More

    ಮಣಿಪಾಲದಲ್ಲಿ ಬಟರ್‌ಫ್ಲೈ ಪಾರ್ಕ್, ತಿಮ್ಮಕ್ಕ ಟ್ರೀಪಾರ್ಕ್‌ಗೆ ಹೊಸ ರೂಪ

    – ಅವಿನ್ ಶೆಟ್ಟಿ ಉಡುಪಿ

    ಮಣಿಪಾಲ ಸಮೀಪದ 80 ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ನಿರ್ಮಿಸಲಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ(ಟ್ರೀ ಪಾರ್ಕ್)ಕ್ಕೆ ಹೊಸ ರೂಪ ಪಡೆಯಲಿದೆ. ಇಲ್ಲಿ ಬಟರ್‌ಫ್ಲೈ ಪಾರ್ಕ್ ನಿರ್ಮಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ಈ ಟ್ರೀ ಪಾರ್ಕ್ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದು, ಉಡುಪಿ, ಮಣಿಪಾಲ ನಾಗರಿಕರ ನೆಚ್ಚಿನ ತಾಣವಾಗಿ ರೂಪುಗೊಳ್ಳುತ್ತಿದೆ.

    ಈ ಟ್ರೀಪಾರ್ಕ್‌ನಲ್ಲಿ ಚಿಟ್ಟೆ ಪಾರ್ಕ್ ನಿರ್ಮಿಸಿ ಇನ್ನಷ್ಟು ಆಕರ್ಷಕಗೊಳಿಸಲು ಅರಣ್ಯ ಇಲಾಖೆ ಚಿಂತಿಸಿದೆ. ಒಂದಿಷ್ಟು ಜಾಗದಲ್ಲಿ ಚಿಟ್ಟೆಗಳಿಗೆ ಪೂರಕವಾದ ಸಸ್ಯವರ್ಗವನ್ನು ನೆಟ್ಟು ಪೋಷಿಸುವುದಕ್ಕೆ ಆದ್ಯತೆ. ಉಡುಪಿಯಲ್ಲಿ ಬ್ಲೂ ಮೋರ್ಮನ್, ರಾಜ್ಯ ಚಿಟ್ಟೆ ಖ್ಯಾತಿಯ ಸದರ್ನ್ ಬರ್ಡ್ ವಿಂಗ್, ಮಲಬಾರ್ ಬ್ಯಾಂಡೆಡ್ ಪಿಕಾಕ್, ಕಾಮನ್‌ರೋಸ್, ಬ್ಲೂ ಟೈಗರ್, ಕ್ಲಿಪ್ಪರ್‌ನಂತ ಆಕರ್ಷಕ ಚಿಟ್ಟೆಗಳಿವೆ.

    ಸಾಮಾನ್ಯ ವರ್ಗದಲ್ಲಿ 100ಕ್ಕೂ ಅನೇಕ ಪ್ರಬೇಧದ ಚಿಟ್ಟೆಗಳಿವೆ. ಇದಕ್ಕೆ ಪೂರಕವಾಗಿ ವಿವಿಧ ರೀತಿಯ ಸಸ್ಯಗಳು, ಹೂವಿನ ಗಿಡಗಳನ್ನು ನೆಡಬೇಕು. ಇದಕ್ಕಾಗಿ ಪಾರ್ಕ್ ಒಳಗೆ ಸಣ್ಣ ಕೆರೆಯನ್ನು ನಿರ್ಮಿಸಲಾಗುತ್ತದೆ. ಇದಕ್ಕೆಲ್ಲ ಹಣ ಇಲಾಖೆಯಿಂದ ಅನುದಾನ ಬಿಡುಗಡೆ ನಿರೀಕ್ಷೆ ಇದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ತಿಮ್ಮಕ್ಕನವರ ಕಲಾಕೃತಿ: ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ(ಟ್ರೀ ಪಾರ್ಕ್)ಕ್ಕೆ ಹೊಸ ರೂಪ ನೀಡಲಾಗಿದ್ದು, ಪ್ರವೇಶ ದ್ವಾರದಲ್ಲಿ ಸಾಲುಮರದ ತಿಮ್ಮಕ್ಕ ಅವರ ಬೃಹತ್ ಆಕಾರದ ಕಲಾಕೃತಿ ಅನಾವರಣಗೊಳಿಸಲಾಗಿದೆ. ತಿಮ್ಮಕ್ಕ ಅವರ ಫೈಬರ್ ಗ್ಲಾಸ್‌ನ ಕಲಾಕೃತಿಯು ಪಾರ್ಕ್‌ಗೆ ಹೊಸ ಲುಕ್ ನೀಡುವುದರೊಂದಿಗೆ ಎಲ್ಲರ ಗಮನ ಸೆಳೆಯುತ್ತಿದೆ. ಕಲಾಕೃತಿಯನ್ನು ಕಲಾವಿದ ಪುರುಷೋತ್ತಮ ಅಡ್ವೆ ನೇತೃತ್ವದ ಮೂವರು ಕಲಾವಿದರು ಎರಡು ವಾರದಲ್ಲಿ ತಯಾರಿಸಿದ್ದಾರೆ. ಕಲಾಕೃತಿ ಏಳು ಅಡಿ ಎತ್ತರ ಹಾಗೂ ಆರು ಅಡಿ ಅಗಲ ಹೊಂದಿದೆ ಎಂದು ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ತಿಳಿಸಿದ್ದಾರೆ.

    ಬಿದಿರು ಪಾರ್ಕ್ ಯೋಜನೆ: ಅರಣ್ಯ ಇಲಾಖೆ ಕುಂದಾಪುರ ವಿಭಾಗ ಉಡುಪಿ ವಲಯದ ವತಿಯಿಂದ 2018ರ ಫೆ.24ರಂದು ಈ ಟ್ರೀ ಪಾರ್ಕ್ ಉದ್ಘಾಟನೆಗೊಂಡಿತ್ತು. 10 ಎಕರೆ ಪ್ರದೇಶ ಹೊಂದಿರುವ ಈ ಪಾರ್ಕ್‌ನಲ್ಲಿ ವಾಕಿಂಗ್ ಟ್ರಾೃಕ್, ಪರಿಸರ ಹಾಗೂ ಪ್ರಾಣಿ, ಪಕ್ಷಿಗಳ ಮಾಹಿತಿ ಫಲಕವಿದೆ. ಮರದ ಹಟ್, ಜೋಕಾಲಿ, ಯಕ್ಷಗಾನ, ಹುಲಿ ಕುಣಿತ, ಭೂತ ಕೋಲ, ಕಂಬಳ, ಎತ್ತಿನಗಾಡಿಗಳ ಕಲಾಕೃತಿ ನಿರ್ಮಿಸಲಾಗಿದೆ. ಟ್ರೀ ಪಾರ್ಕ್‌ನಲ್ಲಿ ಈ ವರ್ಷ ಹೊಸದಾಗಿ ಬಿದಿರು ಪಾರ್ಕ್ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ಪಾರ್ಕ್ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

    ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗುತ್ತಿರುವ ಟ್ರೀ ಪಾರ್ಕ್‌ನಲ್ಲಿ ಹೊಸದಾಗಿ ಚಿಟ್ಟೆ ಮತ್ತು ಬ್ಯಾಂಬು ಪಾರ್ಕ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕೆ ಅನುದಾನ ಬಿಡುಗಡೆಯಾಗಬೇಕಿದೆ. ಲಾಕ್‌ಡೌನ್‌ನಿಂದಾಗಿ ಮಾಲ್‌ಗಳಲ್ಲಿ ಮಕ್ಕಳ ಪ್ರವೇಶಕ್ಕೆ ನಿರ್ಬಂಧ ಮತ್ತು ಚಿತ್ರಮಂದಿರಗಳು ಇನ್ನೂ ತೆರೆಯದ ಕಾರಣ, ಟ್ರೀ ಪಾರ್ಕ್‌ಗೆ ಹೆಚ್ಚಿನ ಜನ ಬಂದು ಸಮಯ ಕಳೆಯುತ್ತಿದ್ದಾರೆ. ಆರಂಭಕ್ಕಿಂತ ಈಗ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
    – ಕ್ಲಿಫರ್ಡ್ ಲೋಬೊ, ಅರಣ್ಯಾಧಿಕಾರಿ, ಉಡುಪಿ ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts