More

    ಜಾತಿ ಹೆಸರಿನಲ್ಲಿ ಬಿಜೆಪಿ ಸಮಾವೇಶ

    ಸಾಗರ: ಶಕ್ತಿಸಾಗರ ಸಂಗಮ ಹೆಸರಿನಲ್ಲಿ ಮಾ.5ರಂದು ಜಾತಿ ಸಮಾವೇಶ ಮಾಡಲು ಬಿಜೆಪಿ ಮುಂದಾಗಿದ್ದು, ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.

    ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿಯವರು ದೀವರು, ಈಡಿಗ, ಬಿಲ್ಲವ, ನಾಮಧಾರಿ ಜೊತೆಗೆ 26 ಪಂಗಡಗಳನ್ನು ಸೇರಿಸಿಕೊಂಡು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸುತ್ತಿದೆ. ಹಾಗಾದರೆ ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಇತರೆ ಸಮುದಾಯಗಳ ಬೆಂಬಲ ಬೇಡವೇ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
    ಬಿ.ಎಸ್.ಯಡಿಯೂರಪ್ಪ ದೊಡ್ಡ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಅಧಿಕಾರದಲ್ಲಿದ್ದಾಗ ಎಲ್ಲ ಸಮುದಾಯದವರಿಗೂ ಯೋಜನೆ ಕೊಟ್ಟಿದ್ದಾರೆ. ಅಂತಹ ಮುತ್ಸದಿಯನ್ನು ಜಾತಿಯೊಂದರ ಸಮಾವೇಶದಲ್ಲಿ ಸನ್ಮಾನಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಎಲ್ಲ ಸಮುದಾಯಗಳ ಉಪಸ್ಥಿತಿಯಲ್ಲಿ ಅವರನ್ನು ಸನ್ಮಾನಿಸಿದ್ದರೆ ಹೆಚ್ಚು ಗೌರವ ಬರುತಿತ್ತು ಎಂದು ಹೇಳಿದರು.
    ಚುನಾವಣೆ ಇನ್ನಿತರೆ ಸಂದರ್ಭದಲ್ಲಿ ಬಿಜೆಪಿ ಅವರು ಜಾತಿವಾದವನ್ನು ಪ್ರತಿಪಾದಿಸಿ ಮತಗಳಿಸುವ ಪ್ರಯತ್ನ ನಡೆಸುತ್ತಾರೆ. ಒಂದೊಮ್ಮೆ ಅದರಲ್ಲಿ ಯಶಸ್ಸು ಕಾಣದೆ ಹೋದಲ್ಲಿ ಕೋಮುವಾದವನ್ನು ಬಿತ್ತುತ್ತಾರೆ. ಎಲ್ಲ ಜಾತಿಧರ್ಮವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಬಿಜೆಪಿ ಯಾವತ್ತೂ ಮಾಡಿಲ್ಲ. ಶಕ್ತಿಸಾಗರ ಸಂಗಮ ಕಾರ್ಯಕ್ರಮ ಸಹ ಜಾತಿ ನಡುವೆ ಕಂದಕ ಸಷ್ಟಿಸುವ ಬಿಜೆಪಿಯ ಮತ್ತೊಂದು ಪ್ರಯತ್ನ. ಚುನಾವಣೆಯಲ್ಲಿ ಮತಗಳಿಕೆಯ ವಾಮಮಾರ್ಗವೇ ಈ ಸಮಾವೇಶವಾಗಿದೆ. ಇಂತಹ ಸಮಾವೇಶ ಆರೋಗ್ಯಕರ ಸಮಾಜಕ್ಕೆ ಕಂಟಕವಾಗುತ್ತದೆ ಎಂದು ತಿಳಿಸಿದರು.
    ತಾಪಂ ಮಾಜಿ ಸದಸ್ಯ ಸೋಮಶೇಖರ ಲ್ಯಾವಿಗೆರೆ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಸನ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪಕ್ಷವೊಂದರ ಮುಖವಾಣಿಯಂತೆ ಸಮುದಾಯದ ಹೆಸರಿನಲ್ಲಿ ಸನ್ಮಾನಿಸುತ್ತಿರುವುದು ಸರಿಯಲ್ಲ. ಮಾಜಿ ಶಾಸಕ ಹರತಾಳು ಹಾಲಪ್ಪ ಯಾವುದೋ ಉದ್ದೇಶ ಇರಿಸಿಕೊಂಡು ಯಡಿಯೂರಪ್ಪ ಅವರನ್ನು ಸನ್ಮಾನಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಸಂಚು ರೂಪಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನಮ್ಮ ಸಮುದಾಯದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಗೇಣಿದಾರರಿಗೆ ಭೂಮಿಹಕ್ಕು ಕೊಡಿಸಿದ ಕಾಗೋಡು ತಿಮ್ಮಪ್ಪ ನೆನಪಿಗೆ ಬರಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
    ಪ್ರಮುಖರಾದ ಚೇತನರಾಜ್ ಕಣ್ಣೂರು, ಕಲಸೆ ಚಂದ್ರಪ್ಪ, ಎನ್.ಉಷಾ, ಮಹಾಬಲ ಕೌತಿ, ಅಶೋಕ್ ಬೇಳೂರು, ದಿನೇಶ್, ಎಲ್.ಚಂದ್ರಪ್ಪ, ಗಿರೀಶ್ ಕೋವಿ, ಪ್ರದೀಪ್, ಮಂಡಗಳಲೆ ಗಣಪತಿ, ಗಣೇಶ್, ಯಶವಂತ, ತಾರಾಮೂರ್ತಿ, ಶ್ರೀಧರ ಪಟೇಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts