More

    ವಿಪಕ್ಷಗಳ ಅಧಿಕಾರದ ಆಸೆ ಈಡೇರಲ್ಲ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ

    ಕೆ.ಆರ್.ಪೇಟೆ: ಕೆಲವರು ಸಮ್ಮಿಶ್ರ ಸರ್ಕಾರ ಬರಲಿದೆ ಎಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಯುತ್ತಿದ್ದಾರೆ. ಮತ್ತೊಂದು ಪಕ್ಷ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತ ಹಗಲುಗನಸು ಕಾಣುತ್ತಿದೆ. ಈ ಇಬ್ಬರ ಆಸೆ ಈಡೇರೋದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.
    ಪಟ್ಟಣದ ಹೊರವಲಯದ ಖಾಸಗಿ ಸಮುದಾಯ ಭವನದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಯಡಿಯೂರಪ್ಪ ಈಗಾಗಲೇ ಭರವಸೆ ಕೊಟ್ಟಿದ್ದಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆಯೇ ವಿನಃ, ಕಾಂಗ್ರೆಸ್ ಬರಲ್ಲ. ಜೆಡಿಎಸ್ ಕಿಂಗ್ ಮೇಕರ್ ಆಗುವ ಭ್ರಮೆಯಲ್ಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾರಾಯಣಗೌಡರು ಕೆ.ಆರ್.ಪೇಟೆ ಕ್ಷೇತ್ರಕ್ಕೆ 1,800 ಕೋಟಿ ರೂ.ಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಮಾಡಿದ್ದಾರೆ ಎಂದರು.
    ಇಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿಲ್ಲ. ಮಾತೃ ಹೃದಯದ ಮುಖ್ಯಮಂತ್ರಿ ಯಾರಾದ್ರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ. ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಕೂಡ ಪ್ರಚಾರಕ್ಕೆ ಬರ್ತಾರೆ. ನಾನು ಮತ್ತೊಮ್ಮೆ ಬರ್ತೀನಿ ಎಂದು ಹೇಳಿದರು.
    ಶಿಕಾರಿಪುರಕಷ್ಟೇ ಸೀಮಿತಲ್ಲ: ನನ್ನದು ಶಿಕಾರಿಪುರಕಷ್ಟೇ ಸೀಮಿತವಾದ ವ್ಯಾಪ್ತಿಯಲ್ಲ. ರಾಜ್ಯದ ಜನರ ನಿರೀಕ್ಷೆಯಂತೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮೊದಲ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನಾರಾಯಣಗೌಡರ ಪರ ನನ್ನ ಮೊದಲ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಧೀಮಂತ ವ್ಯಕ್ತಿ ನಾರಾಯಣಗೌಡ ಎಂದರು.
    ಕಳೆದ ಉಪ ಚುನಾವಣೆಯಲ್ಲಿ ಯಾರೂ ನಿರೀಕ್ಷಿಸಿರಲಿಲ್ಲ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಗೆದ್ದರು. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಹುಲ್ಲು ಬೆಳೆಯಲ್ಲ ಅಂತಿದ್ರು. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡ ಅತಿ ಹೆಚ್ಚು ಅಂತರದಿಂದ ಗೆದ್ದರು. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಾಗ ವಿಪಕ್ಷಗಳು ಮನೆಯಲ್ಲಿ ಕೂರ್ತಾರೆ ಅಂತಾ ಭಾವಿಸಿದ್ರು. ಯಡಿಯೂರಪ್ಪ ಮನೆಯಲ್ಲಿ ಕೂರಲಿಲ್ಲ. ಬದಲಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂದರು.
    ಜೆಡಿಎಸ್ ಅಭ್ಯರ್ಥಿ, ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ನಾಲ್ಕು ಬಾರಿ ಸಿಎಂ ಆದ ಹೆಗ್ಗಳಿಕೆ ಯಡಿಯೂರಪ್ಪ ಅವರದ್ದು. ಜೆಡಿಎಸ್‌ನಲ್ಲಿ ಎರಡು ಬಾರಿ ಶಾಸಕನಾಗಿದ್ದೆ. ಆಗ ಏನೂ ಅಭಿವೃದ್ಧಿ ಮಾಡಲು ಆಗಿರಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗ್ತಾರೆ ಅಂತ ನಾನು ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದೆ. ರಾಜ್ಯದಲ್ಲಿ ನುಡಿದಂತೆ ನಡೆಯುವವರು ಯಾರಾದ್ರೂ ಇದ್ರೆ ಯಡಿಯೂರಪ್ಪ ಮಾತ್ರ. ನಾನು ಬಿಜೆಪಿ ಸೇರಿದ ಬಳಿಕ ಮತ್ತೆ ಸಿಎಂ ಆದರು. ನನ್ನ ಗೆಲುವಿನ ಜವಾಬ್ದಾರಿ ಹೊತ್ತಿದ್ದು ವಿಜಯೇಂದ್ರ. ಏ.17 ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.
    ವಿಜಯೇಂದ್ರ ಅವರ ಕಾಲಿನ ಗುಣ ದೊಡ್ಡದು. ಅವರಿಗೆ ಭಗವಂತ ಇನ್ನಷ್ಟು ಉತ್ತಮ ಸ್ಥಾನಕ್ಕೆ ಕೊಂಡೊಯ್ಯಲಿ.ಆದಷ್ಟು ಶೀಘ್ರ ಮುಖ್ಯಮಂತ್ರಿ ಆಗುವ ಅವಕಾಶ ಕಲ್ಪಿಸಲಿ. ಆ ದಿನ ಬರುವುದು ಹೆಚ್ಚು ದೂರ ಇಲ್ಲ ಎಂದರು.
    ಯಡಿಯೂರಪ್ಪ ಅವರ ಆಶೀರ್ವಾದದಿಂದ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಆಗಿದೆ. ಯಡಿಯೂರಪ್ಪ ಅವರ ಸ್ಥಾನ ತುಂಬುವ ಕೆಲಸವನ್ನು ವಿಜಯೇಂದ್ರ ಮಾಡುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಮತ ಕೊಟ್ಟು ಗೆಲ್ಲಿಸಿ. ಮತ್ತಷ್ಟು ನಿಮ್ಮ ಸೇವೆ ಮಾಡಲು ಆಶೀರ್ವಾದ ಮಾಡಿಕೊಡಿ ಎಂದು ಮನವಿ ಮಾಡಿದರು.
    ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಪ್ರಭಾಕರ್, ಬೂಕನಕೆರೆ ಜವರಾಯಿಗೌಡ, ಪಾಂಡವಪುರ ಬಿಜೆಪಿ ಅಭ್ಯರ್ಥಿ ಇಂದ್ರೇಶ್, ಸಚಿವರ ಆಪ್ತ ಸಹಾಯಕ ದಯಾನಂದ್ ಸೇರಿ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts