More

    25 ವರ್ಷಗಳಲ್ಲಿ ರಾಮರಾಜ್ಯ ನಿರ್ಮಾಣ: ಸೂಲಿಬೆಲೆ ವಿಶ್ವಾಸ

    ಶಿವಮೊಗ್ಗ: ಈಗ ರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮರಾಜ್ಯ ನಿರ್ಮಾಣವಷ್ಟೇ ಬಾಕಿ. ಇಂದಿನ ಸನ್ನಿವೇಶ ಗಮನಿಸಿದರೆ ಇನ್ನು 25 ವರ್ಷಗಳಲ್ಲಿ ರಾಮರಾಜ್ಯ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ. ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿಶ್ವಾಸ ವ್ಯಕ್ತಪಡಿಸಿದರು.

    ಶತಕೋಟಿ ಶ್ರೀರಾಮ ತಾರಕ ನಾಮ ಜಪ ಯಜ್ಞ ಸಮಿತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ ಅವರು, ಸುದೀರ್ಘ ಹೋರಾಟದ ಫಲಿತಾಂಶವಾಗಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮ ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದ್ದಾನೆ. ನಮ್ಮ ಜನರ ರಕ್ತದಲ್ಲಿ ಬೆರೆತಿದ್ದಾನೆ. ಅನಕ್ಷರಸ್ಥರೂ ರಾಮಾಯಣವನ್ನು ಬಲ್ಲವರಾಗಿದ್ದಾರೆ. ಈಗ 500 ವರ್ಷಗಳ ಬಳಿಕ ಜನರ ಆಶಯ ಈಡೇರುತ್ತಿದೆ ಎಂದರು.
    ರಾಮ ಮಂದಿರಕ್ಕಾಗಿ ಹೋರಾಟ ಮಾಡಿದವರಿಗೆ ರಾಮ ಮಂದಿರ ನೋಡುವ ಭಾಗ್ಯವಿಲ್ಲ. ಆದರೆ ನಮಗೆಲ್ಲ ಅದರ ಉದ್ಘಾಟನೆಯನ್ನು ನೋಡುವ ಭಾಗ್ಯ ನಮಗೆ ಸಿಕ್ಕಿದೆ. ರಾಮ ಮಂದಿರದ ಉದ್ಘಾಟನೆ ಬೇರೆ ದೇವಾಲಯಗಳಿಗಿಂಗತಲೂ ಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟರು.
    ರಾಮನಂತಹ ಮತ್ತೊಂದು ಪಾತ್ರ ಜಗತ್ತಿನಲ್ಲೇ ಇಲ್ಲ. ಅಂತಹದೊಂದು ಅಪರೂಪವಾದ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದು ವಾಲ್ಮೀಕಿ ಮಹರ್ಷಿಯ ವಿಶೇಷತೆ. ಕೆಲವರು ರಾಮ ಇದ್ದದ್ದೇ ಸುಳ್ಳು ಎನ್ನುತ್ತಾರೆ. ರಾಮವನ್ನು ಕೇವಲ ಪಾತ್ರ ಎಂದೇ ವಾದಿಸಿದರೂ ಅಂತಹದೊಂದು ಕಲ್ಪನೆಯನ್ನು ಭಾರತೀಯರನ್ನು ಬಿಟ್ಟು ಬೇರೆ ಯಾರೂ ಹೊಂದುವುದು ಸಾಧ್ಯವೇ ಇಲ್ಲ ಎಂದರು.
    ರಾಮಾಯಣಕ್ಕೆ ಚೌಕಟ್ಟು ಹಾಕಿದ್ದು ವಾಲ್ಮೀಕಿ. ನಮ್ಮ ಜನರು ಇಷ್ಟಕ್ಕೆ ತಕ್ಕಂತೆ ಚೌಕಟ್ಟು ತುಂಬಿದ್ದಾರೆ. ಮೂಲ ರಾಮಾಯಣವನ್ನು ಹೊರತುಪಡಿಸಿ ನೂರಾರು ರಾಮಾಯಣಗಳು ಬಂದಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಎಡಪಂಥೀಯರು ಸೀತಾಯಣ ರಚನೆ ಮಾಡಿದ್ದರು. ಅದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ.ಇದೇ ರಾಮಾಯಣ ಹಾಗೂ ಭಾರತದ ವಿಶೇಷವಾಗಿದೆ ಎಂದು ಹೇಳಿದರು.
    ವಿದೇಶದಲ್ಲೂ ಕೌಸಲ್ಯನಂದನ:ಇಂಡೋನೇಷ್ಯಾದ ಬಾಲಿ ದ್ವೀಪದ ಜನರು ರಾಮನನ್ನು ಅಪಾರವಾಗಿ ಪ್ರೀತಿಸುತ್ತಾರೆ. ಅಲ್ಲಿನ ಮಕ್ಕಳು ಛದ್ಮವೇಷದಲ್ಲಿ ಆಂಜನೇಯನ ಪೋಷಾಕು ಧರಿಸುತ್ತಾರೆ. ಥೈಲ್ಯಾಂಡ್‌ಗೂ ಭಾರತಕ್ಕೂ ನಂಟಿರುವುದಕ್ಕೆ ಕಾರಣವೊಂದಿದೆ. ಏಕೆಂದರೆ ಅಲ್ಲಿನ ರಾಜ ಅಧಿಕಾರ ಸ್ವೀಕರಿಸುವಾಗ ರಾಮನ ಪಾದುಕೆ ಮೇಲೆ ಪ್ರಮಾಣ ಮಾಡುತ್ತಾನೆ. ಅಲ್ಲಿನ ರಾಜನನ್ನು ರಾಮ ಎಂದೇ ಕರೆಯಲಾಗುತ್ತದೆ. ಹೀಗಾಗಿ ರಾಮ ಮಂದಿರದ ಉದ್ಘಾಟನೆ ವಿಷಯ ಭಾರತ ಮಾತ್ರವಲ್ಲ, ಥೈಲ್ಯಾಂಡ್, ಶ್ರೀಲಂಕಾ ನೇಪಾಳದ ಜನರಿಗೂ ಸಂತೋಷ ಉಂಟು ಮಾಡಿದೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
    ಬೇರೆಯವರನ್ನು ದ್ವೇಷಿಸಲ್ಲ:ರಾಮ ಮಂದಿರವನ್ನು ಕೆಡವಿ ಮಸೀದಿಯನ್ನು ಕಟ್ಟುವ ಮೂಲಕ ನಮ್ಮ ಮೇಲೆ ಮಾನಸಿಕ ಪ್ರಹಾರ ಮಾಡುವ ವಿಕೃತಿ ಮೆರೆಯಲಾಯಿತು. ನಾವಿಂದು ರಾಮ ಮಂದಿರ ನಿರ್ಮಾಣ ಮಾಡಿದ್ದೇವೆ. ಆದರೆ ವಿಕೃತಿ ತೋರುವ ಅವಶ್ಯಕತೆಯಿಲ್ಲ. ಸಂಭ್ರಮದ ಕ್ಷಣದಲ್ಲಿ ಬೇರೆಯವರನ್ನು ದ್ವೇಷಿಸುವ ಅವಶ್ಯಕತೆಯೂ ಇಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
    ರಾಘವನ ಚಿತ್ರಣವೇ ಭಿನ್ನ:ಸತ್ಯವಾಕ್ಯ ಪರಿಪಾಲ, ಚಾರಿತ್ರೃವಂತ, ದೃಢ ನಿಶ್ಚಯ, ಎಲ್ಲ ಪ್ರಾಣಿಗಳ ಮೇಲೆ ದಯೆ ಇರಬೇಕು. ಮಿತ ಹಾಗೂ ಹಿತಭಾಷಿ, ಜ್ಞಾನಿಯಾಗಿರಬೇಕು, ಸಮಚಿತ್ತನಾಗಿರಬೇಕು, ಧೈರ್ಯಶಾಲಿ ಆಗಿರಬೇಕು, ಕ್ರೋಧವನ್ನು ಗೆದ್ದವನಾಗಿರಬೇಕು. ಇದು ವ್ಯಕ್ತಿಯಲ್ಲಿ ಇರಬೇಕಾದ ಗುಣಗಳು ಎಂದು ನಾರದರು ಹೇಳಿದ್ದರು. ಅದೆಲ್ಲವೂ ಶ್ರೀರಾಮನಲ್ಲಿ ಇದೆ ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನೇ ವಾಲ್ಮೀಕಿ ಮೂಲ ರಾಮಾಯಣದಲ್ಲಿ ಚಿತ್ರಿಸಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
    ಸಮಿತಿ ಅಧ್ಯಕ್ಷ ಆರ್.ಕೆ.ಸಿದ್ದರಾಮಣ್ಣ, ಪ್ರಧಾನ ಕಾರ್ಯದರ್ಶಿ ಕೆ.ಸಿ.ನಟರಾಜ ಭಾಗವತ್, ವಿಎಚ್‌ಪಿ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಪ್ರಮುಖರಾದ ರಮೇಶ್ ಬಾಬು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts