More

    ರಕ್ತದಾನದಿಂದ ನೆಮ್ಮದಿ ಲಭ್ಯ

    ಸಿರಿಗೆರೆ: ಯುವಸಮೂಹ ರಕ್ತದಾನಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಅಗತ್ಯ ಇರುವವರಿಗೆ ನೆರವಾಗಬೇಕು ಎಂದು ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ನಾಗರಾಜ ಹೇಳಿದರು.

    ಆರೋಗ್ಯ ಇಲಾಖೆ ಮತ್ತು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ, ವಾಸವಿ ರಕ್ತನಿಧಿ ಕೇಂದ್ರ ವತಿಯಿಂದ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ರಕ್ತದಾನ ಹಾಗೂ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಲು ಯುವಜನತೆ ಮುಂದೆ ಬರಬೇಕು. ಒಬ್ಬರ ರಕ್ತದಾನದಿಂದ ಮೂರು ಜನರ ಅಮೂಲ್ಯ ಜೀವ ಉಳಿಸಬಹುದಾಗಿದ್ದು, ಸ್ವಯಂ ಪ್ರೇರಿತ ರಕ್ತದಾನದಿಂದ ಖುಷಿ ಮತ್ತು ತೃಪ್ತಿ ಸಿಗಲಿದೆ ಎಂದು ಹೇಳಿದರು.

    ಚಿತ್ರದುರ್ಗ ಜಿಲ್ಲೆಯಲ್ಲಿ ನಿತ್ಯ ಅನೇಕ ಯೂನಿಟ್‌ಗಳಷ್ಟು ರಕ್ತದ ಅಗತ್ಯವಿದ್ದು, ರಕ್ತದಾನ ಶಿಬಿರಗಳು ನಿಯಮಿತವಾಗಿ ನಡೆದಲ್ಲಿ ರಕ್ತದ ಕೊರತೆ ಎದುರಾಗದು ಎಂದರು.

    ತಾಲೂಕು ಆರೋಗ್ಯ ಅಧಿಕಾರಿ ಡಾ. ಬಿ.ವಿ.ಗಿರೀಶ್ ಮಾತನಾಡಿ, ಜಾಂಡಿಸ್ ಹಾಗೂ ದೀರ್ಘಕಾಲಿನ ಕಾಯಿಲೆ ಇರುವವರನ್ನು ಹೊರತುಪಡಿಸಿ ಎಲ್ಲರೂ ರಕ್ತದಾನ ಮಾಡುವುದು ವೈಯಕ್ತಿಕ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದು ತಿಳಿಸಿದರು.

    ರಕ್ತವನ್ನು ಎಂದಿಗೂ ಕೃತಕವಾಗಿ ಉತ್ಪಾದಿಸಲು ಅಸಾಧ್ಯ. ಆದ್ದರಿಂದ ಇನ್ನೊಬ್ಬರ ಜೀವ ಉಳಿಸುವುದಕ್ಕೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದರು.

    ಪ್ರಕೃತಿದತ್ತವಾಗಿ ಮನುಷ್ಯರಲ್ಲಿ ರಕ್ತ ಉತ್ಪತಿಯಾಗುತ್ತದೆ. ಆರೋಗ್ಯವಂತ ಹಾಗೂ ಸದೃಢ ದೇಹ ಹೊಂದಿರುವ ಎಲ್ಲರೂ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬೇಕು. ರಕ್ತದಾನದ ಬಗ್ಗೆ ಯಾವುದೇ ತಪ್ಪು ಕಲ್ಪನೆ ಬೇಡ ಎಂದು ತಿಳಿಸಿದರು.

    ಯುವಕರು ಇತ್ತೀಚೆಗೆ ಜಂಕ್‌ಫುಡ್‌ಗೆ ಮಾರು ಹೋಗಿ ಪೌಷ್ಟಿಕಾಂಶದ ಆಹಾರ ಬಳಸುತ್ತಿಲ್ಲ. ಇದರಿಂದ ಯುವಕರಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಆದ್ದರಿಂದ ತಪ್ಪದೆ ಪೌಷ್ಟಿಕಾಂಶ ಇರುವ ಸೊಪ್ಪು, ತರಕಾರಿ ಪ್ರತಿನಿತ್ಯ ಸೇವಿಸಿ ಎಂದರು.

    ಡಾ.ತಿಮ್ಮೇಗೌಡ, ವಾಸವಿ ರಕ್ತನಿಧಿ ಕೇಂದ್ರದ ಡಾ. ಶ್ರೀನಿವಾಸ ಶೆಟ್ಟಿ, ಡಾ.ತುಳಸಿ ರಂಗನಾಥ್, ಡಾ.ಪವಿತ್ರಾ, ಡಾ.ಸಚಿನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಹಿರಿಯ ಫಾರ್ಮಸಿ ಅಧಿಕಾರಿ ಮೋಹನ್‌ಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts