More

    ಸರ್ಕಾರಿ ಶಾಲೆಗೆ ಹೆಚ್ಚಿದ ನೋಂದಣಿ

    ಬ್ರಹ್ಮಾವರ: ಅನೇಕ ಕಡೆ ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿದ್ದರೆ, ಬ್ರಹ್ಮಾವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

    ಬ್ರಹ್ಮಾವರ ವಲಯದ 93 ಸರ್ಕಾರಿ ಶಾಲೆಗಳ ಪೈಕಿ ಇಲ್ಲಿ ಈ ಬಾರಿ ದಾಖಲೆಯ ವಿದ್ಯಾರ್ಥಿಗಳ ನೋಂದಣಿಯಾಗಿದೆ. ಕಳೆದ 5 ವರ್ಷದಿಂದ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರುತ್ತಲೇ ಇದೆ. ಕಾರಣ ಇಲ್ಲಿನ ಶಿಕ್ಷಣ ಮತ್ತು ವಿದ್ಯಾರ್ಥಿಗಳಿಗೆ ನೀಡುವ ಬೋಧನಾ ಕ್ರಮ.
    ಕರೊನಾ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತದಿಂದ ಖಾಸಗಿ ಶಾಲೆ ಬಿಟ್ಟು ಕೆಲವು ಭಾಗದ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ನೋಂದಣಿ ಹೆಚ್ಚುತ್ತಿದೆ ಎನ್ನಲು ಇಲ್ಲಿ ಸಾಧ್ಯವಿಲ್ಲ. ಏಕೆಂದರೆ 2015ರಲ್ಲಿ 272, 2016ರಲ್ಲಿ 338, 2017ರಲ್ಲಿ 397, 2018ರಲಿ ್ಲ398, 2019ರಲ್ಲಿ 438 ಆಗಿ ಈ ವರ್ಷ 465 ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

    ಎರಡು ವರ್ಷದಿಂದ ಆಂಗ್ಲ ಮಾಧ್ಯಮ ಕೂಡ ಆರಂಭಗೊಂಡ ಹಿನ್ನೆಲೆಯಲ್ಲಿ ಈ ವರ್ಷ ಸ್ಥಳೀಯ ಖಾಸಗಿ ಆಂಗ್ಲಮಾಧ್ಯಮ ಖಾಸಗಿ ಶಾಲೆಗಳಿಂದ 81 ವಿದ್ಯಾರ್ಥಿಗಳು ಇಲ್ಲಿಗೆ ಸೇರಿದ್ದಾರೆ. 1895ರಲ್ಲಿ ಆರಂಭಗೊಂಡ 125 ವರ್ಷದ ಇತಿಹಾಸವಿರುವ ಈ ಶಾಲೆಯಲ್ಲಿ ಶಿಕ್ಷಣ ಪಡೆದವರು ದೇಶದ ಅನೇಕ ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದವರೂ ಇದ್ದಾರೆ.

    16 ಮಕ್ಕಳಿಗೆ ಸ್ಮಾರ್ಟ್‌ಫೋನ್ ಇಲ್ಲ: ಉಡುಪಿ, ಹೆಬ್ರಿ, ಕುಂದಾಪುರ, ಕೊರ್ಗಿ, ಕೂರಾಡಿ ಭಾಗದಿಂದ ಬರುವ ಪ್ರಸಕ್ತ ವರ್ಷದ 465 ವಿದ್ಯಾರ್ಥಿಗಳಲ್ಲಿ 16ಮಕ್ಕಳಿಗೆ ಸ್ಮಾರ್ಟ್‌ಫೋನ್ ಇಲ್ಲ ಎನ್ನುವ ಕೊರತೆ ಇದೆ.

    450 ವಿದ್ಯಾರ್ಥಿಗಳಿಗೆ 13 ಶಿಕ್ಷಕರು: 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೂ ಶಾಲೆಗೆ ಶಿಕ್ಷಕರ ಕೊರತೆಯಿದೆ. 13 ಮಂದಿ ಶಿಕ್ಷಕಿಯರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 3 ಶಿಕ್ಷಕಿಯರ ಕೊರತೆ ಇದೆ. ಇದಲ್ಲದೆ ಮುಖ್ಯಶಿಕ್ಷಕರ ಹುದ್ದೆ ಖಾಲಿ ಇದ್ದು, ಪ್ರಭಾರವಾಗಿ ಹಿರಿಯ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಶಾಲೆಯಲ್ಲಿ ಕಳೆದ ಕೆಲವು ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಶಿಕ್ಷಣ ಇಲಾಖೆಯ ಎಲ್ಲ ಆದೇಶ ಪಾಲನೆ ಮಾಡಿಕೊಂಡು ನಮ್ಮ ಸಿಬ್ಬಂದಿ ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಕಾರ್ಯ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆ.
    -ನಂದಿನಿ, ಪ್ರಭಾರ ಮುಖ್ಯಶಿಕ್ಷಕಿ

    ಜನರಲ್ಲಿನ ಸರ್ಕಾರಿ ಉದ್ಯೋಗ ಬೇಕು ಸರ್ಕಾರಿ ಶಾಲೆಗಳು ಬೇಡ ಎನ್ನುವ ತಾತ್ಸಾರ ಮನೋಭಾವ ಸರಿಯಲಿ. ಸರ್ಕಾರ ಎಲ್ಲ ರೀತಿಯ ಸೌಲಭ್ಯ ನೀಡುವಾಗ ಜನರು ಬದಲಾಗಬೇಕು. ಎಲ್ಲ ಕಡೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
    -ಪಾಂಡುರಂಗ ಕುಲಾಲ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

    ಬ್ರಹ್ಮಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಚಟುವಟಿಕೆಯನ್ನು ಗಮನಿಸುತ್ತಾ ಇದ್ದೇನೆ. ಅಲ್ಲಿಗೆ ಅಗತ್ಯವಿರುವ ಇಬ್ಬರು ಶಿಕ್ಷಕರನ್ನು ತಕ್ಷಣವೇ ನೇಮಿಸಲಾಗುವುದು.
    -ಒ.ಆರ್.ಪ್ರಕಾಶ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts