More

    ಗಂಧರ್ವ ಗಾಯಕ, ಸಂಗೀತದ ಮೇರು ಶಿಖರ; ಭೀಮಸೇನ್ ಜೋಶಿ ಜನ್ಮಶತಮಾನೋತ್ಸವ ವರ್ಷ

    ಭೀಮಸೇನ್ ಜೋಶಿಯವರ ‘ಯಾಕೆ ಮೂಕನಾದ್ಯೊ’, ‘ಎನ್ನ ಪಾಲಿಸೋ ಕರುಣಾಕರ’, ‘ತುಂಗಾ ತೀರದಿ ನಿಂತ ಸುಯತಿವರ’ ಎಂಬ ಹಾಡುಗಳು ನಿತ್ಯ ಕೇಳುತ್ತಲೇ ಇರುತ್ತವೆ. ಪಂಢರಾಪುರದಲ್ಲಿ ‘ತೀರ್ಥ ವಿಠ್ಠಲ ಕ್ಷೇತ್ರ ವಿಠ್ಠಲ’, ‘ಮಾಜೇ ಮಾಹೇರ ಪಂಢರಿ’ ಅಲ್ಲದೆ, ಅದೆಷ್ಟೋ ಹಾಡುಗಳು ಕೇಳುತ್ತಲೇ ಇರುತ್ತವೆ. ಇವೆಲ್ಲ ಒಬ್ಬ ದೈವೀಪುರುಷನಿಗೆ ಮಾತ್ರ ಒಲಿದು ಬರುವ ಭಾಗ್ಯ.

    | ಪಂ. ಜಯತೀರ್ಥ ಮೇವುಂಡಿ ಖ್ಯಾತ ಹಿಂದುಸ್ತಾನಿ ಸಂಗೀತಗಾರರು

    ಅದು 1995ನೇ ಇಸವಿ. ಗೋವಾ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಪುಣೆಯಿಂದ ಕರೆ ಬಂತು. ‘ನೀವು ಬಂದು ನಮ್ಮ ಕಾರ್ಯಕ್ರಮದಲ್ಲಿ ಕಛೇರಿ ನೀಡಬೇಕು’ ಎಂದು. ನನಗೆ ಆಗ 22 ವರ್ಷ. ಅಳುಕು, ಅಂತಹ ಕಾರ್ಯಕ್ರಮದಲ್ಲಿ ಹಾಡಲು ನಾನು ಸಫಲನಾದೇನೆ ಎಂಬ ಆತಂಕ.

    ಪುಣೆಯಿಂದ ಕರೆ ಮಾಡಿದವರು ಬೇರಾರೂ ಅಲ್ಲ; ಮೇರುಗಾಯಕ ಪಂಡಿತ್ ಭೀಮಸೇನ್ ಜೋಶಿ. ಅದು ಅವರ ಗುರುಗಳಾದ ಸವಾಯಿ ಗಂಧರ್ವರ ಪುಣ್ಯಸ್ಮರಣೆ ಕಾರ್ಯಕ್ರಮ. ಕಾರ್ಯಕ್ರಮದ ದಿವಸ ಒಂದು ಕಡೆ ಕುಳಿತು ತಾಲೀಮು ಮಾಡುತ್ತಿದ್ದೆ. ಅಲ್ಲಿಗೆ ಭೀಮಸೇನ್ ಜೋಶಿ ಬಂದರು. ತಾನ್​ಪುರ ಅವರೇ ಸೆಟ್ ಮಾಡಿಕೊಟ್ಟರು. ‘ಹಾಡ್ರೀ’ ಅಂದರು. ಅವರು ಇದ್ದಾರೆ ಎಂಬ ಭಯದಿಂದ ಹಾಡು ಮರೆತು ಹೋಯಿತು. ‘ಬೇರೆ ಯಾವ್ದು ಬರ್ತದ ಅದ್ನೆ ಹಾಡ್ರೀ’ ಎನ್ನುವ ಪ್ರೋತ್ಸಾಹದ ಮಾತು ಅವರಿಂದ ಬಂತು. ಇಲ್ಲ… ನನಗೆ ನೆನಪೇ ಆಗ್ತಾ ಇರಲಿಲ್ಲ. ಆಗ ಅವರು ಹೇಳಿದ ಮಾತು, ‘ಹಾಡಾಕ ಕುಂತಾಗ ನಾನೇ ತಾನ್​ಸೇನ್​ನ ಅಪ್ಪ ಅಂತಾ ತಿಳ್ಕೋಬೇಕು. ಹೆದರಬಾರದು’ ಎಂದರು.

    ನಂತರ ಕಾರ್ಯಕ್ರಮ ಆರಂಭವಾಯಿತು. ಅವರು ನನ್ನ ಎದುರು ಬಂದು ಕೂರಲಿಲ್ಲ. ಬದಲಿಗೆ ಮೈಕ್ ಸೆಟ್​ನವರು ಇರುವ ಕಡೆ ಕುಳಿತು, ಹೆಡ್​ಫೋನ್ ಹಾಕಿಕೊಂಡು ಕೇಳುತ್ತಿದ್ದರು. ಒಂದು ಹಾಡು ಮುಗಿದ ಮೇಲೆ, ಮತ್ತೊಂದು ಹಾಡು ಹಾಡಿ ಎಂದು ಕುಳಿತಲ್ಲಿಂದಲೇ ಸನ್ನೆ ಮಾಡಿದರು. ನನ್ನ ಹಾಡುಗಳನ್ನು ಕೇಳಿ ಖುಷಿ ಪಟ್ಟರು. ‘ನನ್ನ ಘರಾಣೆಯನ್ನು ಮುಂದುವರಿಸಿಕೊಂಡು ಹೋಗ್ರಿ’ ಎಂಬ ಆಶೀರ್ವಾದ ಮಾಡಿದರು. ಈ ಘಟನೆ ಜೀವನದಲ್ಲಿ ಎಂದೂ ಮರೆಯಲಾರದ್ದು. ಅಂದಿನಿಂದ ಅವರು ಭೌತಿಕವಾಗಿ ನಮ್ಮೊಂದಿಗೆ ಇರುವ ತನಕ ನಾನು ಅವರ ಒಡನಾಟದಲ್ಲಿ ಇದ್ದೆ. ಪುಣೆಗೆ ಹೋದಾಗಲೆಲ್ಲ ಅವರನ್ನು ಭೇಟಿಯಾಗಿ ಬರುತ್ತಿದ್ದೆ.

    ಹೋಲಿಕೆಯೇ ಇಲ್ಲ: ಸಂಗೀತದ ಉತ್ತುಂಗದ ಗಿರಿಯ ಹೊಳೆವ ರತ್ನ ನಮ್ಮ ರಾಜ್ಯದ್ದು, ಅವರು ಕನ್ನಡಿಗರು ಎಂಬುದೇ ನಮ್ಮ ಹೆಮ್ಮೆ. ಸದಾ ದೇವಲೋಕದಲ್ಲಿ ಗಂಧರ್ವರಾಗಿ ದೇವರ ಎದುರು ಹಾಡು ಹೇಳುತ್ತಿದ್ದವರು, ಭೂಲೋಕದ ಸಂಗೀತಪ್ರೀಯರ ಮನಸೂರೆಗೊಳ್ಳಲು ಅವರು ಬಂದಿದ್ದರೋ ಏನೋ?! ಕೋಟಿಗೊಬ್ಬರೂ ಭೀಮಸೇನ್ ಜೋಶಿ. ಅಲ್ಲ…ಶತಮಾನಕ್ಕೆ ಒಬ್ಬರು.. ಉಹುಂ ಅದು ಸರಿಯಾಗಲಿಕ್ಕಿಲ್ಲ. ಅವರಿಗೆ ಯಾರೂ ಸಾಟಿಯೇ ಇಲ್ಲ. ಅವರಿಗೆ ಅವರೊಬ್ಬರೇ ಸಾಟಿ. ಗದಗ ಜಿಲ್ಲೆಯ ರೋಣ ಗ್ರಾಮದಲ್ಲಿ ಹುಟ್ಟಿದ ಭೀಮಸೇನ್ ಜೋಶಿ, ಸಂಗೀತದ ಹುಚ್ಚಿನಿಂದಲೇ ಊರು ಬಿಟ್ಟು ಪಂಡಿತ ಸವಾಯಿ ಗಂಧರ್ವರ ಗರಡಿ ಸೇರಿದರು. ಅವರ ಮನೆಯಲ್ಲಿ ಉಳಿದು ಗುರುಸೇವೆ ಮಾಡುತ್ತ ಸಂಗೀತ ಕಲಿತರು. ನಿತ್ಯ ಗುರುಗಳ ಮನೆಗೆಲಸ, ದೂರದ ಬಾವಿಯಿಂದ ನೀರು ಹೊತ್ತು ತಂದು ಮನಃಪೂರ್ವಕವಾಗಿ ಸೇವೆ ಸಲ್ಲಿಸುತ್ತ ಸಂಗೀತ ಕಲಿತರು. ನಿತ್ಯ ಇಪ್ಪತ್ತು ತಾಸು ಅಭ್ಯಾಸ ಮಾಡುತ್ತ ಇದ್ದರು. ಶರೀರ ಮತ್ತು ಶಾರೀರದಲ್ಲಿ ಭೀಮಸೇನ್​ನಾಗಿ ಪ್ರಕಾಶಿಸಿದವರು.

    ನನಗೆ ಅವರು ದ್ರೋಣಾಚಾರ್ಯ: ಚಿಕ್ಕಂದಿನಿಂದಲೂ ಭೀಮಸೇನ್ ಜೋಶಿ ಹಾಡು ಕೇಳಿ ಪ್ರಭಾವಕ್ಕೆ ಒಳಗಾಗಿದ್ದೆ. ಅವರ ಹಾಡು ರೇಡಿಯೋದಲ್ಲಿ ಕೇಳುತ್ತ ಬೆಳೆದು ಬಂದವ. ‘ತುಂಗಾ ತೀರದಿ…’ ‘ಲಕ್ಷ್ಮೀ ಬಾರಮ್ಮಾ…’ ಹಾಡುಗಳನ್ನು ಅವರಂತೆಯೇ ಹಾಡಲು ಯತ್ನಿಸುತ್ತಿದ್ದೆ. ಇದನ್ನು ಗಮನಿಸಿದ ನನ್ನ ಅಮ್ಮ ಸಂಗೀತ ಕಲಿಯಲು ಸೇರಿಸಿದರು. ಪಂಡಿತ್ ಅರ್ಜುನ್ ನಾಕೋಡ ನನ್ನ ಮೊದಲ ಗುರುಗಳು. ಅವರ ಹತ್ತಿರ ಗ್ವಾಲಿಯರ್ ಘರಾಣಾ ಅಭ್ಯಾಸ ಮಾಡಿದೆ. ನಂತರ ಪಂಡಿತ್ ಶ್ರೀಪತಿ ಪಾಡಿಗಾರ್ ಹತ್ತಿರ ಅಭ್ಯಾಸ ಆರಂಭಿಸಿದೆ. ನನ್ನ ಗುರುಗಳು ಭೀಮಸೇನ್ ಜೋಶಿಯವರ ನೇರ ಶಿಷ್ಯರು. ಅವರ ಸೇವೆಯನ್ನು ಮಾಡುತ್ತ ಸಂಗೀತ ಕಲಿತವರು. ಈ ಮೂಲಕ ನಾನೂ ಭೀಮಸೇನ್ ಜೋಶಿ ಶಿಷ್ಯನ ಹಾಗೇ. ಅಲ್ಲದೆ, ಅವರ ಪ್ರಭಾವ ನನ್ನ ಮೇಲೆ ಸದಾ ಇದ್ದು, ಅವರ ಶೈಲಿಯ ಅನುಸರಣೆ ಮಾಡುತ್ತ ಒಂದು ರೀತಿಯಲ್ಲಿ ಏಕಲವ್ಯನ ತರಹ ಕಲಿತೆ. ಭೀಮಸೇನ್ ಜೋಶಿ ನನಗೆ ದ್ರೋಣಾಚಾರ್ಯರು! ನಮ್ಮ ಮನೆಯಲ್ಲಿ ಸರಸ್ವತಿ ಪೂಜೆ ಮಾಡುವಾಗ, ಸರಸ್ವತಿ ಫೋಟೋ ಪಕ್ಕ ಅವರ ಭಾವಚಿತ್ರ ಇಟ್ಟು ಪೂಜಿಸುತ್ತ ಇದ್ದೆ.

    ವ್ಹಾ ಎಂದ ಕ್ಷಣ ಸಾರ್ಥಕ: ಭೀಮಸೇನ್ ಜೋಶಿ ಅವರಿಗೆ ಅನಾರೋಗ್ಯ. ಅವರನ್ನು ನೋಡಲಿಕ್ಕೆ ಹೋಗಿದ್ದೆ. ಅವರ ಪಕ್ಕದಲ್ಲಿಯೇ ಅವರ ಮಗ ಸಂಗೀತಾಭ್ಯಾಸ ಮಾಡುತ್ತಿದ್ದರು. ಅವರು ನನ್ನ ಹತ್ತಿರ ‘ಜಮುನಾ ಕೇ ತೀರ’ ಹಾಡು ಬರುತ್ತದೆಯೇ ಕೇಳಿದರು. ‘ಹೌದು’ ಎಂದೆ, ಹಾಡಿದೆ. ಮಲಗಿದ್ದ ಅವರು ಎದ್ದು ಕುಳಿತು ‘ವ್ಹಾ’ ಎಂದರು. ಇಂತಹ ಸಂದರ್ಭ ಯಾರಿಗೆ ಸಿಗಲು ಸಾಧ್ಯ? ‘ಇದು ಭಾಗ್ಯ..ಇದು ಭಾಗ್ಯ..ಇದು ಭಾಗ್ಯವಯ್ಯ’ ಎಂಬಂತೆ ನನಗೆ ದೊರೆಯಿತು.

    ಕಾಯ ಅಳಿದರೂ ಕೀರ್ತಿ ಉಳಿಯುವುದು: ಭೀಮಸೇನ್ ಜೋಶಿ ನಮ್ಮೊಂದಿಗೆ ಇಲ್ಲ. ಇದ್ದಿದ್ದರೆ ಅವರು ನೂರನೇ ವರ್ಷ (ಜನನ: 1922 ಫೆಬ್ರವರಿ 4)ಕ್ಕೆ ಪದಾರ್ಪಣೆ ಮಾಡುತ್ತಿದ್ದರು. ಅವರು ಭೌತಿಕವಾಗಿ ನಮ್ಮೊಡನೆ ಇಲ್ಲ. ಆದರೆ, ಸಮ್ಮೋಹನ ಮಾಡುವ ಅವರ ಹಾಡುಗಾರಿಕೆ, ಅದರಲ್ಲಿನ ತಲ್ಲೀನತೆ, ಜನರಿಗೆ ಸಂಗೀತವನ್ನು ತಲುಪಿಸಬೇಕೆನ್ನುವ ಪ್ರಾಮಾಣಿಕತೆ ನಮಗೆಲ್ಲ ಮಾದರಿ. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಹಾಗೇ ಹೇಳಲಿಕ್ಕೆ ನಾವೂ ಕಡಿಮೆ. ಅಂದರೆ ದೊಡ್ಡ ವೃಕ್ಷದ ಕೊಂಬೆಯ ತುದಿಯಲ್ಲಿರುವ ಚಿಕ್ಕ ತಪ್ಪಲು. ಸಂಗೀತ ಮಹಾಗುರುಗಳು, ಭಾರತರತ್ನ ಭೀಮಸೇನ್ ಜೋಶಿ ಅವರಿಗೆ ಶಿರಸಾಷ್ಟಾಂಗ ಪ್ರಣಾಮ ಅರ್ಪಿಸುವುದು ನನ್ನಂಥವರ ಕರ್ತವ್ಯ.

    ನಿತ್ಯ ದೇಗುಲದಲ್ಲಿ ಮೊಳಗುವ ಕಂಠ: ನಾಲ್ಕಾರು ದಶಕಗಳ ಹಿಂದೆ ಹಾಡಿದ ‘ಭಾಗ್ಯದಾ ಲಕ್ಷ್ಮೀ ಬಾರಮ್ಮಾ’ ಹಾಡು ಇಂದಿಗೂ ಅನೇಕ ದೇವಾಲಯದಲ್ಲಿ ಆಡಿಯೋ ಹಾಕಿರುತ್ತಾರೆ. ಅವರು ಹಾಡಿದ ನಂತರ ಅದೆಷ್ಟೋ ಸಂಗೀತಗಾರರು ಅದೇ ಹಾಡನ್ನು ಹಾಡಿದರು. ಆಡಿಯೋ, ಸೀಡಿ ಎಲ್ಲವೂ ಬಂದವು. ಆದರೆ, ಇನ್ನು ಅವರ ಹಾಡೇ ಮೊಳಗುತ್ತದೆಯೆಂದರೆ ಅವರ ಕಂಠದ ತಾಕತ್ತು ಹೇಗಿದೆ ಎನ್ನುವುದನ್ನು ಕಲ್ಪಿಸಿಕೊಳ್ಳಿ. ತಮ್ಮದೇ ಆದ ಶೈಲಿ ಬೆಳೆಸಿಕೊಂಡ ಕಲಾವಿದರು ಅವರು. ಸಾಕಷ್ಟು ಬಾರಿ ಅವರೇ ಹೇಳಿಕೊಂಡಿದ್ದಾರೆ. ಗುರುಗಳ ಆಶೀರ್ವಾದ, ರಾಯರ ಆಶೀರ್ವಾದ ಎಂದು. ಹಾಗಾಗಿಯೇ, ‘ಯಾಕೆ ಮೂಕನಾದ್ಯೊ’, ‘ಎನ್ನ ಪಾಲಿಸೋ ಕರುಣಾಕರ’, ‘ತುಂಗಾ ತೀರದಿ ನಿಂತ ಸುಯತಿವರ’ ಎಂಬ ಹಾಡುಗಳು ಇನ್ನೂ ನಿತ್ಯ ಕೇಳುತ್ತಲೇ ಇರುತ್ತವೆ. ಪಂಢರಾಪುರದಲ್ಲಿ ‘ತೀರ್ಥ ವಿಠ್ಠಲ ಕ್ಷೇತ್ರ ವಿಠ್ಠಲ’, ‘ಮಾಜೇ ಮಾಹೇರ ಪಂಢರಿ’ ಅಲ್ಲದೆ, ಅದೆಷ್ಟೋ ಹಾಡುಗಳು ಕೇಳುತ್ತಲೇ ಇರುತ್ತವೆ. ಇವೆಲ್ಲ ಒಬ್ಬ ದೈವೀಪುರುಷನಿಗೆ ಮಾತ್ರ ಒಲಿದು ಬರುವ ಭಾಗ್ಯ ಎನ್ನಬಹುದು.

    ಜನಸಾಮಾನ್ಯರಿಗೂ ತಲುಪಿದರು: ಪಂ. ಭೀಮಸೇನ್ ಜೋಶಿ ಜನಸಾಮಾನ್ಯರ ನಡುವೆ ಗುರುತಿಸಿಕೊಂಡರು. ಅವರು ಹಾಡಿದ ಅದೆಷ್ಟೋ ಹಾಡುಗಳನ್ನು ಸಾವಿರಾರು ಜನರು ಗುನುಗುತ್ತಾರೆ. ಅದು ಸಾಮಾನ್ಯದ ಮಾತಲ್ಲ. ಅಲ್ಲದೆ, ಅವರು ಸಿನಿಮಾ ರಂಗದಲ್ಲಿ ಹಾಡಿದ್ದು ವಿಶೇಷ ಸಾಧನೆ. ‘ಸಂಧ್ಯಾರಾಗ’ ಸಿನಿಮಾದ ‘ತೇಲಿಸೋ ಇಲ್ಲ ಮುಳುಗಿಸೋ’, ‘ನಂಬಿದೆ ನಿನ್ನ ನಾದ ದೇವತೆಯೆ’, ‘ಈ ಪರಿಯ ಸೊಬಗು’, ‘ಕನ್ನಡತಿ ತಾಯೇ ಬಾ’ ಈ ಎಲ್ಲ ಹಾಡುಗಳು ಇಂದಿಗೂ ಚಾಲ್ತಿಯಲ್ಲಿವೆ ಅಂದರೆ ಆ ಸ್ವರ, ಅದಕ್ಕೆ ಒಪ್ಪುವ ರಾಗ ಸಂಯೋಜನೆ, ಸಾಹಿತ್ಯ ಎನ್ನಬಹುದು. ಪಂಡಿತ್ ಬಾಲಮುರಳಿ ಕೃಷ್ಣ ಮತ್ತು ಪಂಡಿತ್ ಭೀಮಸೇನ್ ಜೋಶಿ ಒಟ್ಟಿಗೆ ಕೆಲಸ ಮಾಡಿದರು. ನಂತರದ ದಿನಗಳಲ್ಲಿ ಅವರಿಬ್ಬರ ಅದೆಷ್ಟೋ ಕಛೇರಿಗಳು ನಡೆದು ಜನರ ಮನಸ್ಸನ್ನು ಸೂರೆಗೊಂಡವು. ಅವರ ಹಾಡಿನ ಅಭಿಮಾನಿಗಳಾಗಿದ್ದ ಶಂಕರನಾಗ್, ಅನಂತನಾಗ್ ಅವರು ‘ನೋಡಿ ಸ್ವಾಮೀ ನಾವಿರೋದು ಹೀಗೆ’ ಸಿನಿಮಾದಲ್ಲಿ ‘ಲಕ್ಷ್ಮೀ ಬಾರಮ್ಮಾ’ ಹಾಡನ್ನು ಕೊಂಚ ರಾಗ ಬದಲಾವಣೆ ಮಾಡಿ ಹಾಡಿಸಿದರು. ಅದು ಬಹಳ ಹಿಟ್ ಆಯಿತು. ಹಿಂದಿ, ಮರಾಠಿ ಸಿನಿಮಾಗಳಲ್ಲಿ ಹಾಡಿದರು. ಮನ್ನಾಡೇ ಅವರೊಂದಿಗೆ ಹಾಡಿದ ‘ಕೇತಕಿ ಗುಲಾಬ್, ಜುಹಿ ಚಂಪಕ ಬನ ಫೂಲಿ..’ ಹಾಡು ಸೊಗಸಾಗಿದೆ. ಇದು ಭೀಮಸೇನ್ ಅವರಿಗೆ ಖ್ಯಾತಿ ತಂದು ಕೊಟ್ಟಿತು. ಲತಾ ಮಂಗೇಶ್ಕರ್ ಅವರೊಂದಿಗೆ ಹಾಡಿದ ನೂರಾರು ಭಜನೆಗಳು ಮನೆ ಮನೆಯಲ್ಲೂ ಕೇಳಿಸುತ್ತ ಇರುತ್ತವೆೆ. ‘ಬಾಜೆ ಮುರಲಿಯಾ ಬಾಜೇ…’ ಎನ್ನುವ ಹಾಡು ಪ್ರಖ್ಯಾತಿ ಪಡೆಯಿತು. ಸ್ವಾತಂತ್ರ ್ಯ ಬಂದು 50ನೇ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ನಡೆದ ಲೈವ್ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡನ್ನು ಅವರು ಹೇಳಿದ್ದು, ನಾವೆಲ್ಲ ಕೇಳಿದ್ದು ರೋಮಾಂಚಕ ಕ್ಷಣ. ಎಲ್ಲರೊಂದಿಗೂ ಗೌರವದಿಂದ ಬಾಳಿದರು. ನನ್ನಂಥ ಸಣ್ಣ ಹುಡುಗನ ಹತ್ತಿರವೂ ‘ರಿ’ ಹಚ್ಚಿಯೇ ಮಾತನಾಡುತ್ತಿದ್ದರು. ಇದನ್ನು ನನ್ನ ಗುರುಗಳ ಹತ್ತಿರ ಹೇಳಿದೆ. ‘ಅವರು ನನಗೂ ಬಹುವಚನ ಕೊಟ್ಟು ಮಾತನಾಡುತ್ತಾರೆ. ಮನಸ್ಸಿಗೆ ಏನೋ ಕಷ್ಟ ಆಗುತ್ತದೆ’ ಎಂದೆ. ‘ಇಲ್ಲಪ್ಪ, ಅವರು ಎಲ್ಲರ ಜತೆಗೂ ಬಹುವಚನ ಕೊಟ್ಟೆ ಮಾತಾಡ್ತಾರೆ. ಅದು ಅವರ ಶ್ರೇಷ್ಠತೆ’ ಎಂದರು.

    (ನಿರೂಪಣೆ: ನಾಗರಾಜ ಮತ್ತಿಗಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts