More

    ಕೇಜ್ರಿವಾಲ್ ಕೊಲೆಗೆ ಬಿಜೆಪಿ ಸಂಚು ಮಾಡುತ್ತಿದೆ ಎಂದ ಸಿಸೋಡಿಯಾ!

    ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಬಿಜೆಪಿ ಸಂಚು ರೂಪಿಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್​​ ಸಿಸೋಡಿಯಾ ಆರೋಪಿಸಿದ್ದಾರೆ.

    ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ಈ ಹಿಂದೆ ಟ್ವೀಟ್ ಮಾಡುತ್ತಾ, ನನಗೆ ಅರವಿಂದ ಕೇಜ್ರಿವಾಲ್ ಅವರ ಭಧ್ರತೆಯ ಬಗ್ಗೆ ಚಿಂತೆಯಾಗಿದೆ. ಅವರ ಭ್ರಷ್ಟಾಚಾರದ ಬಗ್ಗೆ ಎಎಪಿ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೇ ದೆಹಲಿ ಪುರಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಹಾಗೂ ತಿಹಾರ್ ಜೈಲಿನಲ್ಲಿ ಎಎಪಿ ಸಚಿವ ಸತ್ಯೇಂದರ್ ಜೈನ್ ಮಸಾಜ್ ಮಾಡಿಸಿಕೊಂಡಿರುವ ಘಟನೆಯಿಂದ ಕೇಜ್ರಿವಾಲ್​ಗೆ ಬೆದರಿಕೆ ಬರುತ್ತಿದೆ. ದೆಹಲಿ ಮುಖ್ಯಮಂತ್ರಿಗೆ ಹೀಗಾಗಬಾರದಿತ್ತು ಎಂದಿದ್ದರು.

    ಸಂಸದ ಮನೋಜ್ ತಿವಾರಿ ಮಾತಿಗೆ ಮನೀಶ್​​ ಸಿಸೋಡಿಯಾ ತಿರುಗೇಟು ನೀಡಿದ್ದು, ಕೇಜ್ರಿವಾಲ್ ಅಥವಾ ಪಕ್ಷದ ನಾಯಕರಿಗೆ ಏನಾದರೂ ಸಂಭವಿಸಿದರೆ, ಬಿಜೆಪಿಯೇ ಹೊಣೆಯಾಗಬೇಕು ಎಂದು ಹೇಳಿದ್ದಾರೆ.

    ಎರಡು ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿರುವ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿರುವುದು ದೆಹಲಿ ಮತ್ತು ದೇಶದ ಜನತೆಗೆ ಮಾಡಿದ ಅವಮಾನ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಬಿಜೆಪಿ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿರುವುದು ಅಧಿಕಾರಕ್ಕಾಗಿ ಬಿಜೆಪಿ ಯಾವುದೇ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಮನೀಶ್ ಸಿಸೋಡಿಯಾ ಹೇಳಿದರು.

    ಗುಜರಾತ್ ಮತ್ತು ದೆಹಲಿ ಪುರಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕೇಜ್ರಿವಾಲ್ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಸಿಸೋಡಿಯಾ ಟ್ವೀಟ್‌ ಮೂಲಕ ಆರೋಪಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts