ನವದೆಹಲಿ: ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಭ್ಯರ್ಥಿಗಳು ಮತಬೇಟೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಈ ನಡುವೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಒಬ್ಬರ ಕಣ್ಣಿಗೆ ಗಂಭೀರ ಗಾಯವಾಗಿದ್ದು, ಇದರ ನಡುವೆಯೇ ಅವರು ಪ್ರಚಾರ ನಡೆಸಿರುವುದು ಎಲ್ಲರ ಗಮನ ಸೆಳೆದಿದೆ.
ನವದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕೇಂದ್ರ ವಿದೇಶಾಂಗ ಸಚಿವೆ ದಿ. ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವಾರಜ್ ಅವರು ಪ್ರಚಾರ ನಡೆಸುವ ವೇಳೆ ಕಣ್ಣಿಗೆ ಗಾಯವಾಗಿದ್ದು, ಬ್ಯಾಂಡೇಜ್ ಹಾಕಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಾನ್ಸುರಿ ಪ್ರಚಾರದ ವೇಳೆ ಕಣ್ಣಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ, ತಕ್ಷಣ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಮಂಗಳವಾರ ಈ ಘಟನೆ ನಡೆದಿದ್ದು, ಬುಧವಾರ ಕಣ್ಣಿಗೆ ಬ್ಯಾಂಡೇಜ್ ಹಾಕಿಕೊಂಡೇ ಪ್ರಚಾರದಲ್ಲಿ ಬಾನ್ಸುರಿ ಪಾಲ್ಗೊಂಡಿದ್ದಾರೆ. ನವದೆಹಲಿಯ ಬಾನ್ಸುರಿ ಸ್ವರಾಜ್ ಅವರು ರಮೇಶ್ ನಗರದ ಸನಾತನ ಧರ್ಮ ಮಂದಿರದಲ್ಲಿ ಆಯೋಜಿಸಿದ್ದ ಮಾತಾ ಕಿ ಚೌಕಿಯಲ್ಲಿ ಭಾಗವಹಿಸಿ ದುರ್ಗೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.