More

    ವೊಡಾಫೋನ್ ಐಡಿಯಾ ಷೇರು ಖರೀದಿಗೆ ಬಿಡ್ಡಿಂಗ್​ ಜೋರು: ಎಫ್‌ಪಿಒ ಸ್ಟಾಕ್​ ಹಂಚಿಕೆ ಮಾಡುತ್ತಿರುವುದೇಕೆ?

    ಮುಂಬೈ: ಸಾಲದ ಸುಳಿಯಲ್ಲಿ ಸಿಲುಕಿರುವ ಟೆಲಿಕಾಂ ಕಂಪನಿ ವೊಡಾಫೋನ್-ಐಡಿಯಾದ ರೂ 18,000 ಕೋಟಿ ಎಫ್‌ಪಿಒ (ಫಾಲೋ ಆನ್​ ಪಬ್ಲಿಕ್​ ಆಫರ್​. ಅಂದರೆ, ಈಗಾಗಲೇ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಿರುವ ಕಂಪನಿಯು ಬಂಡವಾಳವನ್ನು ಕ್ರೋಡೀಕರಿಸಲು ಷೇರುಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡುವುದು.) ಶುಕ್ರವಾರ ವೇಗವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ, ಮುಖ್ಯವಾಗಿ ಸಾಂಸ್ಥಿಕ ಹೂಡಿಕೆದಾರರು ಮುಂದೆ ಬರುವುದರಿಂದ, ಅರ್ಧದಷ್ಟು ಚಂದಾದಾರಿಕೆ ದೊರೆತಿದೆ. ಅಂದರೆ, ಮಾರಾಟ ಮಾಡಲು ಉದ್ದೇಶಿಸಿರುವ ಷೇರುಗಳ ಪೈಕಿ ಅರ್ಧದಷ್ಟು ಷೇರುಗಳ ಖರೀದಿಗೆ ಬಿಡ್​ ಸಲ್ಲಿಸಲಾಗಿದೆ.

    ಷೇರು ಮಾರುಕಟ್ಟೆಯ ಅಂಕಿಅಂಶಗಳ ಪ್ರಕಾರ, ಎಫ್‌ಪಿಒದ ಎರಡನೇ ದಿನದ ಅಂತ್ಯದ ವೇಳೆಗೆ, ಪ್ರಮುಖ ಹೂಡಿಕೆದಾರರಿಂದ 5,400 ಕೋಟಿ ರೂ. ಸೇರಿದಂತೆ ಒಟ್ಟು 12,000 ಕೋಟಿ ರೂ. ಬಿಡ್​ ಬಂದಿದೆ.

    ಬಿಎಸ್‌ಇಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಆಫರ್‌ನ ಅಡಿಯಲ್ಲಿ ನೀಡಲಾದ 1,260 ಕೋಟಿ ಷೇರುಗಳ ಪೈಕಿ ಶುಕ್ರವಾರದವರೆಗೆ 617.46 ಕೋಟಿ ಷೇರುಗಳಿಗೆ ಚಂದಾದಾರಿಕೆ ಬಂದಿದೆ. ಅರ್ಹ ಸಾಂಸ್ಥಿಕ ಖರೀದಿದಾರರು ಅವರಿಗೆ ಕಾಯ್ದಿರಿಸಿದ ರೂ. 360 ಕೋಟಿ ಷೇರುಗಳ ಪೈಕಿ 93 ಪ್ರತಿಶತವನ್ನು ಬಿಡ್ ಮಾಡಿದ್ದಾರೆ. ಸಾಂಸ್ಥಿಕವಲ್ಲದ ಹೂಡಿಕೆದಾರರು ತಮಗಾಗಿ ಮೀಸಲಿಟ್ಟ ರೂ. 270 ಕೋಟಿ ಷೇರುಗಳಲ್ಲಿ ಶೇ. 75 ಷೇರುಗಳನ್ನು ಖರೀದಿಸಲು ಬಿಡ್​ ಸಲ್ಲಿಸಿದ್ದಾರೆ.

    ಆದರೆ, ಚಿಲ್ಲರೆ ಹೂಡಿಕೆದಾರರಿಂದ ಮಂದಗತಿಯ ಪ್ರತಿಕ್ರಿಯೆ ಬಂದಿದೆ. ಇವರಿಗೆ ಮೀಸಲಿಟ್ಟ ರೂ. 630 ಕೋಟಿ ಷೇರುಗಳಲ್ಲಿ ಕೇವಲ 13 ಪ್ರತಿಶತದಷ್ಟು ಬಿಡ್‌ಗಳನ್ನು ಸ್ವೀಕರಿಸಲಾಗಿದೆ.

    ಪ್ರತಿ ಷೇರಿಗೆ 10-11 ರೂ. ಬೆಲೆ ಶ್ರೇಣಿಯನ್ನು ಈ ಎಫ್​ಪಿಒ ಷೇರುಗಳಿಗೆ ನಿಗದಿಪಡಿಸಲಾಗಿದೆ. ಕಂಪನಿಯ ಷೇರುಗಳು ಶುಕ್ರವಾರ ಮಾರುಕಟ್ಟೆಯಲ್ಲಿ ಶೇ. 2.12ರಷ್ಟು ಕುಸಿದು 12.92 ರೂ. ತಲುಪಿವೆ. ಎಫ್​ಪಿಒದಲ್ಲಿ ಷೇರು ಪಡೆಯಲು ಬಿಡ್​ ಸಲ್ಲಿಸಲು ಏಪ್ರಿಲ್ 22 ಕೊನೆಯ ದಿನವಾಗಿದೆ.

    ಕಂಪನಿಯು ತನ್ನ ನೆಟ್‌ವರ್ಕ್ ಮೂಲಸೌಕರ್ಯವನ್ನು ವಿಸ್ತರಿಸಲು ಮತ್ತು DoT (ದೂರಸಂಪರ್ಕ ಇಲಾಖೆ) ಗೆ ಕೆಲವು ಪಾವತಿಗಳನ್ನು ಮಾಡಲು ಈಕ್ವಿಟಿ ಷೇರುಗಳ ಹೊಸ ಹಂಚಿಕೆಯಿಂದ ಬರುವ ಆದಾಯವನ್ನು ಬಳಸಲಿದೆ.

    4G ಕೊರತೆಯಿಂದಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ ಎಂದು ವೊಡಾಫೋನ್-ಐಡಿಯಾ ಒಪ್ಪಿಕೊಂಡಿದೆ. ಆದರೆ ಈಗ ಹೂಡಿಕೆದಾರರ ಆಗಮನ ಮತ್ತು ನಿರಂತರ ಪ್ರಯತ್ನಗಳಿಂದಾಗಿ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ. ಈಗ ಕಂಪನಿಯು 5G ಗೆ ಸಂಪೂರ್ಣವಾಗಿ ಸಿದ್ಧವಾಗಿದ್ದು, ಅಪ್‌ಗ್ರೇಡ್ ಅನ್ನು ಕ್ರಮೇಣ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ. ಇದೀಗ 4G ವ್ಯಾಪ್ತಿಯನ್ನು ಹೆಚ್ಚಿಸುವುದು ಆದ್ಯತೆಯಾಗಿದೆ ಎಂದು ಅದು ಹೇಳಿದೆ.

    ದಿಗ್ಗಜ ಹೂಡಿಕೆದಾರ ಕೇಡಿಯಾ ಬೆಂಬಲಿತ ಷೇರು ಬೆಲೆ ಗಗನಕ್ಕೆ: ಈಗಿನ ತೀವ್ರ ಏರಿಕೆಗೆ ಹೀಗಿವೆ 3 ಕಾರಣಗಳು

    ಒಂದು ವರ್ಷದಲ್ಲಿ ಷೇರು ಬೆಲೆ ರೂ 182 ರಿಂದ 2,386ಕ್ಕೆ ಏರಿಕೆ: ಗರಿಷ್ಠ ಬೆಲೆ ಮುಟ್ಟಿದ ಸೋಲಾರ್ ಸ್ಟಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts