More

    ಕರಾವಳಿ ಜಿಲ್ಲೆಗಳಿಗೆ ಪಡಿತರ ಕುಚ್ಚಲಕ್ಕಿ, ಕೋಟ, ಅಂಗಾರ ನಿಯೋಗದ ಮನವಿಗೆ ಸಿಎಂ ಸ್ಪಂದನೆ

    ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಬೇಕಾಗುವ ಕುಚ್ಚಲಕ್ಕಿಯನ್ನು ಸ್ಥಳೀಯ ರೈತರಿಂದ ಸಂಗ್ರಹಿಸಿ ಜಿಲ್ಲೆಯ ಜನರಿಗೆ ಪಡಿತರ ಮೂಲಕ ವಿತರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಧಾನಸೌಧದಲ್ಲಿ ಗುರುವಾರ ಮನವಿ ಮಾಡಿದರು.

    ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರ ಮೂಲಕ ವಿತರಿಸುತ್ತಿರುವ ಕುಚ್ಚಲಕ್ಕಿ ಕಳಪೆ ಆಗಿದ್ದು, ಜನಸಾಮಾನ್ಯರು ಅದರಲ್ಲೂ ಬಡವರು ಅಕ್ಕಿಯನ್ನು ಉಪಯೋಗಿಸದೆ ಕಡಿಮೆ ದರಕ್ಕೆ ಮಾರಾಟ ಮಾಡಿ ಹೆಚ್ಚು ದರದ ಕೆಂಪು ಕುಚ್ಚಲಕ್ಕಿ ಖರೀದಿಸುತ್ತಿದ್ದಾರೆ. ಕೆಲವೆಡೆ ಪಡಿತರ ಅಕ್ಕಿಯನ್ನೇ ಪಡೆಯುತ್ತಿಲ್ಲ. ಇದರಿಂದ ಪಡಿತರ ಮೂಲಕ ತೆಗೆದುಕೊಂಡ ಕಳಪೆ ಅಕ್ಕಿಯನ್ನು ಮಾರಾಟ ಮಾಡಿದ ಹಿನ್ನಲೆಯಲ್ಲಿ ಕ್ರಿಮಿನಲ್ ಕೇಸುಗಳು ದಾಖಲಾಗುತ್ತಿವೆ ಎಂದು ಸಮಸ್ಯೆ ಮನವರಿಕೆ ಮಾಡಿದರು.

    ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ತಕ್ಷಣ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

    ಒಂದು ಲಕ್ಷ ಕ್ವಿಂಟಾಲ್ ಆವಶ್ಯಕತೆ: ದಕ್ಷಿಣ ಕನ್ನಡಕ್ಕೆ ಸುಮಾರು 58 ಸಾವಿರ ಕ್ವಿಂಟಾಲ್ ಮತ್ತು ಉಡುಪಿ ಜಿಲ್ಲೆಗೆ 40 ಸಾವಿರ ಕ್ವಿಂಟಾಲ್, ಒಟ್ಟು ಸರಾಸರಿ ತಿಂಗಳಿಗೆ ಒಂದು ಲಕ್ಷ ಕ್ವಿಂಟಾಲ್ ಕುಚ್ಚಲಕ್ಕಿ ಅಗತ್ಯವಿದೆ. ಇಷ್ಟು ಬೆಳೆ ಅವಳಿ ಜಿಲ್ಲೆಗಳಲ್ಲಿ ಲಭ್ಯವಿಲ್ಲದೆ ಇರುವುದರಿಂದ ಮೈಸೂರು, ಮಂಡ್ಯ ಮುಂತಾದೆಡೆಯಿಂದ ಜಯ ಮತ್ತು ಇನ್ನಿತರ ಭತ್ತದ ತಳಿಯ ಫಸಲು ಸಂಗ್ರಹಿಸಿ ಕುಚ್ಚಲಕ್ಕಿ ತಯಾರಿಸುವ ಕುರಿತು ಮನವಿಯಲ್ಲಿ ಸಲಹೆ ನೀಡಲಾಗಿದೆ.

    ನಂತರ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಮುಂದಿನ ವಾರ ಕರಾವಳಿ ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕರು ಮತ್ತು ಆಹಾರ ನಿಗಮದ ಅಧಿಕಾರಿಗಳು ಮತ್ತು ಅವಳಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಸಮಕ್ಷಮ ಸಭೆ ನಡೆಸಿ ಕುಚ್ಚಲಕ್ಕಿ ತಯಾರಿಕೆಗಾಗಿ ಭತ್ತದ ಖರೀದಿ, ಸಂಸ್ಕರಣೆ, ವಿತರಣೆ ಕುರಿತು ಸೂಕ್ತ ಮಾರ್ಗೋಪಾಯ ಕಂಡು ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ವಿ.ಕತ್ತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts