More

    ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ, ಅಶ್ವಿನ್, ಪಂತ್‌ಗೆ ದಾಖಲೆ ನಿರೀಕ್ಷೆ

    ಸೆಂಚುರಿಯನ್: ಚೊಚ್ಚಲ ಟೆಸ್ಟ್ ಸರಣಿ ಗೆಲುವಿನ ಮಹತ್ವಾಕಾಂಕ್ಷೆಯೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದ ಆಟಗಾರರು ಕೆಲ ವೈಯಕ್ತಿಕ ದಾಖಲೆಗಳನ್ನು ಬರೆಯುವ ಹಂಬಲದಲ್ಲಿದ್ದಾರೆ. ಭಾನುವಾರದಿಂದ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ, ಸ್ಪಿನ್ನರ್ ಆರ್. ಅಶ್ವಿನ್, ವೇಗಿಗಳಾದ ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಮತ್ತು ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ದಾಖಲೆ ಬರೆಯುವ ಅವಕಾಶ ಹೊಂದಿದ್ದಾರೆ.

    ಕಪಿಲ್ ಹಿಂದಿಕ್ಕುವತ್ತ ಅಶ್ವಿನ್
    ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಹರ್ಭಜನ್ ಸಿಂಗ್‌ರನ್ನು ಹಿಂದಿಕ್ಕಿರುವ ಸ್ಪಿನ್ನರ್ ಆರ್. ಅಶ್ವಿನ್ ದಕ್ಷಿಣ ಆಫ್ರಿಕಾದಲ್ಲಿ ಕಪಿಲ್ ದೇವ್ ದಾಖಲೆ ಮುರಿಯುವ ನಿರೀಕ್ಷೆಯಲ್ಲಿದ್ದಾರೆ. ಅಶ್ವಿನ್ (427) ಇನ್ನು 8 ವಿಕೆಟ್ ಕಬಳಿಸಿದರೆ ಕಪಿಲ್ ದೇವ್‌ರನ್ನು (434) ಹಿಂದಿಕ್ಕಿ, ಅನಿಲ್ ಕುಂಬ್ಳೆ (619) ಬಳಿಕ ಭಾರತ ಪರ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಲಿದ್ದಾರೆ. ಕಪಿಲ್ ದೇವ್ 1994ರಲ್ಲಿ ನ್ಯೂಜಿಲೆಂಡ್‌ನ ರಿಚರ್ಡ್ ಹ್ಯಾಡ್ಲಿ (431) ಅವರನ್ನು ಹಿಂದಿಕ್ಕಿದಾಗ ವಿಶ್ವದಾಖಲೆಯ ಒಡೆಯರಾಗಿದ್ದರು. ಕಳೆದ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಆಡುವ ಬಳಗದಿಂದ ಕಡೆಗಣಿಸಲ್ಪಟ್ಟಿದ್ದ ಅಶ್ವಿನ್ ಈ ಬಾರಿ ರವೀಂದ್ರ ಜಡೇಜಾ ಗೈರಿನಲ್ಲಿ ತಂಡದ ಮೊದಲ ಆಯ್ಕೆಯ ಸ್ಪಿನ್ನರ್ ಆಗಿದ್ದಾರೆ. 2018ರ ಪ್ರವಾಸದ 2 ಟೆಸ್ಟ್‌ಗಳಲ್ಲಿ ಅಶ್ವಿನ್ 7 ವಿಕೆಟ್ ಕಬಳಿಸಿದ್ದರು.

    ಧೋನಿ ದಾಖಲೆ ಮುರಿಯುವತ್ತ ಪಂತ್
    ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 100 ಬಲಿ ಪಡೆದ ವಿಕೆಟ್ ಕೀಪರ್ ಎನಿಸಿರುವ ಎಂಎಸ್ ಧೋನಿ ದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ. 24 ವರ್ಷದ ಪಂತ್ ಸದ್ಯ 25 ಟೆಸ್ಟ್‌ಗಳ್ಲಲಿ 97 ಬಲಿ ಪಡೆದಿದ್ದಾರೆ. ಧೋನಿ 36 ಟೆಸ್ಟ್‌ಗಳಲ್ಲಿ 100 ಬಲಿ ಪಡೆದಿದ್ದು ಅತಿವೇಗದ ಭಾರತೀಯ ಸಾಧನೆ ಎನಿಸಿದೆ.

    ನೂರು ಟೆಸ್ಟ್ ಸಾಧನೆಯತ್ತ ಕೊಹ್ಲಿ
    ವಿರಾಟ್ ಕೊಹ್ಲಿ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಾಗ 100 ಟೆಸ್ಟ್ ಆಡಿದ 12ನೇ ಭಾರತೀಯ ಎನಿಸಲಿದ್ದಾರೆ. ಸದ್ಯ 97 ಟೆಸ್ಟ್‌ಗಳಲ್ಲಿ 7,801 ರನ್ ಗಳಿಸಿರುವ 33 ವರ್ಷದ ಕೊಹ್ಲಿ, ಸರಣಿಯಲ್ಲಿ 199 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 8 ಸಾವಿರ ರನ್ ಪೂರೈಸಿದ 6ನೇ ಭಾರತೀಯ ಎನಿಸಲಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದಲ್ಲಿ ಸಚಿನ್ ತೆಂಡುಲ್ಕರ್ ಬಳಿಕ 2ನೇ ಗರಿಷ್ಠ ರನ್ ಗಳಿಸಿದ ಭಾರತೀಯ ಎನಿಸಿರುವ ರಾಹುಲ್ ದ್ರಾವಿಡ್ (624) ಸಾಧನೆಯನ್ನೂ (558) ಕೊಹ್ಲಿ ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಕಳೆದೆರಡು ವರ್ಷಗಳ ಶತಕಗಳ ಬರ ನೀಗಿಸಿದರೆ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 71 ಶತಕ ಸಿಡಿಸಿದ ರಿಕಿ ಪಾಂಟಿಂಗ್ ಸಾಧನೆ ಸರಿಗಟ್ಟಲಿದ್ದಾರೆ. ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ 42 ಶತಕ ಸಿಡಿಸಿದ ನಾಯಕ ಎನಿಸಲಿದ್ದಾರೆ. ಸದ್ಯ ಪಾಂಟಿಂಗ್ (41) ಜತೆ ದಾಖಲೆ ಹಂಚಿಕೊಂಡಿದ್ದಾರೆ.

    200 ವಿಕೆಟ್ ಸನಿಹ ಶಮಿ
    ಮೊಹಮದ್ ಶಮಿ ಸರಣಿಯಲ್ಲಿ 5 ವಿಕೆಟ್ ಕಬಳಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರೈಸಿದ 5ನೇ ಭಾರತೀಯ ವೇಗಿ ಎನಿಸಲಿದ್ದಾರೆ. ಕಪಿಲ್ ದೇವ್ (434), ಇಶಾಂತ್ ಶರ್ಮ (311), ಜಹೀರ್ ಖಾನ್ (311), ಜಾವಗಲ್ ಶ್ರೀನಾಥ್ (236) ಹಿಂದಿನ ಸಾಧಕರು. ಶಮಿ ಸದ್ಯ 54 ಟೆಸ್ಟ್‌ಗಳಲ್ಲಿ 195 ವಿಕೆಟ್ ಕಬಳಿಸಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾದಲ್ಲೇ ಟೆಸ್ಟ್ ಪದಾರ್ಪಣೆ ಮಾಡಿದ್ದ ಜಸ್‌ಪ್ರೀತ್ ಬುಮ್ರಾ, 3 ವಿಕೆಟ್ ಪಡೆದರೆ ವಿದೇಶದಲ್ಲಿ 100 ವಿಕೆಟ್ ಪೂರೈಸಲಿದ್ದಾರೆ. ಸದ್ಯ 22 ವಿದೇಶಿ ಟೆಸ್ಟ್‌ಗಳಲ್ಲಿ 97 ವಿಕೆಟ್ ಕಬಳಿಸಿದ್ದಾರೆ. ಭಾರತದಲ್ಲಿ ಅವರು ಕೇವಲ 2 ಟೆಸ್ಟ್ ಆಡಿದ್ದು, 4 ವಿಕೆಟ್ ಗಳಿಸಿದ್ದಾರೆ.

    ಕರ್ನಾಟಕದ ಈ ಆಟಗಾರನಿಗೆ ನಾಯಕತ್ವ ನೀಡಲು ಆರ್‌ಸಿಬಿ ಒಲವು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts