More

    ಬಿಲ್ ಪಾವತಿಗೆ ಕಾಲಾವಕಾಶ ಕೊಡಿ

    ಎಂ.ಕೆ. ಹುಬ್ಬಳ್ಳಿ: ಬಾಕಿ ಉಳಿದಿರುವ ಕಬ್ಬಿನ ಬಿಲ್ ಪಾವತಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದಲ್ಲಿ ಪಕ್ಷಾತೀತವಾಗಿ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಎದುರು ರೈತರು ಸೋಮವಾರದಿಂದ ಹಮ್ಮಿಕೊಂಡಿದ್ದ ಆಹೋರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿ ಹಿರೇಮಠ ಅವರ ಭರವಸೆ ಹಿನ್ನೆಲೆಯಲ್ಲಿ ಹಿಂಪಡೆದರು.

    ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ರೈತರಿಗೆ ಪಾವತಿಯಾಗಬೇಕಿರುವ ಕಬ್ಬಿನ ಬಾಕಿ ಹಣವನ್ನು ಒಂದು ತಿಂಗಳ ಅವಧಿಯಲ್ಲಿ ಪಾವತಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ರೈತರ ಕಷ್ಟ ಗೊತ್ತಿದೆ. ಕಾರ್ಖಾನೆ ಆಡಳಿತಾಧಿಕಾರಿಯಾದ ನಂತರ ಇಲ್ಲಿನ ಆರ್ಥಿಕ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದೇನೆ. ರೈತರ ಬಾಕಿ ಬಿಲ್ ನೀಡುವ ಉದ್ದೇಶದಿಂದಲೇ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಬ್ಯಾಂಕ್‌ಗೆ ಸಂಬಂಧಿಸಿದ ಕೋರ್ಟ್ ತೀರ್ಪು ಸೆ. 9ರಂದು ಬರಲಿದೆ. ಕಾರ್ಖಾನೆಯ ಸಂಕಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆಯುವ ಜತೆಗೆ ರೈತರಿಗೆ ಬಿಲ್ ಪಾವತಿಸಲು ಅಗತ್ಯ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

    ಹೋರಾಟದಲ್ಲಿ ಪಾಲ್ಗೊಂಡಿದ್ದ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಸರ್ಕಾರ ನಷ್ಟದಲ್ಲಿರುವ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಅನುದಾನ ಕಲ್ಪಿಸುವ ಮೂಲಕ ಕಾರ್ಖಾನೆ ಉಳಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು. ದಕ್ಷಿಣ ಕರ್ನಾಟಕದ ಕಾರ್ಖಾನೆಗಳ ಸಂಕಷ್ಟಕ್ಕೆ ಕೈಜೋಡಿಸುವ ಸರ್ಕಾರಗಳು, ಉತ್ತರ ಕರ್ನಾಟಕದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಉಳಿವಿಗೂ ಕೈಜೋಡಿಸಬೇಕು ಎಂದು ಒತ್ತಾಯಿಸಿದರು. ಕಾರ್ಖಾನೆ ಎಂಡಿ ರವೀಂದ್ರ ಪಟ್ಟಣಶೆಟ್ಟಿ, ತಹಸೀಲ್ದಾರ್ ಪ್ರವೀಣ ಜೈನ್, ದೀಪನ್ ಎಂ.ಎನ್., ಸಿಪಿಐ ಮಂಜುನಾಥ ಕುಸಗಲ್, ಪಿಎಸ್‌ಐ ಶಂಕ್ರಯ್ಯ ಮಾವಿನಕಟ್ಟಿ, ಆನಂದ ಕ್ಯಾರಕಟ್ಟಿ, ನಿಚ್ಚಣಕಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಮುಖಂಡರಾದ ಹಬೀಬ ಶಿಲೇದಾರ, ಚೂನಪ್ಪ ಪೂಜೇರಿ, ರಾಘವೇಂದ್ರ ನಾಯ್ಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts