More

    ಚುನಾವಣಾ ಕಣದಲ್ಲಿ ಕೋಟ್ಯಧೀಶರ ಅದೃಷ್ಟ ಪರೀಕ್ಷೆ; ಸಾಲ ಇಲ್ಲದ ಕಾಗೇರಿ | ಶತಕೋಟಿ ಒಡೆಯ ಭೈರತಿ ಬಸವರಾಜು

    ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಾಮಪತ್ರ ಸಲ್ಲಿಕೆ ಭರಾಟೆಯೂ ಜೋರಾಗಿದ್ದು, ಭರ್ಜರಿ ರ್ಯಾಲಿ, ರೋಡ್​ ಶೋಗಳು ನಡೆಯುತ್ತಿವೆ. ಕೋಟ್ಯಾಧೀಶ ರಾಜಕಾರಣಿಗಳು ಅದೃಷ್ಟ ಪರೀಕ್ಷೆಗಾಗಿ ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ

    ಕೋಟ್ಯಾಧಿಪತಿ ನಾರಾ ಭರತ್​ ರೆಡ್ಡಿ

    ಬಳ್ಳಾರಿ ನಗರ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ನಾರಾ ಭರತ್​ ರೆಡ್ಡಿ ಕೋಟ್ಯಾಧಿಪತಿಯಾಗಿದ್ದು, ಅವರ ಚರಾಸ್ತಿ ಮೌಲ್ಯ 20.32ಕೋಟಿ ರೂ., ಸ್ಥಿರಾಸ್ತಿ ಮೌಲ್ಯ 64.13 ಕೋಟಿ ರೂ. ಸೇರಿ ಒಟ್ಟು 84.45 ಕೋಟಿ ರೂ. ಇದೆ. ಪತ್ನಿ ಬಿ.ಎಸ್​.ವೈಜಯಂತಿ ರೆಡ್ಡಿ ಅವರ ಚರಾಸ್ತಿ 4.38 ಕೋಟಿ ರೂ. ಇದ್ದರೆ, ಸ್ಥಿರಾಸ್ತಿ 1.32 ಕೋಟಿ ರೂ.ಇದೆ. ಭರತ್​ 3.92 ಲಕ್ಷ ನಗದು ಹೊಂದಿದ್ದರೆ, ಪತ್ನಿ ವೈಜಯಂತಿ 10.54 ಲಕ್ಷ ರೂ. ಹೊಂದಿದ್ದಾರೆ. ಭರತ್​ ರೆಡ್ಡಿ ಹೆಸರಿನಲ್ಲಿ 1.51 ಕೋಟಿ ರೂ. ಮೌಲ್ಯದ 1885 ಗ್ರಾಂ ಚಿನ್ನಾಭರಣ, 10.50 ಲಕ್ಷ ರೂ. ಮೌಲ್ಯದ 10 ಕೆಜಿ, 152 ಗ್ರಾಂ ಬೆಳ್ಳಿ ಆಭರಣ ಹೊಂದಿದ್ದಾರೆ. ಪತ್ನಿ ವೈಜಯಂತಿ 2.23 ಕೋಟಿ ರೂ. ಮೌಲ್ಯದ 3750 ಗ್ರಾಂ. ಚಿನ್ನಾಭರಣ, 45.22 ಲಕ್ಷ ರೂ. ಮೌಲ್ಯದ 50 ಕೆ.ಜಿ. 25 ಗ್ರಾಂ ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ.

    ಇದನ್ನೂ ಓದಿ: ವರುಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದ ವಿ. ಸೋಮಣ್ಣ, ಪ್ರತಾಪ್ ಸಿಂಹಗೆ ಗ್ರಾಮಸ್ಥರಿಂದ ತರಾಟೆ

    ಶ್ರೀರಾಮುಲು ಜತೆಗೆ ಪತ್ನಿ, ಮಕ್ಕಳು ಕೋಟ್ಯಧಿಪತಿಗಳು

    ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು 46.57 ಕೋಟಿ ರೂ. ಒಡೆಯರಾಗಿದ್ದು, ಅವರ ಪತ್ನಿ ಬಿ. ಭಾಗ್ಯಲಕ್ಷ್ಮೀ, ಮಕ್ಕಳಾದ ಬಿ.ದೀಕ್ಷಿತಾ, ಬಿ.ಧನುಶ್​ ಕೂಡ ಕೋಟ್ಯಾಧಿಪತಿಗಳಿದ್ದಾರೆ. ರಾಮುಲು ಚರಾಸ್ತಿ 6.91 ಕೋಟಿ ರೂ. ಮತ್ತು ಸ್ಥಿರಾಸ್ತಿ 39.65 ಕೋಟಿ ರೂ. ಇದ್ದು, ಪತ್ನಿ ಭಾಗ್ಯಲಕ್ಷ್ಮೀ ಹೆಸರಿನಲ್ಲಿ ಚರಾಸ್ತಿ 1.31 ಕೋಟಿ ರೂ. ಮತ್ತು ಸ್ಥಿರಾಸ್ತಿ 20.29ಕೋಟಿ ರೂ. ಇದೆ.

    ಮಗಳು ದೀಕ್ಷಿತಾ 2.95 ಕೋಟಿ ರೂ., ಮಗ ಧನುಶ್​ 1.30 ಕೋಟಿ ರೂ., ಇನ್ನೊಬ್ಬ ಮಗಳು ಸಂಕಿತಾ 27.99 ಲಕ್ಷ ರೂ. ಚರಾಸ್ತಿಯನ್ನು ಹೊಂದಿದ್ದಾರೆ. ರಾಮುಲು 2.36 ಕೋಟಿ ರೂ. ಮೌಲ್ಯದ 4257 ಗ್ರಾಂ ಚಿನ್ನಾಭರಣ, 76 ಲಕ್ಷ ರೂ. ಮೌಲ್ಯದ 9500 ಗ್ರಾಂ, ಬೆಳ್ಳಿ ಆಭರಣಗಳನ್ನು ಹೊಂದಿದ್ದಾರೆ. ಅವರ ಪತ್ನಿ 12.91 ಲಕ್ಷ ಮೌಲ್ಯದ ಚಿನ್ನಾಭರಣ, ಮಗಳು ದೀಕ್ಷಿತಾ 36.04 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ.

    ಸಚಿವ ಹೆಬ್ಬಾರಗಿಂತ ಪತ್ನಿಯೇ ಸಿರಿವಂತೆ

    ಯಲ್ಲಾಪುರ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಶಿವರಾಮ ಹೆಬ್ಬಾರ ನಾಮಪತ್ರ ಸಲ್ಲಿಸಿದ್ದು, ಪತ್ನಿ ಮತ್ತು ತಮ್ಮ ಒಟ್ಟು ಆಸ್ತಿಯ ಮೌಲ್ಯ 21.16 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. 2019ರ ಉಪಚುನಾವಣೆಯಲ್ಲಿ 8.32 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿದ್ದರು. ಈಗ ಅಂದಾಜು 13 ಕೋಟಿ ರೂ. ಆಸ್ತಿ ಹೆಚ್ಚಿಸಿಕೊಂಡಿದ್ದಾರೆ. ಹೆಬ್ಬಾರಗಿಂತ ಪತ್ನಿ ವನಜಾ ಶ್ರೀಮಂತೆ. ಅವರ ಹೆಸರಲ್ಲಿರುವ ಆಸ್ತಿ ಮೌಲ್ಯ 13 ಕೋಟಿ ರೂ. ಉಳಿದ 8 ಕೋಟಿ ರೂ. ಹೆಬ್ಬಾರ ಅವರದಾಗಿದೆ. ಒಟ್ಟು 12.16 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 9.10 ಕೋಟಿ ರೂ.ಗಳ ಸ್ಥಿರಾಸ್ತಿ, 2.50 ಕೋಟಿ ರೂ. ಠೇವಣಿ, 5 ವಾಹನ, 2.95 ಕೆಜಿ ಚಿನ್ನಾಭರಣ ಹೊಂದಿದ್ದಾರೆ. ಒಟ್ಟು 2.31 ಕೋಟಿ ರೂ. ಸಾಲವೂ ಇದೆ.

    ಇದನ್ನೂ ಓದಿ: ಕದನ ಕಣದಲ್ಲಿ ತೊಡೆತಟ್ಟಿದ ಕೋಟಿವೀರರು; ಇಲ್ಲಿದೆ ಶತಕೋಟ್ಯಧೀಶ ರಾಜಕಾರಣಿಗಳ ಒಟ್ಟು ಆಸ್ತಿ ವಿವರ…

    ಲಕ್ಷ್ಮೀ ಪತಿ ಹೆಸರಲ್ಲಿ ಮನೆ ಇಲ್ಲ!

    ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಆದಾಯದಲ್ಲಿ ಗಣನೀಯ ಏರಿಕೆ ಕಂಡಿದ್ದು, ಕಳೆದ ಐದು ವರ್ಷಗಳಲ್ಲಿ 6.70 ಕೋಟಿ ರೂ. ಆದಾಯ ಹೆಚ್ಚಾಗಿದೆ. ಪತಿ ಹೆಸರಲ್ಲಿ ಯಾವುದೇ ಮನೆ ಇಲ್ಲ ಎಂದು ಅಫಿಡವಿಟ್​ ಸಲ್ಲಿಸಿದ್ದಾರೆ. 2018ರಲ್ಲಿ 36.58 ಲ ರೂ.ಆದಾಯ ಹೊಂದಿದ್ದ ಅವರು, 2022ರ ವೇಳೆಗೆ 7.15 ಕೋಟಿ ಏರಿಸಿಕೊಂಡಿದ್ದಾರೆ. 2019ರಲ್ಲಿ 41.67 ಲ ರೂ., 2020 ರಲ್ಲಿ 43.71 ಲ ರೂ., 2021ರಲ್ಲಿ 42.14 ಲ ರೂ.ಆದಾಯ ಹೊಂದಿದ್ದ ಅವರು, 2022ರಲ್ಲಿ 6.70 ಕೋಟಿ ರೂ.ಆದಾಯ ಹೊಂದಿದ್ದಾರೆ. ಅವರ ವಿರುದ್ಧ ಮೂರು ಅಪರಾಧ ಪ್ರಕರಣಗಳು ದಾಖಲಾಗಿದೆ. 10.86 ಕೋಟಿ ಮೌಲ್ಯದ ಚರಾಸ್ತಿ, 1.90 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 11.12 ಕೋಟಿ ರೂ.ಆಸ್ತಿ ಅವರಿಗಿದೆ. ಲ್ಮ ಒಟ್ಟು 5.63 ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ.

    ಸಿಪಿವೈ ಆಸ್ತಿ 35.28 ಕೋಟಿ ರೂ.

    ರಾಮನಗರ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್​ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಪತ್ನಿ ಶೀಲಾ ಮತ್ತು ಅವರ ಒಟ್ಟು ಚರ ಮತ್ತು ಸ್ಥಿರಾಸ್ತಿ 35.28 ಕೋಟಿ ರೂ.ಆಗಿದೆ. ಯೋಗೇಶ್ವರ್​ ಹೆಸರಲ್ಲಿ 250 ಗ್ರಾಂ ಚಿನ್ನ , ಸಾರ್ವಜನಿಕರಿಂದ ಉಡುಗೊರೆಯಾಗಿ ಪಡೆದ 1 ಕೆಜಿ ಚಿನ್ನ ಮತ್ತು 50 ಕೆಜಿ ಬೆಳ್ಳಿ ಒಳಗೊಂಡಂತೆ 5.09 ಕೋಟಿ ರೂ. ಚರಾಸ್ತಿ ಇದೆ. ಪತ್ನಿ ಹೆಸರಲ್ಲಿ 1.5 ಕೆಜಿ ಚಿನ್ನ, 20 ಕೆಜಿ ಬೆಳ್ಳಿ ಒಳಗೊಂಡಂತೆ ಒಟ್ಟು 2.43 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಯೋಗೇಶ್ವರ್​ 30.69 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಮಾಲೀಕರಾದರೆ, ಶೀಲಾ 4.58 ಕೋಟಿ ರೂ. ಚರ ಮತ್ತು ಸ್ಥಿರಾಸ್ತಿ ಒಡತಿ. ಯೋಗೇಶ್ವರ್​ಗೆ 13 ಕೋಟಿ ರೂ ಸಾಲವಿದೆ. ಇವರಿಬ್ಬರ ಹೆಸರಲ್ಲಿ ಯಾವುದೇ ವಾಹನ ಇಲ್ಲ. ಸಿಪಿವೈ ದಂಪತಿ 2018ರ ಚುನಾವಣೆಯಲ್ಲಿ 44.90 ಕೋಟಿ ರೂ.ಚರ ಮತ್ತು ಸ್ತಿರಾಸ್ತಿ ಘೋಷಿಸಿದ್ದರು.

    ಸಾಲ ಇಲ್ಲದ ಕಾಗೇರಿ

    ಬಹಳಷ್ಟು ರಾಜಕಾರಣಿಗಳು ಭರ್ಜರಿ ಆಸ್ತಿ ಹೊಂದಿದ್ದರೂ ಅಗತ್ಯವಾಗಿ ಎಂಬಂತೆ ಸಾಲವನ್ನೂ ಹೊಂದಿರುತ್ತಾರೆ. ಆದರೆ, ಶಿರಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಎಲ್ಲಿಯೂ ಸಾಲಗಾರ ಅಲ್ಲ. ವಿಶ್ವೇಶ್ವರ ಹೆಗಡೆ, ಪತ್ನಿ, ಮಕ್ಕಳ ಆಸ್ತಿ ಮೌಲ್ಯ ಒಟ್ಟು 16.22 ಕೋಟಿ ರೂ.ಗಳು. 2018 ರಲ್ಲಿ ಅವರು 7.46 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಐದು ವರ್ಷಗಳಲ್ಲಿ ದುಪ್ಪಟ್ಟಾಗಿದೆ.
    ಕಾಗೇರಿ ಹೆಸರಲ್ಲಿ 1 ಕಾರು, ಬಂಗಾರ ಎಲ್ಲ ಸೇರಿ 5.07 ಕೋಟಿ ರೂ. ಚರ ಆಸ್ತಿಗಳಿವೆ. ಶಿರಸಿ, ಬೆಂಗಳೂರಿನಲ್ಲಿ ವಾಸದ ಕಟ್ಟಡ, ಕೃಷಿಯೇತರ ಜಮೀನು ಸೇರಿ 5 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳಿವೆ. ಅವರ ಪತ್ನಿಯ ಹೆಸರಿನಲ್ಲಿ 3.03 ಕೋಟಿ ರೂ. ಮೌಲ್ಯದ ಚರ ಆಸ್ತಿಗಳಿವೆ. ಕುಟುಂಬದ ಪಾಲುದಾರಿಕೆಯಲ್ಲಿ 3.09 ಕೋಟಿ ರೂ.ಗಳ ಆಸ್ತಿ ಇದೆ. ಕುಟುಂಬದ ಪಾಲುದಾರಿಕೆಯಲ್ಲಿ ಅವರು ಶಿರಸಿ ತಾಲೂಕು ಸೋಂದಾದಲ್ಲಿ 2012ರಲ್ಲಿ ಕೃಷಿ ಜಮೀನು ಖರೀದಿಸಿದ್ದಾರೆ.

    ಇದನ್ನೂ ಓದಿ: ತಾವೇ ಹಣ ಹಾಕಿ ಯಾಮಾರಿಸುವ ಕಿಲಾಡಿಗಳು! ಪಾರ್ಟ್​ ಟೈಮ್​ ಉದ್ಯೋಗ ಹೆಸರಿನಲ್ಲಿ ‘ಫುಲ್​ ಟೈಮ್​’ ಧೋಖಾ

    ಭೈರತಿ ಬಸವರಾಜು ಶತಕೋಟಿ ಒಡೆಯ

    ಕೆ.ಆರ್​.ಪುರ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜು ಅವರು ತಮ್ಮ ಪತ್ನಿ ಆಸ್ತಿ ಸೇರಿ ಶತಕೋಟಿಯ ಒಡೆಯರಾಗಿದ್ದಾರೆ. 31.99 ಕೋಟಿ ಚರಾಸ್ತಿ ಮತ್ತು 58.94 ಕೋಟಿ ಚಿರಾಸ್ತಿ ಹೊಂದಿದ್ದಾರೆ.
    ನಾನಾ ಬ್ಯಾಂಕ್​ಗಳಲ್ಲಿ 4.94 ಕೋಟಿ ರೂ. ಠೇವಣಿ ಹಾಗೂ ಎಲ್​ಐಸಿಯಲ್ಲಿ ಒಂದು ಕೋಟಿ ರೂ. ತೊಡಗಿಸಿದ್ದಾರೆ. ಜಮೀನು ಖರೀದಿಗಾಗಿ 5 ಕೋಟಿಗೂ ಹೆಚ್ಚು ಮುಂಗಡ ಹಣವನ್ನು ಕೊಟ್ಟಿದ್ದಾರೆ. ಪತ್ನಿಯ ಬಳಿ 4.63 ಕೋಟಿ ಚರಾಸ್ತಿ, 21.57 ಕೋಟಿ ಸ್ಥಿರಾಸ್ತಿ ಇದೆ. ಒಂದು ಕೋಟಿ ಬೆಲೆಯ ಆಡಿ ಕಾರು, 60 ಲಕ್ಷದ ಬೆನ್ಜಕಾರು ಸೇರಿ ಆರು ವಾಹನಗಳಿವೆ. 23.18 ಕೋಟಿ ರೂ ಬಾಕಿ ಬರಬೇಕಾಗಿದೆ ಎನ್ನುವುದನ್ನು ಬಸವರಾಜು ಅವರು ಅಫಿಡವಿಟ್​ನಲ್ಲಿ ದಾಖಲಿಸಿದ್ದಾರೆ.

    ಕೆ.ಆರ್​. ರಮೇಶ್​ಕುಮಾರ್​ 3.69 ಕೋಟಿ ರೂ. ಸ್ಥಿರಾಸ್ತಿ

    ಶ್ರೀನಿವಾಸಪುರ: ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಕೆ.ಆರ್​. ರಮೇಶ್​ಕುಮಾರ್​ ಅವರು ಮಂಗಳವಾರ ಉಮೇದುವಾರಿಕೆ ಸಲ್ಲಿಸಿದ್ದು, 82.08 ಲಕ್ಷ ರೂ. ಚರಾಸ್ತಿ ಹಾಗೂ 3,69,88,625 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ. ವಿವಿಧ ಬ್ಯಾಂಕ್​ನಲ್ಲಿ 26,31,417 ಲಕ್ಷ ರೂ. ಇದೆ. 25 ಲಕ್ಷ ರೂ. ಮೌಲ್ಯದ ಒಂದು ಇನ್ನೋವಾ ಕಾರು, 5,67,166 ಲಕ್ಷ ಮೌಲ್ಯದ ಟ್ರ್ಯಾಕ್ಟರ್​, 90,000 ರೂಪಾಯಿ ಮೌಲ್ಯದ ಟ್ರೇಲರ್​ ಹೊಂದಿದ್ದಾರೆ.

    3.27 ಲಕ್ಷ ರೂ ಮೌಲ್ಯದ 4,000 ಗ್ರಾಂ ಬೆಳ್ಳಿ , 19.65 ಲಕ್ಷ ರೂಪಾಯಿ ಮೌಲ್ಯದ 350 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಒಟ್ಟು 3,69,88, 625 ಕೋಟಿ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಕುರಿ ಶೆಡ್​ ನಿರ್ಮಾಣಕ್ಕಾಗಿ ಡಿಸಿಸಿ ಬ್ಯಾಂಕಿನಿಂದ 20,39,998 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ.

    ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಕೆಆರ್​ಪಿಪಿ ಹಾಗೂ ಜೆಡಿಎಸ್ ಮುಖಂಡರ ವಿರುದ್ಧ ಪ್ರಕರಣ ದಾಖಲು

    ಬಿ.ಸಿ. ಪಾಟೀಲ ಆಸ್ತಿ 21.36 ಕೋಟಿ ರೂ.

    ಹಾವೇರಿ ಹಿರೇಕೆರೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿರುವ ಕೃಷಿ ಸಚಿವ ಬಿ.ಸಿ. ಪಾಟೀಲ ತಮ್ಮ ಕುಟುಂಬ ಒಟ್ಟು 21.36 ಕೋಟಿ ರೂ.ಗಳ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.ಬಿ.ಸಿ. ಪಾಟೀಲ ಹೆಸರಲ್ಲಿ 19.28 ಕೋಟಿ ರೂ. ಆಸ್ತಿ, ಪತ್ನಿ ವನಜಾ ಹೆಸರಲ್ಲಿ 2.08 ಕೋಟಿ ರೂ. ಆಸ್ತಿ ಇದೆ. ಕಳೆದ ಬಾರಿಗಿಂತ ಈ ಸಲ 16 ಕೋಟಿ ರೂ. ಹೆಚ್ಚಳವಾಗಿದೆ.

    ಪತಿ-ಪತ್ನಿ ತಲಾ ಒಂದು ಮರ್ಸಿಡಿಸ್​ ಬೆಂಜ್​ ಕಾರು (ಒಟ್ಟು ಮೌಲ್ಯ 1 ಕೋಟಿ ರೂ.); ಅನುಕ್ರಮವಾಗಿ 350 ಗ್ರಾಂ, 550 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಸಚಿವರು ಹಿರೇಕೆರೂರ ತಾಲೂಕು ಚಿಕ್ಕೊಣತಿ, ಸೊರಬ ತಾಲೂಕು ಯಲಿವಾಳ, ದಾವಣಗೆರೆ ತಾ. ಕುಂದವಾಡ, ಬೆಂಗಳೂರಿನ ಯಲಹಂಕ (22 ಗುಂಟೆ), ನೆಲಮಂಗಲ ತಾಲೂಕು ತ್ಯಾಮಗೊಂಡ್ಲುವಿನಲ್ಲಿ (2 ಎಕರೆ) ಕೃಷಿ ಭೂಮಿ ಹೊಂದಿದ್ದಾರೆ. ಅವರಿಗೆ 16 ಕೋಟಿ ರೂ. ಸಾಲವೂ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts