More

    ಸೂರ್ಲಬ್ಬಿಯಲ್ಲಿ ಅದ್ಧೂರಿಯಾಗಿ ನಡೆದ ಭೀರ ನಮ್ಮೆ

    ಮಡಿಕೇರಿ: ಶತ್ರುಗಳ ದಾಳಿಗೆ ಅಂಜದೇ ಕೆಚ್ಚೆದೆಯಿಂದ ಹೋರಾಡಿ ನಾಡನ್ನು ರಕ್ಷಿಸಿದ ಪಡೆಭೀರರ ನೆನಪಿನಲ್ಲಿ ಸೂರ್ಲಬ್ಬಿ ನಾಡಿನ ಮಧ್ಯಭಾಗದಲ್ಲಿರುವ ಬೀರಂಗೊಡದಲ್ಲಿ ಅದ್ಧೂರಿಯಾಗಿ ಭೀರನಮ್ಮೆ ಇತ್ತೀಚೆಗೆ ನಡೆಯಿತು.


    ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವವು ನಾಡಿಗಾಗಿ ಮಡಿದ ನೂರಾರು ಪಡೆಭೀರರಿಗೆ ಎಡೆ ಇಟ್ಟು ಶ್ರದ್ಧಾ ಭಕ್ತಿಯಿಂದ ಸಂಪ್ರದಾಯಬದ್ಧವಾಗಿ ಆಚರಿಸಲ್ಪಡುತ್ತದೆ. ಅದೇ ರೀತಿ ಪುರಾತನ ಕಾಲದಿಂದಲೂ ಶೂರತನಕ್ಕೆ ಹೆಸರುವಾಸಿಯಾಗಿರುವ ಸೂರ್ಲಬ್ಬಿಯ ಅಂಜಿಕೇರಿ(ಚೂರೆಬ್ಬಿ, ಮುಟ್ಟ, ಕುಂಬಡಿ, ಮಕ್ಕೇತ್, ಕ್‌ಕ್ಕಳ್ಳಿ)ಯ ಗ್ರಾಮಸ್ಥರು ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ.


    ಇತಿಹಾಸ: ನಾಡಿನ ಅಸ್ತಿತ್ವವನ್ನೇ ಅಳಿಸಲು ಬಂದ ಟಿಪ್ಪುವಿನ ಕಳ್ಳಪಡೆಯನ್ನು ಕಂಡು ಯುದ್ಧದ ಮಾಹಿತಿ ಇಲ್ಲದ ತಮ್ಮಷ್ಟಕ್ಕೆ ತಾವಿದ್ದ ಗ್ರಾಮಸ್ಥರು ದಿಗ್ಬ್ರಾಂತರಾಗುತ್ತಾರೆ. ಎದುರಿಗಿದ್ದ, ಮುದ್ದಂಡ, ತಂಬುಕುತ್ತಿರ ಮತ್ತು ಐರಿರ ತಲಾ ಒಬ್ಬರು ಅಜ್ಜಂದಿರು ಕೈಗೆ ಸಿಕ್ಕ ತೆಂಗಿನಕಾಯಿ ಬಾಳೆಗೊನೆಯೊಂದಿಗೆ ನಾಡಿನ ರಕ್ಷಕ ಕೇತ್ರಪ್ಪನ ಸನ್ನಿಧಿಗೆ ಓಡಿ ದೇವರಲ್ಲಿ ರಕ್ಷಣೆಗಾಗಿ ಗೋಗರೆಯುತ್ತಾರೆ. ನೋಡನೋಡುತ್ತಿದ್ದಂತೆ ಕೇತ್ರಪ್ಪನ ಸನ್ನಿಧಾನದಿಂದ ಹೆಜ್ಜೇನಿನ ಹಿಂಡೊಂದು ಹಾರಿ ಬಂದು ಶತ್ರು ಪಡೆಯ ಮೇಲರಗುತ್ತವೆ.


    ಇದೇ ಸಂದರ್ಭದಲ್ಲಿದಲ್ಲಿ ನಾಡಿನ ಯೋಧರೂ ಶತ್ರುಗಳ ಮೇಲೆ ಮುಗಿಬೀಳುತ್ತಾರೆ. ಹಠಾತ್ ಆಗಿ ಧಾಳಿಯಾದ್ದರಿಂದ ಬೆಚ್ಚಿದ ಪಡೆ, ಪ್ರತಿಧಾಳಿ ತಾಳಲಾರದೆ ಸಮೀಪವಿದ್ದ ಕೂವಳೆಗೆ ಹಾರುತ್ತಾರೆ. ಅಲ್ಲಿ ಸಾವಿರಾರು ಶತ್ರುಗಳು ಅಳಿಯುತ್ತಾರೆ. ಹಾಗೆ ಹಾರಿದ ಜಾಗವನ್ನು ಬಡ್ಸತ್ತ ಕುಂಡ್(ಬಡುವ ಸತ್ತ್ ಗುಂಡಿ) ಎಂದು ಕರೆಯಲಾಗುತ್ತದೆ. ಸತ್ತ ಶತ್ರುಗಳ ಆಯುಧಗಳನ್ನು, ಕೇತುರಪ್ಪನಿಗೆ ಬಂಡಾರವಾಗಿ ಅರ್ಪಿಸಲಾಗಿದೆ.


    ಇಂದಿಗೂ ವಾರ್ಷಿಕ ಉತ್ಸವದಲ್ಲಿ ಆಯುಧಗಳನ್ನು ಹೊರತೆಗೆದು ನಾಡಿನವರು ಬೊಳಕಾಟಿನ ಮೂಲಕ ಪ್ರದರ್ಶಿಸುತ್ತಾರೆ. ಈ ಮಹಾ ಯುದ್ಧದಲ್ಲಿ ಮಡಿದ, ಪುರುಷ, ಮಹಿಳೆ, ಮಕ್ಕಳಾದಿಯಾಗಿ ಭೀರರ ನೆನಪಿನಲ್ಲಿ, ಇತರ ಪಡೆಗಳಲ್ಲಿ, ಕಾಡು ಪ್ರಾಣಿಗಳೊಂದಿಗೆ ಸೆಣಸಿ, ನಾಡಿಗಾಗಿ ಮಡಿದ ವೀರರ ನೆನಪಿನಲ್ಲಿ, ನಂತರದ ದಿನಗಳಲ್ಲಿ ಬೀರಕಲ್ಲುಗಳನ್ನು ನೆಟ್ಟು ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಭೀರನಮ್ಮೆಯಾಗಿ ಆಚರಿಸಲಾಗತ್ತದೆ. ಅಲ್ಲದೆ ಪ್ರತೀ ಕೈಲ್ ಪೊಳ್ದ್ ನಮ್ಮೆಯಲ್ಲಿಯೂ ಇಲ್ಲಿ ಮೀದಿ ನೀರ್ ಇಡಲಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.


    ಇಲ್ಲಿ ಮುದ್ದಂಡ, ತಂಬುಕುತ್ತಿರ, ಓಡಿಯಂಡ ಮತ್ತು ಐರಿ ಒಕ್ಕಗಳು ಮುಕ್ಕಾಟಿಯರಾಗಿ ಕಾರ್ಯನಿರ್ವಹಿಸುತ್ತಾರೆ. ದೇವರನ್ನು ಬೇಡಿ ನಾಡನ್ನು ಕಾಪಾಡಿದಕ್ಕಾಗಿ ಆ ಒಕ್ಕಗಳಿಗೆ ಸಲ್ಲುವ ಗೌರವವಾಗಿದೆ. ಪುರಾತನ ಕಾಲದಿಂದಲೂ ಕಾಡು ಬೇಟೆಯಾಡಿ ನೈವೇದ್ಯ ಅರ್ಪಿಸಲಾಗುತಿತ್ತಾದರೂ ಕಾನೂನಿನ ದೃಷ್ಟಿಯಿಂದ ಕೇವಲ ಸಾಂಪ್ರದಾಯಿಕ ಆಚರಣೆಯಷ್ಟೇ ನಡೆಯುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.


    ಎತ್ತ್ ಪೋರಾಟ, ದುಡಿಕೊಟ್‌ನೊಂದಿಗೆ ಬೀರಂಗೊಡಕ್ಕೆ ಬಂದು, ಮುದ್ದಂಡ, ಓಡಿಯಂಡ, ತಂಬುಕುತ್ತಿರ ಮತ್ತು ಐರಿರ ಒಕ್ಕದಿಂದ, ಅಕ್ಕಿ, ತೆಂಗಿನಕಾಯಿ, ಬಾಳೆ, ಅಕ್ಕಿ ಪುಡಿಯನ್ನು ತಂದು ನೈವೇದ್ಯ ತಯಾರಿಸಿ, ಪ್ರತೀ ಭೀರಂಗಲ್ಲಿಗೂ ನೈವೇದ್ಯ ಸಮರ್ಪಿಸಲಾಯಿತು. ಮುದ್ದಂಡ ಒಕ್ಕವು ಆಚರಣೆಯ ಪ್ರಮುಖ ಜವಾಬ್ದಾರಿಯನ್ನು ನಿಭಾಯಿಸಿತು. ಈ ನಾಲ್ಕೂ ಒಕ್ಕದ ತಲಾ ಒಬ್ಬರು ಸಾಂಪ್ರದಾಯಿಕ ಉಡುಪಿನಲ್ಲಿ ಅರ್ಜಿಯನ್ನು ಹಿಡಿದು, ಪಡೆ ಬಾತ್… ಪಡೆ ಬಾತ್….ಪಡೆ ಬಾತ್.. ಪಡೆ ಬಂತ್ಲೆ… ಪಡೆ ಬಂತ್ಲೆ… ಪಡೆ ಬಂತ್ಲೆ…(ಶತ್ರು ಪಡೆ ಬಂತು, ಶತ್ರು ಪಡೆ ಬಂದಿಲ್ಲ) ಎಂದು ಉದ್ಗರಿಸುತ್ತ ನಿಂತಲ್ಲಿಯೇ ಮುಮ್ಮುಖ, ಹಿಮ್ಮುಖವಾಗಿ ಜಿಗಿಯುವುದು ಸಂಪ್ರದಾಯದ ಹಿನ್ನೆಲೆಗೆ ಸಾಕ್ಷಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts