More

    ಹೆರಿಗೆಗೆ ಲಂಚ; ವೈದ್ಯರಿಗೆ ಅಮಾನತು ಶಿಕ್ಷೆ

    ಬೆಂಗಳೂರು: ಆಸ್ಪತ್ರೆಯಲ್ಲಿ ಹೆರಿಗೆಗೆ ವಾರ್ಡ್ ಬಾಯ್ ಮೂಲಕ ಲಂಚ ಪಡೆದಿದ್ದ ಆರೋಪದ ಮೇಲೆ ಪ್ರಸೂತಿ ತಜ್ಞರನ್ನು ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ.

    ಯಲಹಂಕ ಆಸ್ಪತ್ರೆಯ ವೈದ್ಯ ಡಾ. ರಾಮಚಂದ್ರ ಸಿಸೇರಿಯನ್ ಹೆರಿಗೆ ಮಾಡಿಸಲು 10 ಸಾವಿರ ಹಣ ಪಡೆದಿರುವುದು ಲೋಕಾಯುಕ್ತರ ತನಿಖೆಯಲ್ಲಿ ಸಾಬೀತಾಗಿತ್ತು.

    ಮಾಧ್ಯಮಗಳ ವರದಿ ಹಾಗೂ ಲೋಕಾಯುಕ್ತರ ತನಿಖೆ ಆಧಾರವಾಗಿಟ್ಟುಕೊಂಡು ವೈದ್ಯರ ವಿರುದ್ಧ ಕ್ರಮ ಜರುಗಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಯುಕ್ತರಿಗೆ ಸೂಚನೆ ನೀಡಿದ್ದರು.

    ಇದೊಂದು ಗಂಭೀರ ಪ್ರಕರಣವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿ ಬಡವರಿಂದ ಹಣ ವಸೂಲಿ ಮಾಡುವವರನ್ನ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಈ ರೀತಿಯ ಯಾವುದೇ ಪ್ರಕರಣ ಕಂಡುಬಂದರೂ, ತಕ್ಷಣ ಕ್ರಮ ಜರುಗಿಸಲು ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

    ಪ್ರಕರಣದ ಗಂಭೀರತೆಯನ್ನ ಅರಿತ ಆಯುಕ್ತರು ಲಂಚ ಪಡೆದ ಆರೋಪದ ಮೇಲೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ ರಾಮಚಂದ್ರ ಕೆ.ಸಿ ಅವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

    ಮಂಜುಳಾ ಎಂಬ 20 ವರ್ಷದ ಮಹಿಳೆಗೆ ಸಿಸೇರಿಯನ್ ಮಾಡಲು ರೂ.15,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಂಜುಳಾ ಅವರ ಪತಿ ಅಂಗಪ್ಪ ಅವರು, ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದ್ದರು.

    ಸಿಸೇರಿಯನ್ ಮುಗಿದು ಹೆಣ್ಣು ಮಗು ಜನಿಸಿದ ನಂತರ, ಅಂಗಪ್ಪ 10,000 ಹಣವನ್ನು ಆಸ್ಪತ್ರೆಯ ವಾರ್ಡ್ ಬಾಯ್ ವಾಹಿದ್‌ಗೆ ನೀಡಿದ್ದರು. ಲೋಕಾಯುಕ್ತ ಪೊಲೀಸರು ಪರಿಶೀಲನೆಗೆ ತೆರಳಿದಾಗ ಲಂಚ ಪಡೆದುಕೊಂಡಿರುವ ಆರೋಪ ಸಾಬೀತಾಗಿದೆ.

    ವೈದ್ಯ ರಾಮಚಂದ್ರ ಕೆ.ಸಿ ಸೂಚನೆ ಮೇರೆಗೆ ಹಣ ಪಡೆದಿರುವುದಾಗಿ ವಾರ್ಡ್ ಬಾಯ್ ಲೋಕಾಯುಕ್ತರ ತನಿಖೆಯಲ್ಲಿ ಹೇಳಿಕೆ ನೀಡಿದ್ದರು. ಇದೀಗ ವೈದ್ಯರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts