More

    ಧಾರವಾಡ ಜಿಲ್ಲೆಯಲ್ಲೂ ಬಸ್ ಸಂಚಾರ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಗಳ ಬಸ್​ಗಳ ಓಡಾಟಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸೋಮವಾರ (ಜೂ. 21) ಬೆಳಗ್ಗೆ 6 ಗಂಟೆಯಿಂದ ಪ್ರಯಾಣಿಕರ ಬೇಡಿಕೆ ಹಾಗೂ ಆದ್ಯತೆ ಮೇರೆಗೆ ಬಸ್ ಸಂಚಾರ ಆರಂಭಿಸಲಿದೆ. ಶೇ. 50ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ.
    ಆನ್​ಲಾಕ್-2.0 ಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಗಳು ಭಾನುವಾರ ಸಂಜೆ ವೇಳೆ ಬಗೆಹರಿದ ಪರಿಣಾಮ ಧಾರವಾಡ ಜಿಲ್ಲೆಯಲ್ಲೂ ಬಸ್​ಗಳ ಸಂಚಾರಕ್ಕೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗಿದೆ. ‘ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ನಿಬಂಧನೆಗಳನ್ನು ವಿಧಿಸಿ ಬಸ್​ಗಳ ಕಾರ್ಯಾಚರಣೆಗೆ ಅನುಮತಿ ನೀಡಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
    ಪ್ರಯಾಣಿಕರು ಕೋವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಬಸ್​ನಲ್ಲಿ ಮೂರು ಆಸನಗಳಲ್ಲಿ ಇಬ್ಬರಿಗೆ ಹಾಗೂ ಎರಡು ಆಸನಗಳಲ್ಲಿ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶವಿರುತ್ತದೆ. ಬಸ್​ಗಳ ಕಾರ್ಯಾಚರಣೆಗೆ ವಾರಾಂತ್ಯದ ಕರ್ಫ್ಯೂ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
    ಹಳೇ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಇಲ್ಲ: ಈ ಮೊದಲು ಹಳೇ ಬಸ್ ನಿಲ್ದಾಣದಿಂದ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುತ್ತಿದ್ದ ಎಲ್ಲ ಬಸ್​ಗಳ ಕಾರ್ಯಾಚರಣೆಯನ್ನು ಹೊಸೂರು ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಕುಂದಗೋಳ, ಸಂಶಿ, ಶಿರಹಟ್ಟಿ, ಹುಲಗೂರ, ಕಲಘಟಗಿ, ತಡಸ, ನವಲಗುಂದ, ಅಣ್ಣಿಗೇರಿ ಮತ್ತಿತರ ಗ್ರಾಮೀಣ ಪ್ರದೇಶಗಳಿಗೆ ಹೋಗುವ ಬಸ್​ಗಳು ಹೊಸೂರು ಬಸ್ ನಿಲ್ದಾಣದಿಂದ ಸಂಚರಿಸಲಿವೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
    ಅಂತರ್ ರಾಜ್ಯ ಪ್ರಯಾಣ ಇಲ್ಲ: ಲಾಕ್​ಡೌನ್ ಪೂರ್ವದಲ್ಲಿ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮುಂತಾದ ರಾಜ್ಯಗಳಿಗೆ ಹುಬ್ಬಳ್ಳಿ ಯಿಂದ 65 ಬಸ್​ಗಳು ಸಂಚರಿಸುತ್ತಿದ್ದವು. ಆದರೆ, ನೆರೆ ರಾಜ್ಯಗಳಿಗೆ ಬಸ್ ಸಂಚಾರಕ್ಕೆ ಸರ್ಕಾರ ಅನುಮತಿಸಿಲ್ಲ. ಸರ್ಕಾರದಿಂದ ಅನುಮತಿ ಬಂದ ಬಳಿಕ ಅಂತರ್ ರಾಜ್ಯ ಬಸ್ ಸಂಚಾರ ಆರಂಭಿಸುವ ಬಗ್ಗೆ ತೀರ್ವನಿಸಲಾಗುತ್ತದೆ. ಮೊದಲ ಹಂತದಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣ, ನವಲಗುಂದ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ, ತಡಸ ಮತ್ತಿತರ ಪ್ರಮುಖ ಬಸ್ ನಿಲ್ದಾಣಗಳಿಂದ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಮತ್ತು ಇತರ ಪ್ರಮುಖ ಸ್ಥಳಗಳಿಗೆ ಬಸ್ಸುಗಳು ಸಂಚರಿಸಲಿವೆ. ನೆರೆಯ ಜಿಲ್ಲೆಗಳ ಪ್ರಮುಖ ಸ್ಥಳಗಳಾದ ಗದಗ, ಇಳಕಲ್ಲ, ಬಾಗಲಕೋಟೆ, ವಿಜಯಪುರ, ಹಾವೇರಿ, ದಾವಣಗೆರೆ, ಶಿರಸಿ, ಬೆಳಗಾವಿ ಮತ್ತಿತರ ಸ್ಥಳಗಳಿಗೆ ಬಸ್ ಸಂಚಾರ ಆರಂಭಿಸಲಾಗುತ್ತದೆ. ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ದೂರದ ಊರುಗಳಿಗೆ ಬಸ್ ಸಂಚಾರ ವಿಸ್ತರಿಸಲಾಗುವುದು ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts