More

    ಬಜೆಟ್ ನಿರೀಕ್ಷೆ ಹುಸಿ: ಅನೀಲ್ ಮೆಣಸಿನಕಾಯಿ

    ಗದಗ: ಕೈಗಾರಿಕೆ ಸ್ಥಾಪನೆ, ಕೃಷಿ, ‌ನೀರಾವರಿ ಸೇರಿದಂತೆ ಕೆಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯ ಮೇಲಿನ ಜಿಲ್ಲೆಯ ಜನರ ದಶಕಗಳ ನಿರೀಕ್ಷೆಯನ್ನು ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್ ಹುಸಿಯಾಗಿಸಿದೆ ಎಂದು ಬಿಜೆಪಿ ಯುವ ನಾಯಕ ಅನೀಲ್ ಮೆಣಸಿನಕಾಯಿ ತಿಳಿಸಿದ್ದಾರೆ.

    ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತಗುಡ್ಡ, ಲಕ್ಕುಂಡಿ, ಮಾಗಡಿ ಪಕ್ಷಿಧಾಮದ ಅಭಿವೃದ್ಧಿಯ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಸ್ವಾಗತಾರ್ಹ. ಅದರಂತೆ, ಶೆಟ್ಟಿಕೇರಿ ಪಕ್ಷಿಧಾಮ, ಬಿಂಕದಕಟ್ಟಿ ಮೃಗಾಲಯವನ್ನು ಮೇಲ್ದರ್ಜೆಗೇರಿಸುವುದು, ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಯ ಕುರಿತು ಪ್ರಸ್ತಾಪಿಸದಿರುವುದು ಸಹಜವಾಗಿ ಗದಗ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ. 

    ಈ ಹಿಂದಿನ ಬಿಜೆಪಿ ಸರ್ಕಾರ 55 ಕಿ.ಮೀ.ಉದ್ದದ ಗದಗ-ಯಲವಿಗಿ ನೂತನ ರೈಲು ಮಾರ್ಗ ಯೋಜನೆಯನ್ನು 640 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಭೂಸ್ವಾಧೀನ ವೆಚ್ಚವನ್ನು ಕೇಂದ್ರದ ಪಾಲಿನೊಂದಿಗೆ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಘೋಷಿಸಿತ್ತು. ಈ ಬಗ್ಗೆ ಪ್ರಸಕ್ತ ಸಾಲಿನ ಬಜೆಟ್ ನಲ್ಲೂ ಪುನಃ ಪ್ರಸ್ತಾಪಿಸಿದ್ದು, ರಾಜ್ಯ ಸರ್ಕಾರ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. 

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ ಕಾಮಗಾರಿಗಾಗಿ ಸುಮಾರು 1,500 ಕೋಟಿ ರೂ. ಮೀಸಲಿಡಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರವೂ ಒಂದು ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು. 

    ಅದರಂತೆ, ಚುನಾವಣಾ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳ ಜಾರಿಗೆ ಶೇ.26ರಷ್ಟು ಸಾಲ ಪಡೆಯಲು ಸರ್ಕಾರ ತೀರ್ಮಾನಿಸಿದೆ. ಗ್ಯಾರಂಟಿ ಭಾರ ಇಳಿಸಲು ತೆರಿಗೆ ಹೆಚ್ಚಳ ಮಾಡಿ ಜನರಿಗೆ ಆರ್ಥಿಕ ಹೊರೆಯಾಗಿಸಿದ್ದು, ಕಾಂಗ್ರೆಸ್ ಸರ್ಕಾರ ಜನ ವಿರೋಧಿ ನೀತಿ ಅನುಸರಿಸಿದೆ.

    ಗ್ಯಾರಂಟಿ ಯೋಜನೆ ಜಾರಿಗಾಗಿ ಹಣ ಹೊಂದಿಸಲಾಗದೆ ಅಬಕಾರಿ ತೆರಿಗೆಯನ್ನು ಶೇ.20ರಷ್ಟು ಹೆಚ್ಚಿಸಿ ಎಲ್ಲ ತರಹದ ಮಧ್ಯದ ಬೆಲೆ ಏರಿಕೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ತೆರಿಗೆಯ‌ನ್ನು ಆಸ್ತಿ ನೋಂದಣಿ ದರವನ್ನು ಹೆಚ್ಚಿಸಿದೆ‌. ಒಂದು ಕಡೆ ಉಚಿತ ಕೊಟ್ಟು ಇನ್ನೊಂದೆಡೆ ತೆರಿಗೆ ಹೆಚ್ಚಿಸಿ ಜನರಿಂದ ಹಣ ಕಿತ್ತುಕೊಳ್ಳುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಇನ್ನು ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕೇಂದ್ರದ ಎನ್ಇಪಿ, ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಲು ತೀರ್ಮಾನಿಸಿದೆ. ಗೋವುಗಳ ಸಂರಕ್ಷಣೆಗಾಗಿ ಘೋಷಿಸಲಾಗಿದ್ದ ‘ಜಿಲ್ಲೆಗೊಂದು ಗೋಶಾಲೆ’ಯಂತಹ ಈ ಹಿಂದಿನ ಬಿಜೆಪಿ ಸರ್ಕಾರದ ಉದ್ದೇಶಿತ ಜನಪರ ಯೋಜನೆಗಳನ್ನು ಕೈಬಿಟ್ಟಿರುವುದನ್ನು ಅನೀಲ್ ಮೆಣಸಿನಕಾಯಿ ಖಂಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts