More

    ಸುವರ್ಣಮುಖಿ ಹಳ್ಳಕ್ಕೆ ಗೂಬೆಹಳ್ಳಿ ಬಳಿ ಸೇತುವೆ ನಿರ್ಮಿಸಿ: ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತ ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರದಾಟ

    ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹರಿಯುವ ಸುವರ್ಣಮುಖಿ ಹಳ್ಳಕ್ಕೆ ಹಂದನಕೆರೆ ಹೋಬಳಿ ಗೂಬೆಹಳ್ಳಿ ಬಳಿ ಸೇತುವೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

    ಗೂಬೆಹಳ್ಳಿ ಮೂಲಕ ನಿರುವಗಲ್ಲು ಮಾರ್ಗವಾಗಿ ಹುಳಿಯಾರು-ತಿಪಟೂರು ಜಿಲ್ಲಾ ರಸ್ತೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮೇಲೆ ಸುವರ್ಣಮುಖಿ ಹಳ್ಳ ಹರಿಯುತ್ತದೆ. ಈಗ ತಾಲೂಕಿನ ಕೆರೆಗಳನ್ನು ತುಂಬಿಸಲು ಹೇಮಾವತಿ ನೀರನ್ನು ನೈಸರ್ಗಿಕವಾಗಿ ಇದೇ ಹಳ್ಳದ ಮೂಲಕ ಹರಿಸುತ್ತಿದ್ದಾರೆ. ಹಾಗಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ತುಂಬಿ ಹರಿಯುತ್ತದೆ. ಸೇತುವೆ ಇಲ್ಲದ ಪರಿಣಾಮ ಜೋರು ಮಳೆ ಬಂತೆಂದರೆ ಈ ಹಳ್ಳದಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ವಾಹನ ಹಾಗೂ ಸಾರ್ವಜನಿಕರು ಸಂಚರಿಸಲು ಸಾಧ್ಯವಾಗುವುದಿಲ್ಲ.

    ಗುರುವಾರ ರಾತ್ರಿ ಈ ಭಾಗದಲ್ಲಿ ಸುರಿದ ಮಳೆ ನೀರಿನ ಜತೆಗೆ ಹೇಮೆ ನೀರು ಸೇರಿ ಸುವರ್ಣಮುಖಿ ಹಳ್ಳ ಮೈದುಂಬಿ ರಸ್ತೆ ಮಧ್ಯೆಯೇ ಹರಿಯುತ್ತಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ಸಾದ್ರಳ್ಳಿ, ಅವಳಗೆರೆ, ಚಿಕ್ಕಬಿದರೆ, ಬೈರಾಪುತಾಂಡ್ಯ, ಕಲ್ಲಹಳ್ಳಿ, ನಂದಿಹಳ್ಳಿ, ಗೂಬೆಹಳ್ಳಿ, ಟಿ.ಎಸ್.ಹಳ್ಳಿಗಳ ಜನರು ತಿಪಟೂರು ರಸ್ತೆಗೆ, ಮಣಕಿಕೆರೆ ಜಾತ್ರೆ, ದುರ್ಗಮ್ಮ ಜಾತ್ರೆ ಸೇರಿ ಅನೇಕ ಕೆಲಸಕಾರ್ಯಗಳಿಗೆ ಹಳ್ಳದಿಂದ ಮುಳುಗಡೆಯಾಗಿರುವ ರಸ್ತೆಯಲ್ಲೇ ಪ್ರಾಯಾಸದಿಂದ ಓಡಾಡಬೇಕಿದೆ. ಇನ್ನು ರಂಗೇನಹಳ್ಳಿ, ಮೂರ‌್ನಲ್ಕು ತಾಂಡ್ಯಗಳು, ಎಳ್ಳೇನಹಳ್ಳಿ, ಗದ್ದೆಗೇರಹಟ್ಟಿ, ನಿರುವಗಲ್ಲು, ಬಸವಪಟ್ಟಣ, ಗೊಲ್ಲರಹಟ್ಟಿ ಗ್ರಾಮಗಳ ಜನರು ಹುಳಿಯಾರು ಪಟ್ಟಣಕ್ಕೆ ಬಂದು ಹೋಗಲು, ವಿದ್ಯಾರ್ಥಿಗಳು ಹೈಸ್ಕೂಲ್ ಹಾಗೂ ಕಾಲೇಜಿಗೆ ಇದೇ ಮಾರ್ಗದಲ್ಲಿ ಓಡಾಡುತ್ತಾರೆ.

    ಮನಸು ಮಾಡದ ಸಚಿವರು: ನಿರುವಗಲ್-ಗೂಬೆಹಳ್ಳಿಯ ಬದಲಿ ಮಾರ್ಗವಾಗಿ ಗೂಬೇಹಳ್ಳಿ-ಎರೇಕಟ್ಟೆ-ಟಿ.ತಾಂಡ್ಯರಸ್ತೆ ಮತ್ತು ಹುಳಿಯಾರು-ಹರೇನಳ್ಳಿ-ಶ್ರೀಕ್ಷೇತ್ರ ಹುಲ್ಕಲ್ ಬೆಟ್ಟದ ರಸ್ತೆ ಹಾಗೂ ನಿರುವಗಲ್-ತೊರೇಮನೆ-ಸೀಗೇಬಾಗಿ ಮೂಲಕ ಓಡಾಡಬಹುದು. ಆದರೆ ಯಾವುದೇ ಮಾರ್ಗದಲ್ಲಿ ಓಡಾಡಿದರೂ ಹತ್ತನ್ನೆರಡು ಕಿಮೀ ಹೆಚ್ಚಾಗುತ್ತದೆ. ಬೆಳಗುಲಿ, ಗೂಬೆಹಳ್ಳಿಯ ಶಾಲಾ-ಕಾಲೇಜಿಗೆ ಸೈಕಲ್‌ನಲ್ಲಿ ಬರುವ ವಿದ್ಯಾರ್ಥಿಗಳಿಗಂತೂ ಓಡಾಡ ದುಸ್ತರವಾಗಿದೆ. ಇತ್ತೀಚೆಗಷ್ಟೆ ಬೈರಾಪುರ ಗೇಟ್‌ನಿಂದ ನರುವಗಲ್ಲಿಗೆ ಹೊಸ ಡಾಂಬರ್ ರಸ್ತೆ ಮಾಡಿದ್ದಾರೆ. ಆದರೆ ಸೇತುವೆ ಮಾಡದೆ ನಿರ್ಲಕ್ಷ್ಯಿಸಿದ್ದಾರೆ. ಈಗ ಈ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸುವರ್ಣಮುಖಿ ಹಳ್ಳವಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆಯಿಂದ ಬ್ರಿಡ್ಜ್ ಕಂ ಬ್ಯಾರೇಜ್ ಕಟ್ಟಲು ಅವಕಾಶವಿದೆ. ಆದರೆ ಸಚಿವರು ಇನ್ನೂ ಮನಸ್ಸು ಮಾಡಿಲ್ಲ.

    ಎರಡ್ಮೂರು ಇಲಾಖೆಗೆ ವರದಿ ಕಳುಹಿಸಲಾಗಿದೆ: ಹೇಮಾವತಿ ನೀರು ಸುವರ್ಣಮುಖಿ ನದಿ ಮೂಲಕ ಹರಿಸಿ ಕೆರೆಗಳನ್ನು ತುಂಬಿಸುವುದರಿಂದ ನದಿ ಹರಿಯುವ ಮೂರು ಮಾರ್ಗದಲ್ಲಿ ಪಿಡ್ಲ್ಯೂಡಿ ರಸ್ತೆ ಹಾದು ಹೋಗುತ್ತದೆ. ಹಾಗಾಗಿ ಮೂರು ಕಡೆಯೂ ಸೇತುವೆಯ ಅಗತ್ಯವಿದೆ. ಎರಡು ಬಾರಿ ಇಲಾಖೆಗಳಿಗೆ ಮನವಿ ಮಾಡಿದ್ದು, ಹಣಕಾಸಿನ ಕೊರತೆಯ ಕಾರಣ ಕೊಟ್ಟು ಸೇತುವೆ ಮಂಜೂರು ಆಗಿಲ್ಲ. ಸೇತುವೆ ಅಗತ್ಯತೆ ಬಗ್ಗೆ ವಿಡಿಯೋ ಚಿತ್ರ ಸಹಿತ ವರದಿ ಸಲ್ಲಿಸುತ್ತೇವೆ, ಮಂಜೂರಾದರೆ ಕಾಮಗಾರಿ ಆರಂಭಿಸುತ್ತೇವೆ ಎನ್ನುತ್ತಾರೆ ಚಿಕ್ಕನಾಯಕನಹಳ್ಳಿ ಪಿಡ್ಲ್ಯೂಡಿ ಎಇಇ ಚಂದ್ರಶೇಖರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts