More

    ಶಾಸಕನಿಂದ ವಂಚನೆ: ನ್ಯಾಯಕ್ಕಾಗಿ ಪರದಾಡುತ್ತಿರುವ ಯುವತಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

    ಜಗತ್​​ಸಿಂಗ್​ಪುರ್​: ಒಡಿಶಾದ ತಿರ್ತೊಲ್​ ಶಾಸಕ ಬಿಜಯ್​ ಶಂಕರ್​ ದಾಸ್ ಮತ್ತು ಆಕೆಯ ಮಾಜಿ ಪ್ರೇಯಸಿ ಸೋಮಾಲಿಕಾ ನಡುವಿನ ಕಚ್ಚಾಟವು ಒಡಿಶಾದಲ್ಲಿ ದಿನಕ್ಕೊಂದು ಬೆಳವಣಿಗೆಗೆ ಕಾರಣವಾಗಿದೆ. ಹೈಕೋರ್ಟ್​ನಲ್ಲಿ ಗೆಲುವು ಸಿಕ್ಕ ಬಳಿಕ ಪ್ರತಿಪಕ್ಷ ನಾಯಕ ಜಯನಾರಾಯಣ್​ ಮಿಶ್ರಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಅಪರಿಚಿತರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸೋಮಾಲಿಕಾ ಗಂಭೀರ ಆರೋಪ ಮಾಡಿದ್ದಾರೆ.

    ಬಿಜಯ್​ ಶಂಕರ್​ ದಾಸ್​ ಮತ್ತು ತಮ್ಮ ನಡುವೆ ಇರುವ ವಿವಾದವನ್ನು ಇತ್ಯರ್ಥ ಪಡಿಸಿಕೊಳ್ಳುವಂತೆ ಹೇಳಿ ಕರೆ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಸೋಮಾಲಿಕಾ ಆರೋಪಿಸಿದ್ದಾರೆ. ಶಾಸಕರಿಂದ ಮೋಸ ಹೋಗಿ ಕಾನೂನು ಹೋರಾಟ ನಡೆಸುತ್ತಿರುವ ಸೋಮಲಿಕಾ ತನಗೆ ಬಂದ ಬೆದರಿಕೆ ಕರೆಗಳ ಆಡಿಯೋ ರೆಕಾರ್ಡ್​ ಅನ್ನು ಪೊಲೀಸರಿಗೆ ಹಸ್ತಾಂತರ ಮಾಡಿ ದೂರು ದಾಖಲಿಸಿದ್ದಾರೆ.

    ಬಿಜೆಡಿ ಶಾಸಕ ಮತ್ತು ನನ್ನ ನಡುವೆ ಸಂಧಾನಕ್ಕೆ ಪ್ರಯತ್ನ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ನನಗೆ ಯಾವುದೇ ಸುಳಿವು ಇಲ್ಲ ಎಂದು ಸೋಮಾಲಿಕಾ ಹೇಳಿದ್ದಾರೆ. ಫೆ. 19ರಂದು ಸೋಮಾಲಿಕಾ ಅವರು ಪ್ರತಿಪಕ್ಷ ನಾಯಕ ಜಯನಾರಾಯಣ್​ ಮಿಶ್ರಾ ಅವರನ್ನು ಭೇಟಿಯಾಗಿ, ಫೆ. 21ರಿಂದ ಆರಂಭವಾಗುವ ಬಜೆಟ್​ ಅಧಿವೇಶನದಲ್ಲಿ ತಮ್ಮ ವಿಚಾರವನ್ನು ಪ್ರಸ್ತಾಪ ಮಾಡುವಂತೆ ಕೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಆಕೆಗೆ ಬೆದರಿಕೆ ಕರೆ ಬಂದಿದೆ.

    ಈ ಹಿಂದೆ ಒಡಿಶಾ ಹೈಕೋರ್ಟ್​ ಸೋಮಲಿಕಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ದೂರು ನೀಡಿದರೂ ಶಾಸಕ ಬಿಜಯ್​ ಶಂಕರ್​ ದಾಸ್​ ವಿರುದ್ಧ ಯಾವುದೇ ಪ್ರಕರಣವನ್ನು ಪೊಲೀಸರು ದಾಖಲಿಸುತ್ತಿಲ್ಲ. ಈ ವಿಚಾರವನ್ನು ಜಗತ್​​ಸಿಂಗ್​ಪುರ್ ಪೊಲೀಸ್​ ವರಿಷ್ಠಾಧಿಕಾರಿ ಅವರ ಗಮನಕ್ಕೂ ತರಲಾಗಿದೆ. ಆದರೆ, ಅವರು ಕೂಡ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಸೋಮಾಲಿಕಾ ಒಡಿಶಾ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

    ತೀರ್ಪು ನೀಡಿದ್ದ ಹೈಕೋರ್ಟ್​ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿತು. ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಹೊಸ ದೂರಿನ ಜೊತೆಗೆ ಜಗತ್‌ಸಿಂಗ್‌ಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸೊಮಾಲಿಕಾ ಅವರಿಗೆ ಕೋರ್ಟ್​ ಸೂಚಿಸಿತು. ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸ್​ ಠಾಣೆಗೂ ನ್ಯಾಯಾಲಯ ತಿಳಿಸಿತು. ಇದು ಸೋಮಾಲಿಕಾ ಹೋರಾಟಕ್ಕೆ ಮೊದಲ ಜಯವಾಗಿದೆ.

    ಏನಿದು ಪ್ರಕರಣ?
    ಪ್ರೇಮ ವಿವಾಹ ಮಾಡಿಕೊಳ್ಳಲು ಮೇ 17ರಂದು ಬಿಜಯ್​ ಮತ್ತು ಸೋಮಾಲಿಕಾ ಜಗತ್​ಸಿಂಗ್​ಪುರದಲ್ಲಿರುವ ರಿಜಿಸ್ಟ್ರಾರ್​ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ದಿನಾಂಕ ನಿಗದಿಯಾದ ಪ್ರಕಾರ ಜೂನ್​ 17ರಂದು ಕೋರ್ಟ್​ ಮುಂದೆ ಇಬ್ಬರು ಹಾಜರಾಗಬೇಕಿತ್ತು. ಸರಿಯಾದ ಸಮಯಕ್ಕೆ ಸೋಮಾಲಿಕಾ ಹಾಜರಾದರೆ, ಬಿಜಯ್​ ಮಾತ್ರ ಬರಲೇ ಇಲ್ಲ. ರಿಜಿಸ್ಟ್ರಾರ್​ ಕಚೇರಿ ಬಳಿ ಬರುವಂತೆ ನಾನು ಮತ್ತು ನನ್ನ ಪಾಲಕರು ಬಿಜಯ್​ ಅವರನ್ನು ಸಂಪರ್ಕಿಸಿ ತಿಳಿಸಿದ್ದೆವು. ಆದರೆ, ಆತ ಬರಲೇ ಇಲ್ಲ. ಮತ್ತೊಬ್ಬಳ ಜತೆ ಸಂಬಂಧ ಹೊಂದಿರಬಹುದು ಎಂಬ ಗುಮಾನಿ ಶುರುವಾಗಿದೆ. ಅದಕ್ಕಾಗಿಯೇ ಆತ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾನೆ. ನಾನು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸೋಮಾಲಿಕಾ ಎಚ್ಚರಿಕೆ ನೀಡಿದ್ದರು.

    ವರದಿಗಳ ಪ್ರಕಾರ, ಶಾಸಕ ಬಿಜಯ್​ ಮತ್ತು ಸೊಮಾಲಿಕಾ ನಡುವೆ ಎಸ್‌ವಿಎಂ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಪರಸ್ಪರ ಪರಿಚಯವಿತ್ತು ಮತ್ತು ಪ್ರೇಮಾಂಕುರವು ಆಗಿತ್ತು. ಅಲ್ಲದೆ, ದೈಹಿಕ ಸಂಬಂಧವು ಇಬ್ಬರ ನಡುವೆ ಇತ್ತು ಎಂದು ತಿಳಿದುಬಂದಿದೆ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಇಬ್ಬರ ಸಂಬಂಧ ನಂತರದ ದಿನಗಳಲ್ಲಿ ವೈಮನಸ್ಸಿನಿಂದಾಗಿ ಬಿರುಕು ಮೂಡಲು ಆರಂಭಿಸಿತು. ಕಳೆದ ಪಂಚಾಯತ್ ಚುನಾವಣೆಯ ಸಮಯದಲ್ಲಿ ಸೋಮಾಲಿಕಾ ತನ್ನ ವೈಯಕ್ತಿಕ ವಿಡಿಯೋವನ್ನು ಸಾರ್ವಜನಿಕಗೊಳಿಸಿದರು. ಈ ಬಗ್ಗೆ ಎಸ್ಪಿ ಅವರನ್ನೂ ಸಂಪರ್ಕಿಸಿದ್ದರು. ಇದಾದ ಬಳಿಕ ಇಬ್ಬರನ್ನು ಕರೆಸಿ, ಸಂಧಾನ ಮಾಡಿದ್ದರು. ಈ ವೇಳೆ ರಿಜಿಸ್ಟ್ರರ್​ ಮದುವೆಗೆ ಬಿಜಯ್​ ಒಪ್ಪಿಕೊಂಡಿದ್ದ. ಆದರೆ, ಬಿಜಯ್​ ಇದೀಗ ಮದುವೆಗೂ ಬಂದಿಲ್ಲ ಮತ್ತು ಸ್ಪಷ್ಟನೆ ನೀಡಲು ತಯಾರಿಲ್ಲದಿರುವುದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸೊಮಾಲಿಕಾ ಹೇಳಿದ್ದರು. (ಏಜೆನ್ಸೀಸ್​)

    ಪ್ರೀತಿಸಿ ಕೈಕೊಟ್ಟ ಶಾಸಕನಿಗೆ ಶಾಕ್​ ಕೊಟ್ಟ ಹೈಕೋರ್ಟ್​! ಕೊನೆಗೂ ಯುವತಿಯ ಹೋರಾಟಕ್ಕೆ ಸಿಕ್ತು ಜಯ

    ಸ್ಥಳ ನಿಯೋಜನೆ ಮಾಡದೆ ಡಿ.ರೂಪ, ರೋಹಿಣಿ ಸಿಂಧೂರಿಗೆ ಸರ್ಕಾರದಿಂದ ವರ್ಗಾವಣೆ ಆದೇಶ

    ಮಾರ್ಕ್​ಶೀಟ್​ ಕೊಡೋದು ತಡ ಆಯ್ತು ಅಂತ ಪ್ರಾಂಶುಪಾಲರಿಗೇ ಬೆಂಕಿ ಹಚ್ಚಿದ ವಿದ್ಯಾರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts