More

    ಏಕಮುಖ ಪ್ರೇಮವೈಫಲ್ಯದಿಂದ ಡಿ.ಕೆ.ರವಿ ಬದುಕೇ ಅಂತ್ಯಗೊಂಡಿದ್ದು ಬೇಸರದ ಸಂಗತಿ: ನಗ್ನಸತ್ಯ ಪುಸ್ತಕ ಬಿಡುಗಡೆಯಲ್ಲಿ ಸಿದ್ದರಾಮಯ್ಯ..

    ಬೆಂಗಳೂರು: ಆರು ವರ್ಷಗಳ ಹಿಂದೆ ತೀವ್ರ ಸಂಚಲನ ಉಂಟು ಮಾಡಿದ್ದ ಐಎಎಸ್ ಅಧಿಕಾರಿ ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣ ಇದೀಗ ಪುಸ್ತಕದ ರೂಪ ಪಡೆದುಕೊಂಡಿದ್ದು, ರವಿ ವೃತ್ತಿ, ವೈಯಕ್ತಿಕ ಬದುಕು, ಮಹಿಳಾ ಅಧಿಕಾರಿಯೊಬ್ಬರೊಂದಿಗಿನ ಒಡನಾಟ ಸೇರಿ ಪುಸ್ತಕದಲ್ಲಿರುವ ಅನೇಕ ವಿಚಾರಗಳು ಮತ್ತೊಮ್ಮೆ ಚರ್ಚೆ ಹುಟ್ಟುಹಾಕುವ ಸಾಧ್ಯತೆ ದಟ್ಟವಾಗುತ್ತಿದೆ.

    ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದಿರುವ ಡಿ.ಕೆ. ರವಿ ದುರಂತ ಕತೆ ‘ನಗ್ನಸತ್ಯ’ ಹಾಗೂ ಅದರ ಇಂಗ್ಲಿಷ್ ಆವೃತ್ತಿ ‘ಲ್ಯಾಂಡ್, ಲಸ್ಟ್ ಆ್ಯಂಡ್ ಆಡಿಯೋ ಟೇಪ್ಸ್’ ಪುಸ್ತಕಗಳು ಶನಿವಾರ ಬಿಡುಗಡೆಗೊಂಡಿದ್ದು, ಅದರಲ್ಲಿ ಡಿ.ಕೆ. ರವಿ ಅವರ ಸಾವಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ.

    ನಗರದ ಅರಮನೆ ರಸ್ತೆಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

    ಪುಸ್ತಕದಲ್ಲಿನ ಕೆಲ ಪ್ರಮುಖ ವಿಚಾರಗಳು

    • ಡಿ.ಕೆ. ರವಿ ಅವರ ಹಠಾತ್ ಜನಪ್ರಿಯತೆ ಮತ್ತು ದುರಂತ ಪತನದ ಹಿಂದೆ ಖಿನ್ನತೆ ಅಡಗಿತ್ತು.
    • ಕೋಲಾರ ಡಿಸಿಯಾಗಿ ಮರಳು ಮತ್ತು ಭೂಮಾಫಿಯಾ ವಿರುದ್ಧ ಅವರು ಕೈಗೊಂಡ ದಿಟ್ಟ ಕಾರ್ಯಾಚರಣೆಗಳು ಅವರಿಗೆ ಖ್ಯಾತಿ ನೀಡಿದ್ದವು. ಜನಮಾನಸದಲ್ಲಿ ಅವರು ರಾಜಿ ಮಾಡಿಕೊಳ್ಳದ ದಿಟ್ಟ ಅಧಿಕಾರಿ ಎಂಬ ಭಾವನೆ ಮೂಡಿತ್ತು. ಮಾಧ್ಯಮದ ನಿಕಟ ಜಾಲ ಸಂಪರ್ಕವನ್ನು ಅವರು ಬಳಸಿಕೊಂಡಿದ್ದರು.
    • ಸ್ನೇಹಿತರ ಜತೆಗೂಡಿ ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿದು, ಕನಿಷ್ಠ 500 ಕೋಟಿ ರೂ. ಗಳಿಸುವ ಉದ್ದೇಶ ಹೊಂದಿದ್ದರು. ಹಣ ಮಾಡಿದ ನಂತರ ಸೇವೆ ತೊರೆದು ಉದ್ಯಮಿಯಾಗುವ ಕನಸು ಕಂಡಿದ್ದರು. ಆದರೆ, ರಿಯಲ್ ಎಸ್ಟೇಟ್ ವ್ಯಾಪಾರ ತಿಮಿಂಗಿಲಗಳಿಂದ ತುಂಬಿದ್ದು, ಅಲ್ಲಿ ವೇಗವಾಗಿ ಹಣ ಗಳಿಸುವುದು ಯೋಚಿಸಿದಷ್ಟು ಸುಲಭವಲ್ಲ ಎಂದು ಮನವರಿಕೆಯಾದಾಗ ನಿರಾಶೆಗೊಂಡರು.
    • ಒಂದೆಡೆ ಭೂಮಿಯನ್ನು ಬೆನ್ನಟ್ಟುತ್ತಿರುವಾಗಲೇ ಮತ್ತೊಂದೆಡೆ ನೆರೆಯ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಐಎಎಸ್ ಅಧಿಕಾರಿಯೊಂದಿಗೆ ಭಾವನಾತ್ಮಕ ನಂಟಿನಲ್ಲಿ ಸಿಕ್ಕಿಕೊಂಡರು. ಇದು ನೋಡುಗರಿಗೆ ಏಕಮುಖ ಪ್ರೇಮ ಪ್ರಕರಣವೆಂದು ತೋರುತ್ತಿತ್ತು.
    • ರವಿಯ ಗೀಳು, ಪ್ರೀತಿ ಮತ್ತು ವಾತ್ಸಲ್ಯಗಳು ಇಬ್ಬರ ದಾಂಪತ್ಯ ಮತ್ತು ವೃತ್ತಿ ಜೀವನವನ್ನು ಹಾಳುಗೆಡವುತ್ತದೆ ಎಂಬುದನ್ನು ಅರಿತುಕೊಂಡ ಮಹಿಳಾ ಅಧಿಕಾರಿ ರವಿ ಅವರನ್ನು ಕೈಬಿಟ್ಟರು. ಇದು ರವಿ ಅವರ ಬದುಕು ಬೇಗನೆ ದುರಂತದಲ್ಲಿ ಅಂತ್ಯಗೊಳ್ಳಲು ಬಹುಮಟ್ಟಿಗೆ ಕಾರಣವಾಯಿತು.

    ವರ್ಗಾವಣೆ ಖುಷಿ ಕೊಟ್ಟಿರಲಿಲ್ಲ: ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯ, ಕೋಲಾರ ಡಿಸಿ ಆಗಿದ್ದ ಡಿ.ಕೆ. ರವಿ ಅವರನ್ನು ಬೆಂಗಳೂರಿಗೆ ವರ್ಗಾಯಿಸುವಂತೆ ಅವರ ಮಾವ ಹನುಮಂತರಾಯಪ್ಪ ಹಾಗೂ ರಮೇಶ್ ಕುಮಾರ್ ಕೇಳಿಕೊಂಡಿದ್ದರು. ಆದರೆ, ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆ ಖಾಲಿ ಇಲ್ಲ ಎಂದು ತಿಳಿಸಿ, ವಾಣಿಜ್ಯ ತೆರಿಗೆ ಜಾರಿ ಹೆಚ್ಚುವರಿ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಿದ್ದೆ. ಆ ಕೆಲಸ ರವಿ ಅವರಿಗೆ ಅಷ್ಟಾಗಿ ಖುಷಿ ಕೊಟ್ಟಿರಲಿಲ್ಲ. ಅವರಿಗೆ ಕೋಲಾರ ಡಿಸಿಯಾಗಿಯೇ ಮುಂದುವರಿಯುವ ಇಚ್ಛೆ ಇತ್ತು ಎಂದರು.

    ಏಕಮುಖ ಪ್ರೀತಿ: ಡಿ.ಕೆ. ರವಿ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಜತೆ ಜತೆಗೆ ಅವರು ಪ್ರಚಾರಪ್ರಿಯರೂ ಆಗಿದ್ದರು. ಕೋಲಾರದಲ್ಲಿ ಡಿಸಿಯಾಗಿದ್ದ ಸಂದರ್ಭದಲ್ಲಿ ಯಾವುದೇ ಕಾರ್ಯಾಚರಣೆ ನಡೆಸುವ ಮೊದಲೇ ಮಾಧ್ಯಮದವರಿಗೆ ತಿಳಿಸಿ, ಪ್ರಚಾರ ಪಡೆಯುತ್ತಿದ್ದರು ಎಂಬ ಮಾಹಿತಿ ನನಗೆ ಆಗಾಗ ಬರುತ್ತಿತ್ತು. ಪುಸ್ತಕದಲ್ಲಿ ಹೇಳಿರುವಂತೆ, ಕಾನೂನು ರೀತಿಯಲ್ಲಿಯೇ ಕನಿಷ್ಠ 500 ಕೋಟಿಯಾದರೂ ಸಂಪಾದನೆ ಮಾಡಿ ದೊಡ್ಡ ಉದ್ಯಮಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಅದಕ್ಕಾಗಿಯೇ ತಮ್ಮ ಸ್ನೇಹಿತರ ಜತೆ ಸೇರಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಕೈ ಹಾಕಿದ್ದರು. ಅಪಾರ ಹಣ ಸಂಪಾದಿಸಿದ ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಉದ್ಯಮಿಯಾಗಿಯೇ ಹೆಸರು ಮಾಡಬೇಕೆಂಬ ಆಸೆ ಹೊಂದಿದ್ದರು. ಆದರೆ, ಅದ್ಯಾವುದೂ ಸಾಧ್ಯವಾಗಲಿಲ್ಲ. ಇದರ ನಡುವೆಯೇ ಏಕಮುಖ ಪ್ರೀತಿಯಲ್ಲಿ ಬಿದ್ದ ಅವರು, ಪ್ರೇಮ ವೈಫಲ್ಯದಿಂದ ತಮ್ಮ ಬದುಕಿಗೇ ಅಂತ್ಯ ಹಾಡುವ ನಿರ್ಧಾರ ಕೈಗೊಂಡಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ಸಿದ್ದರಾಮಯ್ಯ ಹೇಳಿದರು.

    ಪಾರದರ್ಶಕ ತನಿಖೆಯಾಗಿತ್ತು: ಡಿ.ಕೆ. ರವಿ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎನ್ನುವುದು ಸಿಬಿಐ ತನಿಖೆಯಲ್ಲಿ ದೃಢಪಟ್ಟಿತು. ಆದರೆ, ಅದಕ್ಕೂ ಮೊದಲೇ ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಘಟನೆಯನ್ನು ಸಂಪೂರ್ಣ ಪಾರದರ್ಶಕವಾಗಿ ತನಿಖೆ ನಡೆಸಿತ್ತು. ಡಿ.ಕೆ. ರವಿ ಮೃತಪಟ್ಟಾಗ ಅಧಿವೇಶನ ನಡೆಯುತ್ತಿತ್ತು. ವಿರೋಧ ಪಕ್ಷಗಳಾಗಿದ್ದ ಬಿಜೆಪಿ ಹಾಗೂ ಜೆಡಿಎಸ್ ಅದನ್ನೇ ಅಸ್ತ್ರವನ್ನಾಗಿಸಿಕೊಂಡು ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದವು. ಅಂದಿನ, ಗೃಹಮಂತ್ರಿಯಾಗಿದ್ದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಕೆ.ಜೆ. ಜಾರ್ಜ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ರಾಜೀನಾಮೆ ಕೊಡಿಸುವ ಯತ್ನವನ್ನೂ ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದರು.

    ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್, ಅನಂತಕುಮಾರ್ ಹಾಗೂ ಸದಾನಂದಗೌಡ ಅಂದಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಳಿ ತೆರಳಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಡ ಹೇರಿದ್ದರು. ಆದರೆ, ನಾನು ಅಂಜಲಿಲ್ಲ. ಉಪ್ಪು ತಿಂದವರು ನೀರು ಕುಡಿಯಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ನಾನೇ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದೆ. ತನಿಖೆಯ ಎಲ್ಲ ಹಂತಗಳಲ್ಲೂ ಅದು ಆತ್ಮಹತ್ಯೆ ಎಂದು ದೃಢಪಟ್ಟು, ಕೊಲೆ ಎಂಬ ಆರೋಪಗಳನ್ನು ಹುಸಿಗೊಳಿಸಿದವು. ಸತ್ಯ ಯಾವತ್ತಿದ್ದರೂ ಹೊರಗೆ ಬರುತ್ತದೆ, ಇಂದಲ್ಲ ನಾಳೆ ಸಿಗಬೇಕಾದ ನ್ಯಾಯ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ ಎಂದರು.

    ಐದಾರು ಪ್ರಕರಣ ಸಿಬಿಐಗೆ: ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೋ ಆಫ್​ ಇನ್ವೆಸ್ಟಿಗೇಷನ್ ಎಂದು ಕರೆಯುತ್ತಿದ್ದ ಬಿಜೆಪಿಯೇ ಪ್ರಕರಣವನ್ನು ಸಿಬಿಐಗೆ ವಹಿಸಲು ಆಗ್ರಹಿಸುತ್ತಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಇದೆ ಎನ್ನುವುದು ಗೊತ್ತಿದ್ದರೂ, ನನ್ನ ಸರ್ಕಾರದ ಅವಧಿಯಲ್ಲಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಒಂದಂಕಿ ಲಾಟರಿ ದಂಧೆ, ಡಿ.ಕೆ. ರವಿ ಆತ್ಮಹತ್ಯೆ ಸೇರಿ 5-6 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆ. ಡಿ.ಕೆ. ರವಿ ಪ್ರಕರಣ ಸಿಬಿಐಗೆ ವಹಿಸುವ ಪ್ರಕರಣ ಅಲ್ಲ ಎನ್ನುವುದು ಗೊತ್ತಿದ್ದರೂ, ಸತ್ಯ ಏನೆಂದು ಜನಕ್ಕೆ ತಿಳಿಯಲಿ ಎನ್ನುವ ಉದ್ದೇಶದಿಂದಲೇ ಸಿಬಿಐ ತನಿಖೆಗೆ ವಹಿಸಿದ್ದೆ. ಆದರೆ, ಬಿಜೆಪಿ ಸರ್ಕಾರ ಒಂದೇ ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿಲ್ಲ ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ಭ್ರಷ್ಟ ವ್ಯವಸ್ಥೆಗೆ ಎಲ್ಲರೂ ಕಾರಣ: ಇಂದಿನ ವ್ಯವಸ್ಥೆ ಕುಲಗೆಟ್ಟು ಹೋಗಿದೆ. ಈ ಭ್ರಷ್ಟ ಮತ್ತು ಜಾತಿ ವ್ಯವಸ್ಥೆಗೆ ನಾವೆಲ್ಲರೂ ಕಾರಣರಾಗಿದ್ದೇವೆ. ಎಲ್ಲಿಯವರೆಗೆ ಇಂಥ ವ್ಯವಸ್ಥೆಯನ್ನು ವಿರೋಧಿಸದೆ ಸಮಾಜ ಸಹಿಸಿಕೊಳ್ಳುವುದೋ ಅಲ್ಲಿಯವರೆಗೆ ಇದು ಮುಂದುವರಿಯುತ್ತದೆ. ಇಂಥ ವ್ಯವಸ್ಥೆಗಾಗಿ ಯಾರನ್ನು ದೂಷಿಸಬೇಕು, ಯಾರ ಮೇಲೆ ಆರೋಪ ಹೊರಿಸಬೇಕು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮಾಜಿ ಸಚಿವ ಎಂ.ಸಿ. ನಾಣಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಲ್ಲಿ ಭ್ರಷ್ಟರು ಹೆಚ್ಚಾಗುತ್ತಿದ್ದಾರೆ. ಪ್ರಾಮಾಣಿಕರು ಹಾಗೂ ಬದ್ಧತೆ ಇರುವ ಅಧಿಕಾರಿಗಳಿದ್ದರೂ ಅವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಡಿ.ಕೆ. ರವಿ ಅವರಂಥ ಅಧಿಕಾರಿಯ ಸಾವಿಗೆ ಭೂಮಿ, ವಾಂಛೆಗಳು ಹೇಗೆ ಕಾರಣವಾದವು ಎಂಬುದನ್ನು ವಿವರಿಸುವ ಸಮಗ್ರ ತನಿಖಾ ವರದಿಯ ವಿವರಗಳನ್ನು ಈ ಪುಸ್ತಕ ಒಳಗೊಂಡಿದೆ. ಡಿ.ಕೆ. ರವಿ ಅವರಿಗೆ ತಮ್ಮ ಸಹೋದ್ಯೋಗಿ ಮಹಿಳಾ ಅಧಿಕಾರಿಯೊಬ್ಬರೊಂದಿಗಿದ್ದ ಒಡನಾಟದ ವಿವರವೂ ಇದೆ. ಡಿ.ಕೆ. ರವಿ ಸಾವನ್ನು ಅಂದಿನ ವಿರೋಧಪಕ್ಷಗಳು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದವು. ಮಾಧ್ಯಮಗಳೂ ಮನಬಂದಂತೆ ಸುದ್ದಿಗಳನ್ನು ಬಿತ್ತರಿಸಿದ್ದವು. ಇಂಥ ಸಂದರ್ಭಗಳಲ್ಲಿ ಮಾಧ್ಯಮಗಳು ಸಮಯೋಚಿತವಾಗಿ ಕೆಲಸ ನಿರ್ವಹಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಲೇಖಕ ರಾಮಕೃಷ್ಣ ಉಪಾಧ್ಯ, ಚಿತ್ರನಟ ಹಾಗೂ ಪರಿಸರ ವಾದಿ ಸುರೇಶ್ ಹೆಬ್ಳೀಕರ್ ಉಪಸ್ಥಿತರಿದ್ದರು.

    ಇಲ್ಲಿ ಇಂದು ಮತ್ತೆ ಭೂಕಂಪ!; ಪದೇಪದೆ ಭೂಮಿ ಕಂಪಿಸುತ್ತಿರುವುದರಿಂದ ಕಂಗೆಟ್ಟಿರುವ ಜನತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts