More

    ಮರುಪೂರಣದಿಂದ ಜಲ ಸಮೃದ್ಧಿ, ಕೊಳವೆಬಾವಿ, ಬಾವಿಗಳಲ್ಲಿ ಸಾಕಷ್ಟು ನೀರು

    ಬೈಂದೂರು: ಕುಂಭಾಶಿಯ ಅಶೋಕ ಶೆಟ್ಟಿಗಾರ -ಜ್ಯೋತಿಲಕ್ಷ್ಮೀ ದಂಪತಿ ಗುಡ್ಡ ಪ್ರದೇಶದ ಎರಡು ಎಕರೆ ವಿಸ್ತೀರ್ಣದಲ್ಲಿ ಕೃಷಿ, ಹೈನುಗಾರಿಕೆ ಯಶಸ್ವಿಯಾಗಿ ನಡೆಸುತ್ತಿದ್ದು, ಜಲ ಮರುಪೂರಣದಿಂದ ಕೊಳವೆಬಾವಿ, ಬಾವಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸಾಕಷ್ಟು ನೀರು ಲಭಿಸಿರುವುದು ಈ ಯಶೋಗಾಥೆಗೆ ಕಾರಣ.
    ಹುಬ್ಬಳ್ಳಿಯಲ್ಲಿ ಉದ್ಯಮ ನಡೆಸುತ್ತಿದ್ದ ಇವರು ಅಲ್ಲಿಂದ ವಾಪಸಾಗಿ ಆನೆಗುಡ್ಡೆ ವಿನಾಯಕ ದೇವಸ್ಥಾನ ಸಮೀಪ ವಕ್ವಾಡಿ ರಸ್ತೆ ಪಕ್ಕ ಗುಡ್ಡ ಪ್ರದೇಶದಲ್ಲಿ ಜಮೀನು ಹೊಂದಿದ್ದು, ಮನೆಯಂಗಳದಲ್ಲಿ 60 ಅಡಿ ಆಳದ ಬಾವಿ ನಿರ್ಮಿಸಿದ್ದರು. ಸಾಕಷ್ಟು ನೀರು ಸಿಗದ ಕಾರಣ ಪಕ್ಕದಲ್ಲೆ 630 ಅಡಿ ಆಳದ ಬೋರ್‌ವೆಲ್ ಕೊರೆಸಿದ್ದರು. ಅದರ ಸುತ್ತ ಜಲಮರುಪೂರಣ ವ್ಯವಸ್ಥೆ ನಡೆಸಿದ್ದು, ಪ್ರಸ್ತುತ ಅಂತರ್ಜಲ ಮಟ್ಟ ಏರಿಕೆಯಿಂದ ಮಳೆಗಾಲ ಪೂರ್ವದಲ್ಲೂ ಬಾವಿಯಲ್ಲಿ 25 ಅಡಿಯಷ್ಟು ನೀರು ನಿಲ್ಲುವಂತಾಗಿದೆ. ಅಲ್ಲದೆ ಪರಿಸರದ ಇತರ ಬಾವಿ, ಕೊಳವೆಬಾವಿಗಳಲ್ಲೂ ನೀರಿನ ಮಟ್ಟ ವೃದ್ಧಿಯಾಗಿದೆ.

    ಬೋರ್‌ವೆಲ್ ಮರುಪೂರಣ ಹೇಗೆ?
    ಐದು ವರ್ಷದ ಹಿಂದೆ ಭೂತಜ್ಞ ದೇವರಾಜ ರೆಡ್ಡಿ ಸಲಹೆಯಿಂದ ಬೋರ್‌ವೆಲ್‌ಗೆ ಮರುಪೂರಣ ವ್ಯವಸ್ಥೆ ಮಾಡಿದ್ದರು. ಕೊಳವೆಬಾವಿ ಸುತ್ತ 12 ಅಡಿ ಆಗಲ ಮತ್ತು ಆಳದ ಗುಂಡಿ ತೋಡಿ ಪೈಪ್ ಸುತ್ತ ಮೂರು ಪದರದ ಜಾಲರಿ ಸುತ್ತಿ ಕ್ರಮವಾಗಿ ದೊಡ್ಡ ಸಣ್ಣ ಬೋಲ್ಡ್ರಸ್, ಜಲ್ಲಿಕಲ್ಲು ಮತ್ತು ಜಾಲರಿಯ ತೆಳು ಹಾಳೆ ಹಾಸಿ ನಂತರ ಗೊಜ್ಜುಕಲ್ಲು ಹಾಕಿ ಹೊಂಡ ತುಂಬಿಸಿ ಅದರ ಪಕ್ಕದಲ್ಲಿ ಅಷ್ಟೇ ಆಗಲದ ಗುಂಡಿ ನಿರ್ಮಿಸಿ, ಮನೆಯ ಮಾಡು, ಮನೆಯಂಗಳ, ತೋಟ ಎಲ್ಲ ದಿಕ್ಕಿನ ನೀರು ಬೋರ್‌ವೆಲ್ ಗುಂಡಿಗೆ ಹರಿಯುವಂತೆ ಮಾಡಿದ್ದಾರೆ. ಮರುಪೂರಣದ ನಂತರ ನೀರಿಲ್ಲದ ಬಾವಿಯಲ್ಲಿ ನೀರು ಏರಿಕೆಯಾಗಿತ್ತು. ಬೋರ್‌ವೆಲ್‌ನಲ್ಲೂ ನೀರು ತುಂಬಿದೆ.ನಾಡಿನಾದ್ಯಂತ ಪ್ರಚಾರ ಪಡೆದ ಮರುಪೂರಣದ ಯಶಸ್ಸು ಕಂಡ ಅಶೋಕ ಶೆಟ್ಟಿಗಾರರ ಸಲಹೆ ಪಡೆಯಲು ಜನರು ಈಗಲೂ ಬರುತ್ತಿದ್ದಾರೆ.

    ಸಾವಯವ ಕೃಷಿ, ದೇಸಿ ಹೈನುಗಾರಿಕೆ
    ಅಶೋಕ ಶೆಟ್ಟಿಗಾರ ಕುಟುಂಬ ದೇಸೀ ದನಗಳನ್ನು ಸಾಕಿ ತಾವೇ ಮಾರುಕಟ್ಟೆ ಮಾಡಿ ಉತ್ತಮ ದರಕ್ಕೆ ಹಾಲು ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಮಳೆಗಾಲದಲ್ಲಿ ಭತ್ತದ ಬೇಸಾಯ ಮಾಡುತ್ತಾರೆ. ಗದ್ದೆ, ತೋಟ, ತರಕಾರಿ ಬೆಳೆಗಳಿಗೆ ಸೆಗಣಿ ಗೊಬ್ಬರ ಬಳಸುತ್ತಾರೆ. ಪತ್ನಿ ಜ್ಯೋತಿಲಕ್ಷ್ಮೀ ಕೃಷಿ ಮತ್ತು ಹೈನುಗಾರಿಕೆ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡುತ್ತಾರೆ. ಮಾಹಿತಿಗೆ ಅಶೋಕ ಶೆಟ್ಟಿಗಾರ್ (9035137899) ಸಂಪರ್ಕಿಸಬಹುದು.

    ಗುಡ್ಡ ಪ್ರದೇಶದಲ್ಲಿ ನೀರಿನಾಶ್ರಯಕ್ಕಾಗಿ ಬೋರ್‌ವೆಲ್ ಮರುಪೂರಣದಿಂದ ಯಶಸ್ಸು ಕಂಡ ಅಶೋಕ್ ಶೆಟ್ಟಿಗಾರ ಅವರ ಸಾಧನೆ ಮೆಚ್ಚುವಂಥದ್ದು. ಹೆಚ್ಚಿನವರು ಇದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಾರೆ. ಮಳೆಗಾಲ ಬಂದು ಹೇರಳವಾಗಿ ನೀರು ಸಿಕ್ಕಾಗ ಬೋರ್‌ವೆಲ್ ಮರುಪೂರಣ, ಇಂಗುಗುಂಡಿ ಕಡೆಗೆ ಗಮನ ಹರಿಸದೆ ಮತ್ತೆ ಅವರಿಗೆ ನೆನಪಾಗುವುದು ನೀರಿಲ್ಲದ ಬೇಸಿಗೆಯಲ್ಲಿ ಮಾತ್ರ.
    ರವೀಂದ್ರ ಶೆಟ್ಟಿಗಾರ, ಹೂವಿನಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts