More

    ಸಂಗೀತದಿಂದ ಭಗವಂತನ ಒಲುಮೆ ಪ್ರಾಪ್ತಿ

    ಸಾಗರ: ಕನಕದಾಸರು, ಪುರಂದರದಾಸರು ಸೇರಿದಂತೆ ದಾಸವರೇಣ್ಯರು ಭಕ್ತಿ ಪಂಥದ ಮೂಲಕ ಭಗವಂತನ ಒಲುಮೆಯನ್ನು ಸಂಗೀತದ ಮೂಲಕ ಪಡೆದುಕೊಂಡರು. ಸಂಗೀತಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು ಎಂದು ರಂಗಕರ್ಮಿ, ಕಲಾಪೋಷಕ ರವಿಶಂಕರ ಕೋಳಿವಾಡ ಹೇಳಿದರು.

    ನಗರದಲ್ಲಿ ಶ್ರೀ ಗಾಂಧಾರ ಸಂಗೀತ ಸಭಾ ಟ್ರಸ್ಟ್ ಆಯೋಜಿಸಿರುವ ಎರಡು ದಿನಗಳ ಶ್ರೀ ಪುರಂದರದಾಸ ಹಾಗೂ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ ಮತ್ತು ಶಾಲೆಯ ವಾರ್ಷಿಕೋತ್ಸವವನ್ನು ಮೃದಂಗ ನುಡಿಸುವ ಮೂಲಕ ಶನಿವಾರ ಉದ್ಘಾಟಿಸಿ ಮಾತನಾಡಿದರು.
    ದಾಸರು ಹರಿ ಕುಣಿದ ನಮ್ಮ ಹರಿ ಕುಣಿದ ಎನ್ನುತ್ತಾರೆ. ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ ಎಂದು ದೇವರ ಮೇಲೆ ತಮಗಿರುವ ಅಚಲ ನಂಬಿಕೆ ಮತ್ತು ವಿಶ್ವಾಸವನ್ನೂ ಪರಿಚಯಿಸುತ್ತಾರೆ. ಸಂಗೀತ ಕೇವಲ ಆನಂದಕ್ಕೆ ಮಾತ್ರವಲ್ಲ, ಅದು ಸಂಸ್ಕಾರವನ್ನೂ ನೀಡುತ್ತದೆ ಎಂದರು.
    ದಾಸರ ಕೀರ್ತನೆಗಳು ಕರ್ನಾಟಕ ಸಂಗೀತದ ಮೂಲಕ ಜನಮನವನ್ನು ತಲುಪುತ್ತಿದೆ. ಭಕ್ತಿಯ ಮಹತ್ವ, ಆಡಂಬರವಿಲ್ಲದ ನಿರ್ಮಲವಾದ ಚಿಂತನೆ, ಸಮಾಜದ ಅಂಕುಡೊಂಕು ಎಲ್ಲವನ್ನು ಭಕ್ತಿಪಂಥ ಸಂಗೀತದ ಮೂಲಕ ಅನಾವರಣಗೊಳಿಸಿದೆ. ಸಾಗರದಲ್ಲಿ ಗಾಂಧಾರ ಸಂಗೀತ ಸಭಾ ಟ್ರಸ್ಟ್ ಕರ್ನಾಟಕ ಸಂಗೀತವನ್ನು ಮಕ್ಕಳಿಗೆ ಪರಿಚಯಿಸುವಲ್ಲಿ ತುಂಬಾ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
    ವಿದುಷಿ ಅನಿತಾ ವೆಂಕಟೇಶ್ ಮಾತನಾಡಿ, ಕಲಿತ ವಿದ್ಯೆಯನ್ನು ಗುರುಗಳು ಶಿಷ್ಯರಿಗೆ ಲೋಪವಿಲ್ಲದೇ ಪ್ರಾಮಾಣಿಕವಾಗಿ ತಲುಪಿಸಬೇಕು, ಆಗ ಮಾತ್ರ ಸಾರ್ಥಕತೆಯನ್ನು ಕಾಣಲು ಸಾಧ್ಯ. ಮನುಷ್ಯನಾಗಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸಬೇಕು. ಏಕಾಗ್ರತೆ, ಆಧ್ಯಾತ್ಮ ಚಿಂತನೆ, ಸಂಸ್ಕೃತಿ, ಸಂಸ್ಕಾರಕ್ಕೆ ಸಂಗೀತ ನೀಡುವ ಶಕ್ತಿ ಇನ್ಯಾವ ಕ್ಷೇತ್ರಗಳಿಂದಲೂ ನೀಡಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳಿಗೆ ಚಿಕ್ಕಂದಿನಿಂದಲ್ಲೇ ಸಂಗೀತದ ಅಭ್ಯಾಸ ಮಾಡಿಸಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಹಿರಿಯ ಕಲಾವಿದರು ಮತ್ತು ಕಲಿಕೆಯಲ್ಲಿರುವ ಕಲಾವಿದರು ಮುಖಾಮುಖಿಯಾಗಿ ಕಲಾ ವಿನಿಮಯ ಮಾಡಿಕೊಳ್ಳುವ ಚಿಂತನ-ಮಂಥನಗಳ ಮೂಲಕ ಕಲಿತುಕೊಳ್ಳಲು ಸಹಕಾರಿಯಾಗಲಿದೆ ಎಂದರು.
    ಹಿರಿಯ ಸಂಗೀತ ಕಲಾವಿದೆ ಎಸ್.ಕೆ.ಪ್ರಭಾವತಿ, ಟ್ರಸ್ಟ್‌ನ ಕೃಷ್ಣಮೂರ್ತಿ, ವೆಂಕಟೇಶ್, ವಿದ್ವಾನ್ ರಾಜೀವ್ ಮತ್ತೂರು ಇತರರಿದ್ದರು. ನಂತರ ವಿದ್ವಾನ್ ಕೆ.ಎಸ್.ಶ್ರೀವತ್ಸ ಭಾರಧ್ವಾಜ್ ಅವರಿಂದ ವೇಣು ವಾದನ ಆಯೋಜಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts