More

    ಕೃಷಿಭೂಮಿಗೆ ಹಾನಿ ಮಾಡಿದ ಅಣೆಕಟ್ಟು, ಸೇತುವೆ ನಿರ್ಮಾಣ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಸಂಗಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಪೆ ಗ್ರಾಮದ ದೋಟ ಎಂಬಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಹಾಗೂ ಸೇತುವೆ ಕೆಲಸದಿಂದ ಕೃಷಿ ಜಮೀನಿಗೆ ಹಾನಿ ಉಂಟಾಗಿದೆ.

    ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ 1.5 ಎಕರೆ ವಿಸ್ತೀರ್ಣದ ಕೃಷಿ ಜಮೀನಲ್ಲಿದ್ದ ಅಡಕೆ, ತೆಂಗು, ರಬ್ಬರ್ ಬೆಳೆ ನಾಶವಾಗಿದ್ದು, ಭತ್ತದ ಗದ್ದೆಯಲ್ಲಿ ಮಣ್ಣು ತುಂಬಿಕೊಂಡಿದೆ. ನಷ್ಟ ಪರಿಹಾರ ನೀಡುವಂತೆ ಸಂತ್ರಸ್ತ ಕುಟುಂಬ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಕಡೆಗಣಿಸುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಅಭಿವೃದ್ಧಿ ಕಾಮಗಾರಿಗಾಗಿ ಮಾನವೀಯತೆಯಿಂದ ಜಮೀನು ನೀಡಿದ ತಪ್ಪಿಗೆ ಈ ರೈತ ಕುಟುಂಬ ಪರಿತಪಿಸುವಂತಾಗಿದೆ.

    ಕರ್ಪೆ ಗ್ರಾಮದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು ಜನರ ಅನುಕೂಲ ದೃಷ್ಟಿಯಿಂದ ಅಣೆಕಟ್ಟಿನ ಮೇಲ್ಬಾಗದಲ್ಲಿ ವಾಹನ ಸಂಚಾರಕ್ಕೂ ಅವಕಾಶವಾಗುವ ನಿಟ್ಟಿನಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಡ್ಯಾಂ ಹಾಗೂ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡರೆ ಈ ರಸ್ತೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಳ್ತಂಗಡಿ, ಧರ್ಮಸ್ಥಳಕ್ಕೆ ಸನಿಹದ ರಸ್ತೆಯಾಗಲಿದೆ. ಈ ಭಾಗದ ಜನ ಕುಪ್ಪೆಪದವು, ಎಡಪದವು, ಕೈಕಂಬ ಮೊದಲಾದ ಸ್ಥಳಗಳಿಗೆ ಸುತ್ತು ಬಳಸಿ ಹೋಗುವ ತಾಪತ್ರಯ ತಪ್ಪುತ್ತದೆ.

    ಸರಕು ಸಾಗಿಸಲು ಅವಕಾಶ: ಊರಿನ ಅಭಿವೃದ್ದಿಗಾಗಿ ಡ್ಯಾಂ ನಿರ್ಮಾಣಗೊಳ್ಳುತ್ತಿದೆ ಎಂದು ದೋಟ ನಿವಾಸಿ ಡಾ.ರಾಮರಾಯ ಪ್ರಭು ಎಂಬುವರು ಸರಕು ಸಾಗಾಟಕ್ಕಾಗಿ ತಮ್ಮ ಜಮೀನಿನಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ಸೇತುವೆಗೆ ಸಂಪರ್ಕ ರಸ್ತೆ, ಶೆಡ್ ನಿರ್ಮಾಣ, ತಡೆಗೋಡೆ ಹಾಗೂ ನೀರಿನ ಕಾಲುವೆ ನಿರ್ಮಿಸುವಾಗ ಸರ್ವೇ ಸಂಖ್ಯೆ 34 ಮತ್ತು 107ರಲ್ಲಿರುವ ಒಟ್ಟು 1.50 ಎಕರೆ ಕೃಷಿ ಭೂಮಿಗೆ ಹಾನಿಯಾಗಿ ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದಾರೆ. ಭತ್ತದ ಗದ್ದೆಗೆ ಮಣ್ಣು ತುಂಬಿಸಿದ್ದು ಅದನ್ನು ತೆರವು ಮಾಡದ ಕಾರಣ ಎರಡು ಸಲದ ಫಸಲು ವ್ಯರ್ಥವಾಗಿದೆ. ಸ್ಥಳದಲ್ಲಿದ್ದ 95 ಸಾವಿರ ರೂ. ವೆಚ್ಚದ ಇಂಗುಗುಂಡಿ ನಾಶವಾಗಿದೆ. ಇಂಗುಗುಂಡಿ ಮರು ನಿರ್ಮಿಸಿಕೊಡುವುದಾಗಿ ಹೇಳಿದ್ದ ಗುತ್ತಿಗೆದಾರರು ರಾತ್ರೋರಾತ್ರಿ ಪಲಾಯನ ಮಾಡಿದ್ದಾರೆ ಎಂದು ದೂರಿದ್ದಾರೆ.

    ಅರೆಬರೆ ಕೆಲಸದ ಆರೋಪ: ಡ್ಯಾಂ ನಿರ್ಮಾಣ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಸ್ಥಳೀಯ ರೈತರ ಅನುಕೂಲಕ್ಕಾಗಿ ನೀರಿನ ಕಾಲುವೆ ನಿರ್ಮಿಸಿಕೊಡುವುದಾಗಿ ಹೇಳಿ ಅರೆಬರೆ ಕೆಲಸ ಮಾಡಲಾಗಿದೆ. ಕಾಲುವೆ ನಿರ್ಮಾಣಕ್ಕೆ ಹೆಚ್ಚಿನ ಜಮೀನು ಅತಿಕ್ರಮಿಸಲಾಗಿದೆ. ಮಳೆಗಾಲದಲ್ಲಿ ರಭಸದಲ್ಲಿ ಹರಿದು ಬರುವ ನೀರು ತಡೆಗೋಡೆ ಮೀರಿ ಹರಿದು ಬರುವುದರಿಂದ ಇದು ಅಪಾಯಕಾರಿ. ಮಣ್ಣಿಗಾಗಿ ಗುಡ್ಡ ಅಗೆದು ಹಾಕಿದ್ದು ಕುಸಿದು ಬೀಳುವ ಸ್ಥಿತಿಯಲ್ಲಿದೆ. ರಬ್ಬರ್ ತೋಟದ ಮಧ್ಯೆ ಶೆಡ್‌ಗಳನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯ ಕೃಷಿಕ ಶಶಿಧರ ಪ್ರಭು ಆರೋಪಿಸಿದ್ದಾರೆ.

    ಹಾನೀಗೀಡಾದ ನಮ್ಮ ಜಮೀನಿಗೆ ನಷ್ಟ ಪರಿಹಾರ ಹಾಗೂ ಕೃಷಿ ಜಮೀನಿನ ಮೌಲ್ಯ ನೀಡಿದ್ದಲ್ಲಿ ನಮ್ಮ ಜಮೀನಿನ ಮೂಲಕ ರಸ್ತೆಗೆ ಜಾಗ ಬಿಟ್ಟುಕೊಡುತ್ತೇವೆ. ಪರಿಹಾರ ನೀಡದೆ ವಂಚಿಸಲು ಪ್ರಯತ್ನಿಸಿದರೆ ಜಾಗ ಬಿಡುವುದಿಲ್ಲ. ಯೋಜನೆಯ ಯಶಸ್ಸಿಗೆ ಜಮೀನು ನೀಡಿ ಸಹಕರಿಸಿದ ನಮಗೆ ಅನ್ಯಾಯ ಮುಂದುವರಿಸಿದರೆ ಕಾನೂನು ಹೋರಾಟಕ್ಕೂ ಸಿದ್ಧ.
    – ಶಶಿಧರ ಪ್ರಭು, ಕರ್ಪೆ ದೋಟ ನಿವಾಸಿ, ಸಂತ್ರಸ್ತ ರೈತ

    ಪ್ರಸ್ತುತ ನಷ್ಟ ಪರಿಹಾರ ನೀಡುವ ಬಗ್ಗೆ ನಮ್ಮ ಮುಂದೆ ಯಾವುದೇ ಅವಕಾಶಗಳಿಲ್ಲ. ಸಂತ್ರಸ್ತ ಕುಟುಂಬಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಬಗ್ಗೆ ಸಂಬಂಧಪಟ್ಟವರಿಗೆ ಭೂಸ್ವಾಧೀನ ಮಾಡಲು ಪ್ರಸ್ತಾವನೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    – ಪ್ರಸನ್ನ, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts