾಹಕರನ್ನು ತಲುಪುತ್ತಿದೆ. ಉಳಿದ ಹಾಲನ್ನು ಹಾಲಿನ ಪುಡಿ ಉತ್ಪಾದನಾ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಕರೊನಾ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಶಿಮುಲ್ ವ್ಯವಹಾರದಲ್ಲೂ ಈಗ ಚೇತರಿಕೆಯಾಗಿದೆ.

    ಕಳೆದ ವರ್ಷ ಸರ್ವ ಸದಸ್ಯರ ಸಭೆಯಲ್ಲಿ ಭರವಸೆ ನೀಡಿದಂತೆ ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ನೀಡಿದ್ದೆವು. ಕರೊನಾ ಕಾರಣದಿಂದ ಖರೀದಿ ದರ ಇಳಿಸುವುದು ಅನಿವಾರ್ಯವಾಗಿತ್ತು. ಈ ವರ್ಷ ಸರ್ವ ಸದಸ್ಯರ ಸಭೆಯಲ್ಲಿ ವಾಗ್ದಾನ ಮಾಡಿದಂತೆ ಈಗ ಮತ್ತೆ ಖರೀದಿ ದರ ಹೆಚ್ಚಿಸಿದ್ದೇವೆ. ಮುಂದಿನ ದಿನಗಳು ಆಶಾದಾಯಕವಾಗುವ ವಿಶ್ವಾಸವಿದೆ.

    | ಡಿ.ಆನಂದ್, ಶಿಮುಲ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts