More

    ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಬಹಿಷ್ಕರಿಸಿ

    ಶಿವಮೊಗ್ಗ: ರೈತರು ಹಾಗೂ ಮಲೆನಾಡಿನ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮವನ್ನು ರೈತರು, ಹೋರಾಟಗಾರರು ಬಹಿಷ್ಕರಿಸುವಂತೆ ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ಸಂಚಾಲಕ ತೀ.ನ.ಶ್ರೀನಿವಾಸ್ ಮನವಿ ಮಾಡಿದರು.

    ಡಾ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಿ ಕೃಷಿ ಉತ್ಪನ್ನಗಳ ವೆಚ್ಚದ ಮೂರುಪಟ್ಟು ಬೆಲೆ ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇದುವರೆಗೂ ವರದಿ ಜಾರಿ ಮಾಡಿಲ್ಲ. ಸುಗ್ರೀವಾಜ್ಞೆಗಳ ಮೂಲಕ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಅದನ್ನೂ ಹಿಂಪಡೆದಿಲ್ಲ. ಎಂಎಸ್‌ಪಿಯನ್ನು ಶಾಸನ ಬದ್ಧಗೊಳಿಸುವಂತೆ ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದರೂ ಅದಕ್ಕೆ ಸ್ಪಂದಿಸಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ವೇದಮೂರ್ತಿ, ಆರ್ಮುಗಂ, ಅರುಣ್ ಸುದ್ದಿಗೋಷ್ಠಿಯಲ್ಲಿದ್ದರು.
    ಗಾಂಧಿಪಾರ್ಕ್ ಎದುರು ಏಕಾಂಗಿ ಪ್ರತಿಭಟನೆ: ಭದ್ರಾವತಿ ವಿಐಎಸ್‌ಎಲ್ ಪುನಶ್ಚೇತನಕ್ಕೆ 3 ಸಾವಿರ ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ಶಿವಮೊಗ್ಗ ಗಾಂಧಿಪಾರ್ಕ್ ಎದುರಿನ ಬಸವೇಶ್ವರ ಪ್ರತಿಮೆ ಎದುರು ಏಕಾಂಗಿಯಾಗಿ ಮಾ.18ರಂದು ಬೆಳಗ್ಗೆ 11ರಿಂದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಮುಗಿಯುವವರೆಗೂ ಪ್ರತಿಭಟನೆ ನಡೆಸುವುದಾಗಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನಗರಕ್ಕೆ ಬರಲಿದ್ದು ಅವರಿಗೆ ಈ ಸಂಬಂಧ ಮನವಿ ನೀಡಲಾಗುತ್ತದೆ. ಅದಕ್ಕೆ ಪೊಲೀಸ್ ಇಲಾಖೆ ಅವಕಾಶ ಮಾಡಿಕೊಡಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈಗ ಮನವಿ ನೀಡಲು ಬಿಡದಿದ್ದರೆ ಮುಂದಿನ ದಿನಗಳಲ್ಲಿ ಮೋದಿ ಸೇರಿದಂತೆ ಶಿವಮೊಗ್ಗಕ್ಕೆ ಬರುವ ಎಲ್ಲ ನಾಯಕರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರವಿಕುಮಾರ್, ಗೋಪಾಲರಾವ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
    ಸುಳ್ಳುಗಳೇ ಗ್ಯಾರಂಟಿ: ಸುಳ್ಳುಗಳೇ ಮೋದಿ ಗ್ಯಾರಂಟಿ. ಮೋದಿ ಅವರು ಶಿವಮೊಗ್ಗಕ್ಕೆ ಬರುವ ಜತೆಗೆ ಸುಳ್ಳಿನ ಕಂತೆಯನ್ನು ಹೊತ್ತು ತರುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮ್ಮದ್ ಆರೋಪಿಸಿದರು. 2014ರಿಂದಲೂ ಸುಳ್ಳಿನ ಸರಮಾಲೆಯನ್ನು ಎಳೆಯುತ್ತ ಭಾರತೀಯರಿಗೆ ವಂಚಿಸುತ್ತ ಬಂದಿದ್ದಾರೆ. ಈ ಚುನಾವಣೆಯಲ್ಲಾದರೂ ಈ ಸುಳ್ಳುಗಾರನ ಬಗ್ಗೆ ಮತದಾರ ಎಚ್ಚರಿಕೆ ವಹಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಕರ್ನಾಟಕಕ್ಕೆ ತುಂಬ ಅನ್ಯಾಯ ಮಾಡಿದ್ದಾರೆ. ಮಹದಾಯಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಹಣ ಕೊಡಲಿಲ್ಲ. ಕುಟುಂಬ ರಾಜಕಾರಣ ತಡೆಯಲಿಲ್ಲ ಎಂದರು. ಪ್ರಮುಖರಾದ ಹರೀಶ್, ನಾಗರಾಜ್, ಸಗೀರ್, ಎಜಾಸ್ ಪಾಶ, ಯೂಸೂಫ್, ಜಫ್ರೊಲ್ಲಾ ಸುದ್ದಿಗೋಷ್ಠಿಯಲ್ಲಿದ್ದರು.
    ವಿಐಎಸ್‌ಎಲ್, ಎಂಪಿಎಂಗೆ ಹೂಡಿಕೆ ಮಾಡಿ: ಭದ್ರಾವತಿಯ ವಿಐಎಸ್‌ಎಲ್ ಮತ್ತು ಎಂಪಿಎಂ ಪುನರಾರಂಭವಾಗುವಂತೆ ಮಾಡಬೇಕು ಮತ್ತು ಅದಕ್ಕೆ ಬೇಕಾದ ಬಂಡವಾಳವನ್ನು ಪ್ರಧಾನಿ ನರೇಂದ್ರ ಮೋದಿ ಒದಗಿಸಬೇಕೆಂದು ಭದ್ರಾವತಿ ಹೋರಾಟಗಾರ ಜಾನ್ ಬೆನ್ನಿ ಮನವಿ ಮಾಡಿದರು. 2 ಸಾವಿರ ಕೆಲಸಗಾರರಿದ್ದ ವಿಐಎಸ್‌ಎಲ್ ಕಾರ್ಖಾನೆ ಬರಿದಾಗುತ್ತಿದೆ. ಕೇವಲ 300 ಜನರು ಕೆಲಸ ಮಾಡುತ್ತಿದ್ದಾರೆ. ಎಲ್ಲ ಸಂಪನ್ಮೂಲ ಮತ್ತು ಅವಕಾಶಗಳಿದ್ದರೂ ಬಂಡವಾಳ ಹಾಕಲು ವಿಫಲವಾಗಿದ್ದರಿಂದ, ಅದನ್ನು ಬಳಸಿಕೊಳ್ಳುವಲ್ಲಿ ಸರ್ಕಾರ ಹಿಂದೆಬಿದ್ದಿದೆ. ಹೂಡಿಕೆಗೆ ಮುಂದಾಗುವಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ಈ ಎರಡೂ ಕಾರ್ಖಾನೆ ಬಂದ್ ಆದ ನಂತರ ಭದ್ರಾವತಿಯ ಆರ್ಥಿಕ ಸ್ಥಿತಿ ನೆಲಕಚ್ಚಿದೆ. ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಕಾರ್ಖಾನೆಯ ಭವಿಷ್ಯ ಕೇಂದ್ರದ ಕೈಲಿದೆ. ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವನ್ನು ಕಂಡಿದ್ದ ಭದ್ರಾವತಿಗೆ ಮತ್ತೆ ಅಂತಹ ದಿನ ಬರುವಂತೆ ಮಾಡಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts