More

    ವಿಶೇಷ; ಒಂದೇ ಒಂದು ವೈರಸ್​ನಿಂದ ಬಾಲಿವುಡ್​ಗೆ ಆದ ನಷ್ಟ ಎಷ್ಟು ಗೊತ್ತ? ಎರಡು ವರ್ಷ ಹಿಂದೆ ಹೋಯ್ತು ಬಿಟೌನ್!

    ಬಾಲಿವುಡ್​ನಲ್ಲಿ ಹಲವು ನಿರೀಕ್ಷೆಗಳು ಮತ್ತು ಹೊಸತುಗಳ ಮೂಲಕ 2020 ಆರಂಭವಾಗಿತ್ತು. ಹೊಸ ಹೊಸ ಸಿನಿಮಾಗಳ ಸೃಷ್ಟಿಸಿದ್ದ ಕ್ರೇಜ್​ ನೋಡಿದರೆ ಬಾಲಿವುಡ್​ ಲೆವೆಲ್​ ಮತ್ತೊಂದು ಹೆಜ್ಜೆ ಎತ್ತರಕ್ಕೆ ಏರಲಿದೆ ಎಂಬ ಲೆಕ್ಕಾಚಾರಗಳು ಗರಿಗೆದರಿದ್ದವು. ಗಳಿಕೆ ಲೆಕ್ಕಾಚಾರದಲ್ಲೂ ಹೊಸ ಅಲೆ ಸೃಷ್ಟಿಯಾಗಲಿದೆ ಎಂದೇ ಹೇಳಲಾಗಿತ್ತು. ಆದರೆ, ಆಗಿದ್ದೇ ಬೇರೆ! ಯೆಸ್​ ಬ್ಯಾಂಕ್​ ಹೊಡೆತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕರೊನಾ ಎಂಬ ವೈರಸ್​ ಇಡೀ ದೇಶವನ್ನೇ ಲಾಕ್​ಡೌನ್​ ಮಾಡಿಕೆಡವಿತು. ಸಿನಿಮಾ ಕ್ಷೇತ್ರವನ್ನೂ ಬಿಡಲಿಲ್ಲ. ಆ ಒಂದೇ ಒಂದು ವೈರಸ್​ನಿಂದ ಬಿಗ್​ ಬಾಲಿವುಡ್​ಗೆ ಸುಧಾರಿಸಿಕೊಳ್ಳುವುದು ಕಷ್ಟವಾಗುತ್ತಿದೆ! ಹಾಗಾದರೆ, ಕರೊನಾದಿಂದ ಬಾಲಿವುಡ್​ಗೆ ಎಷ್ಟು ನಷ್ಟ ಆಗಿರಬಹುದು? ಇಲ್ಲಿದೆ ನೋಡಿ ವಿವರ..

    ಒಳ್ಳೇ ಸಿನಿಮಾ, ಗಳಿಕೆ ಮಾಡಲಿಲ್ಲ; ಕಾರಣ ಚಿತ್ರಮಂದಿರ ಬಂದ್​
    ವರ್ಷದ ಆರಂಭದಲ್ಲಿ “ತಾನಾಜಿ; ದಿ ಅನ್​ಸಂಗ್​ ವಾರಿಯರ್​ ‘ ಸಿನಿಮಾ ಗಳಿಕೆಯಲ್ಲಿ ಮೂರಂಕಿ ದಾಟಿದ್ದನ್ನು ಬಿಟ್ಟರೆ, ಬೇರಾವ ಸಿನಿಮಾ ದೊಡ್ಡ ಯಶಸ್ಸು ಕಾಣಲಿಲ್ಲಿ ಎಂಬುದಕ್ಕಿಂತ ಬಿಗ್​ ಸ್ಟಾರ್​ಗಳಿರುವ ಸಿನಿಮಾ ಬಿಡುಗಡೆ ಆಗಲೇ ಇಲ್ಲ, ಅದಾದ ಬಳಿಕ ಬಂದ “ಭಾಗಿ 3′ ಸಿನಿಮಾ ಕೇವಲ 40 ಕೋಟಿ ಗಳಿಸಲಷ್ಟೇ ಶಕ್ತವಾಯಿತು. ಇರ್ಫಾನ್ ಖಾನ್ ನಾಯಕತ್ವದ “ಅಂಗ್ರೇಜಿ ಮೀಡಿಯಂ’ 30 ಕೋಟಿ ಗಳಿಸಲಿದೆ ಎನ್ನಲಾಗಿತ್ತಾದರೂ, 9 ಕೋಟಿ ಗಳಿಸುವಷ್ಟರಲ್ಲಿ ಸುಸ್ತಾಗಿ ಮಲಗಿತು. ತಾಪ್ಸೀ ಪನ್ನು ನಟನೆಯ “ಥಪ್ಪಡ್​’ಗೂ ಅದೇ ಸಮಸ್ಯೆ. ಹಾಗಂತ ಇವ್ಯಾವು ಸಿನಿಮಾ ಚೆನ್ನಾಗಿಲ್ಲ ಅಂತಲ್ಲ. ಬದಲಿಗೆ ಕರೊನಾ ಎಫೆಕ್ಟ್​ನಿಂದ ಚಿತ್ರಮಂದಿರಗಳು ಮುಚ್ಚಿದವು. ಈ ಸ್ಥಿತಿ ಚಿತ್ರತಂಡಗಳಿಗೆ ಗಾಯದ ಮೇಲೆ ಬರೆ ಎಳೆದಂತಾಯ್ತು. ಹಾಗಾಗಿ ಈ ಎಲ್ಲ ಸಿನಿಮಾಗಳು ಒಳ್ಳೇ ಚಿತ್ರ ಎಂಬ ಹಣೆಪಟ್ಟಿಯೊಂದಿಗೆ ಸೋಲು ಕಾಣಬೇಕಾಯಿತು.

    ಸೂರ್ಯವಂಶಿಗೆ ಕೋಟಿ ಕೋಟಿ ನಷ್ಟ!
    ಅಕ್ಷಯ್​ ಕುಮಾರ್​ ನಾಯಕತ್ವದ ರೋಹಿತ್​ ಶೆಟ್ಟಿ ನಿರ್ದೇಶನದ “ಸೂರ್ಯವಂಶಿ’ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮಾರ್ಚ್​ 24ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಆಗಬೇಕಿತ್ತು. ಬಾಕ್ಸ್​ ಆಫೀಸ್​ ಪಂಡಿತರ ಲೆಕ್ಕಾಚಾರದ ಪ್ರಕಾರ 12 ದಿನಗಳ ಅವಧಿಯಲ್ಲಿ ಅಂದರೆ ಇಲ್ಲಿಯವರೆಗೂ 170 ಕೋಟಿಯಷ್ಟು ಗಳಿಕೆ ಮಾಡಿರುತ್ತಿತ್ತು. ಆದರೆ, ಕರೊನಾ ಅಡ್ಡಿಯುಂಟು ಮಾಡಿತು. ಸದ್ಯಕ್ಕೆ ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಡುಗಡೆ ಆಗಬೇಕಿದ್ದ ಸಿನಿಮಾಗಳೆಲ್ಲವೂ ಬಿಡುಗಡೆ ದಿನಾಂಕವನ್ನು ಮುಂದೂಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪೈಪೋಟಿ ಸೃಷ್ಟಿಯಾಗಲಿರುವುದು ಸದ್ಯದ ವಾಸ್ತವ.

    ಬಾಲಿವುಡ್​ ಸಿನಿಮಾಗಳ ವಾರ್ಷಿಕ ಆರಂಭದ ಮೂರು ತಿಂಗಳ ಗಳಿಕೆ ಲೆಕ್ಕಾಚಾರ ಇಲ್ಲಿದೆ.

    • 2017- 650 ಕೋಟಿ ರೂ.
    • 2018- 923.12 ಕೋಟಿ ರೂ.
    • 2019- 1090 ಕೋಟಿ ರೂ.
    • 2020- 778 ಕೋಟಿ ರೂ.

    ಮೂರು ತಿಂಗಳಲ್ಲಿ 250 ಕೋಟಿ ಲಾಸ್​!
    ಸಿನಿಮಾ ಪಂಡಿತರ ಲೆಕ್ಕಾಚಾರದ ಪ್ರಕಾರ ಮೊದಲ ಮೂರು ತಿಂಗಳು ಒಂದು ರೀತಿ ಟಾಸ್​ ಇದ್ದಂತೆ. ಅದರ ಫಲಿತಾಂಶದ ಮೇಲೆ ಮುಂದಿನ 9 ತಿಂಗಳ ಭವಿಷ್ಯ ನಿರ್ಧರಿತವಾಗುತ್ತದೆಯಂತೆ. ಅದೆಲ್ಲವನ್ನು ಗಮನಿಸಿದರೆ, ಕರೊನಾ ಹಿನ್ನೆಲೆಯಲ್ಲಿ ಬಾಲಿವುಡ್​ ಸಿನಿಮಾರಂಗಕ್ಕೆ ಆರಂಭದ ಮೂರೇ ತಿಂಗಳಲ್ಲಿ 250 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ ಎಂಬುದು ಸಿನಿಮಾ ಪಂಡಿತರ ವಿಶ್ಲೇಷಣೆ. 2017ರಲ್ಲಿ ಮೊದಲ ಮೂರು ತಿಂಗಳ ಅವಧಿಯಲ್ಲಿ 650 ಕೋಟಿ ಗಳಿಕೆ ಮಾಡಿದ್ದ ಬಾಲಿವುಡ್​ ಸಿನಿಮಾಗಳು, ನಂತರ ಎರಡು ವರ್ಷ ಏರಿಕೆ ಗತಿಯಲ್ಲಿಯೇ ಗಳಿಕೆ ಮಾಡಿದ್ದವು. ಆದರೆ, ಪ್ರಸಕ್ತ ವರ್ಷ ಮಾತ್ರ ಎರಡು ವರ್ಷದ ಹಿಂದಿನ ಮಟ್ಟಕ್ಕೆ ಗಳಿಕೆ ಕುಸಿದಿದೆ, ಈಗಾಗಲೇ ದಿನಾಂಕ ನಿಗದಿಪಡಿಸಿಕೊಂಡು ಬಿಡುಗಡೆಗೆ ಕಾಯುತ್ತಿರುವ ಸಿನಿಮಾಗಳ ಮೇಲೂ ಈ ಸ್ಥಿತಿ ಪರಿಣಾಮ ಬೀರುವ ಸಾಧ್ಯತೆಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts