More

    ಶಾಸಕರಿಗೆ ಅನುದಾನ, ಅಭಿವೃದ್ಧಿಯತ್ತ ಗಮನ; ಅಸಮಾಧಾನಿತರನ್ನು ಓಲೈಸಿದ ಮುಖ್ಯಮಂತ್ರಿ

    ಬೆಂಗಳೂರು: ಕೈಗೆ ಸಿಗದ ಅನುದಾನ, ಹೆಜ್ಜೆ ಹೆಜ್ಜೆಗೂ ಅವಮಾನ ಎಂದು ಎರಡು ದಿನಗಳ ಸಭೆಯಲ್ಲಿ ಸಚಿವರ ವಿರುದ್ಧ ಸರಣಿ ದೂರಿತ್ತ ಪಕ್ಷದ ಶಾಸಕರ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ರಸ್ತೆ ಸೇರಿದಂತೆ ಪ್ರತಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಮೂಲಕ 25 ಕೋಟಿ ರೂ. ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಆ ಮೂಲಕ ಶಾಸಕರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ. ಶಾಸಕರ ಸಭೆಗೆ ತೆರೆಬಿದ್ದ ನಂತರ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವ ರಾದ ಶ್ರೀರಾಮುಲು, ಸೋಮಣ್ಣ, ಎಸ್.ಟಿ.ಸೋಮಶೇಖರ್, ಶಶಿಕಲಾ ಜೊಲ್ಲೆ ಅವರು, ಪ್ರತಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿ ಒಪ್ಪಿಗೆ ನೀಡಿರುವುದನ್ನು ಖಚಿತಪಡಿಸಿದ್ದಾರೆ. ಕೋವಿಡ್ ಬಳಿಕ ಇತ್ತೀಚೆಗೆ ರಾಜ್ಯದ ಆರ್ಥಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗುತ್ತಿದೆ. ಬಜೆಟ್​ನಲ್ಲಿ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಶಾಸಕರ ಬೇಡಿಕೆ ಈಡೇರಿಸುವ ಆಶ್ವಾಸನೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

    ಒಂದೇ ಸಲ ಸಿಗೋದಿಲ್ಲ: ಯಾವುದೇ ಕ್ಷೇತ್ರಕ್ಕೂ ಒಂದೇ ಸಲ 25 ಕೋಟಿ ರೂ. ಸಿಗುವುದಿಲ್ಲ. ಬದಲಾಗಿ ಬೇರೆ ಬೇರೆ ಯೋಜನೆಗಳನ್ನು ಶಾಸಕರ ಕ್ಷೇತ್ರಗಳಿಗೆ ಮಂಜೂರು ಮಾಡಲಾಗುತ್ತದೆ. ಅದರ ಮೊತ್ತ ಒಟ್ಟಾರೆ 25 ಕೋಟಿ ರೂ.ಗಳು ಇರುವಂತೆ ನೋಡಿಕೊಳ್ಳಲಾಗುತ್ತದೆ. ಎರಡು ದಿನ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಶಾಸಕರ ಸಭೆ, ಅರ್ಥಪೂರ್ಣವಾಗಿ ನಡೆದಿದೆ. ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿಯಲ್ಲಿಯೂ ರಾಜ್ಯವನ್ನು ಉತ್ತಮವಾಗಿ ನಿಭಾಯಿಸಿದ ಮುಖ್ಯಮಂತ್ರಿ ಆಡಳಿತ ವೈಖರಿಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ಕೋವಿಡ್ ಸಂದರ್ಭದಲ್ಲಿ ಹಲವು ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಬಳ ಕಡಿತ ಮಾಡಲಾಗಿದೆ ಎಂದರು.

    ಆದರೆ, ರಾಜ್ಯದಲ್ಲಿ ಕಠಿಣ ಸಂದರ್ಭದಲ್ಲಿಯೂ ಸಂಬಳ ಸಾರಿಗೆ ಕಡಿತ ಮಾಡದೆ ಯಡಿಯೂರಪ್ಪ ಅವರು, ರಾಜ್ಯದ ಆರ್ಥಿಕ ಸ್ಥಿತಿಯನ್ನು ಉತ್ತಮ ವಾಗಿ ನಿಭಾಯಿಸಿದ್ದಾರೆ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದ ಹೊತ್ತಿನಲ್ಲಿಯೇ ಪ್ರವಾಹ ಶುರುವಾಯಿತು. ಆಗಲೂ ಯಡಿಯೂರಪ್ಪ ಅವರು, ಪರಿಸ್ಥಿತಿ ಯನ್ನು ದಿಟ್ಟವಾಗಿ ನಿಭಾಯಿಸಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ದಕ್ಷತೆಯಿಂದ ನಿರ್ವಹಣೆ ಮಾಡಿದ್ದಕ್ಕೆ ದೇಶದಲ್ಲಿಯೇ ಉತ್ತಮ ಹೆಸರು ರಾಜ್ಯಕ್ಕೆ ಸಿಕ್ಕಿದೆ ಎಂದರು.

    ಸಭೆಯ ತೀರ್ಮಾನಗಳು: ವಾರದಲ್ಲಿ ಎರಡು ದಿನ ಸಚಿವರು ಕಚೇರಿಯಲ್ಲಿ ಲಭ್ಯ, ಯಾರೊಬ್ಬರೂ ಬಹಿರಂಗ ಹೇಳಿಕೆ ನೀಡಬಾರದು.

    ಶಾಸಕರಿಗೆ ಅನುದಾನ, ಅಭಿವೃದ್ಧಿಯತ್ತ ಗಮನ; ಅಸಮಾಧಾನಿತರನ್ನು ಓಲೈಸಿದ ಮುಖ್ಯಮಂತ್ರಿ
    ಬಿಜೆಪಿ ಸಭೆಯಲ್ಲಿ ಸಚಿವರು, ಶಾಸಕರು.

    ಶಾಸಕರ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲಾಗಿದೆ. ವಾರದಲ್ಲಿ 2 ದಿನ ಸಚಿವರು ಕಚೇರಿಯಲ್ಲಿದ್ದು, ಶಾಸಕರ ದೂರು ದುಮ್ಮಾನ ಆಲಿಸಲು ನಿರ್ಧಾರ ಮಾಡಲಾಗಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಶಾಸಕರು ಸಲಹೆ , ಸೂಚನೆಗಳನ್ನು ನೀಡಿದ್ದಾರೆ. ಯಾರೂ ಬಹಿರಂಗ ಹೇಳಿಕೆ, ಟೀಕೆ ಟಿಪ್ಪಣಿ ಮಾಡದಂತೆಯೂ ಶಾಸಕರು ಸಲಹೆ ನೀಡಿದ್ದಾರೆ.

    | ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿ

    ಪ್ರತಿಯೊಬ್ಬ ಶಾಸಕರೂ ಮುಕ್ತವಾಗಿ ಮಾತನಾಡಿದ್ದಾರೆ. ಸಚಿವರ ಕೈಯಲ್ಲಿ ಉತ್ತರಗಳನ್ನು ಕೊಡಿಸುವ ಕೆಲಸವೂ ಆಗಿದೆ. ಪಕ್ಷ, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮುಕ್ತ ಮಾತುಕತೆ ಮಾಡಲಾಗಿದೆ. ರಾಜ್ಯದಲ್ಲಿ ಹಣಕಾಸಿನ ಮುಗ್ಗಟ್ಟು ಇದ್ದರೂ ಶಾಸಕರ ಸಮಸ್ಯೆಗಳಿಗೆ ಸ್ಪಂದಿಸಲು ಸಿಎಂ ಸಿದ್ಧರಿದ್ದಾರೆ.

    | ಎಸ್.ಟಿ. ಸೋಮಶೇಖರ್ ಸಹಕಾರ ಸಚಿವ

    ಸರ್ಕಾರ ಅಂದ್ರೆ ಸರ್ಕಾರನೇ. ಸರ್ಕಾರ ಅಂದ್ರೆ ಕ್ಯಾಪ್ಟನ್. ಅವರಿಗಾದ ಮುಜುಗರವನ್ನು ನಾನು ಖಂಡಿಸುವೆ. ಯಾವ್ಯಾವ ಕಾಲದಲ್ಲಿ ಏನೇನು ಆಗಬೇಕೋ ಆದಾಗುತ್ತದೆ. ಸರ್ಕಾರ ನಿಂತ ನೀರಲ್ಲ. ಯಾರು ಏನೇ ಹೇಳಲಿ, ಸರ್ಕಾರ ಸುಭದ್ರವಾಗಿದೆ. ಒಳ್ಳೆಯ ಕೆಲಸ ಮಾಡುತ್ತಿದೆ.

    | ವಿ. ಸೋಮಣ್ಣ ವಸತಿ ಸಚಿವ

    ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಶಾಸಕರಿಗೂ ಮಾತನಾಡಲು ಅವಕಾಶ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಈ ಬಾರಿ ವಿಭಾಗವಾರು ಸಭೆ ನಡೆಸಲಾಗಿದೆ. ಇಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಸಿಕ್ಕಿದೆ. ಸಭೆಯಲ್ಲಿ ಅಭಿಪ್ರಾಯ ಹೇಳುವಾಗ ಸಣ್ಣ ಪುಟ್ಟ ಗೊಂದಲ ಆಗುವುದು ಸಹಜ. 60 ಸಾವಿರ ಕೋಟಿ ಹಾನಿ ಆಗಿದ್ದರೂ ಕರೊನಾ ನಿಭಾಯಿಸುವ ನಿಟ್ಟಿನಲ್ಲಿ ಅತ್ಯುತ್ತಮ ನಿರ್ವಹಣೆ ನಮ್ಮದಾಗಿದೆ.

    | ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

    ಬೀದಿನಾಯಿ ಕಚ್ಚಿದ್ರೂ ಸುಮ್ನಿರ್ಬೇಕಂತೆ; ಇಲ್ಲಂದ್ರೆ ಮೇನಕಾ ಗಾಂಧಿ ಫೋನ್​ ಮಾಡಿ ಬೆದರಿಕೆ ಹಾಕ್ತಾರೆ!

    ತಪ್ಪೇ ಮಾಡದಿದ್ದರೂ ರತನ್​ ಟಾಟಾಗೆ ನೋಟಿಸ್​ ಕಳಿಸಿದ ಪೊಲೀಸರು; ಪ್ರಕರಣದ ಹಿಂದಿದ್ದಳು ಒಬ್ಬಳು ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts