More

    ಗಂಗಜ್ಜಿ ಗುರುಕುಲ ನಿರ್ವಹಣೆಗೆ ಸರಕಾರದಲ್ಲಿ ಹಣವಿಲ್ಲವೇ ?

    ಹುಬ್ಬಳ್ಳಿ : ದೇಶದ ಸುಪ್ರಸಿದ್ಧ ಹಿಂದುಸ್ತಾನಿ ಗಾಯಕಿ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಅವರ ಸ್ಮರಣೆಯಲ್ಲಿ ಕಳೆದ 14 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಸ್ಥಾಪಿತವಾಗಿ ಕಾರ್ಯನಿರ್ವಹಿಸುತ್ತಿರುವ ಸಂಗೀತ ವಿದ್ಯಾಲಯವನ್ನು ಕಾಂಗ್ರೆಸ್ ಸರ್ಕಾರ ಉನ್ನತ ಶಿಕ್ಷಣ ಇಲಾಖೆಗೆ ಒಳಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಹೇಳಿದ್ದಾರೆ.

    ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಪ್ರಲ್ಹಾದ ಜೋಶಿ, ಹುಬ್ಬಳ್ಳಿ-ಧಾರವಾಡ ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರದ ತವರು. ಹಲವಾರು ಸಂಗೀತ ದಿಗ್ಗಜರಿಗೆ ಜನ್ಮ ನೀಡಿದ ಸ್ಥಳ ಎಂದು ತಿಳಿಸಿದ್ದಾರೆ.

    ಭಾರತ ರತ್ನ ಪಂ. ಭೀಮಸೇನ್ ಜೋಶಿ, ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್, ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ, ಪದ್ಮಭೂಷಣ ಡಾ. ಬಸವರಾಜ ರಾಜಗುರು ಅವರಂತಹ ಅಪ್ರತಿಮ ಸಂಗೀತ ರತ್ನಗಳು ಮಿಂಚಿದ ಈ ಪ್ರದೇಶದಲ್ಲಿಯೇ ಸಾರ್ಥಕ ರೀತಿಯಲ್ಲಿ ಈ ಗುರುಕುಲ ದೇಶದ ಮೂಲೆ ಮೂಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ಸುಪ್ರಸಿದ್ಧ ಹಿರಿಯ ಸಂಗೀತ ವಿದ್ವಾಂಸರುಗಳ ಮುಖೇನ ಶಿಕ್ಷಣ ನೀಡುತ್ತಾ ಬಂದಿದೆ. ಇಲ್ಲಿನ ಅನೇಕ ವಿದ್ಯಾರ್ಥಿಗಳು ಉತ್ತಮ ಸಂಗೀತಗಾರರಾಗಿ ಹೊರಹೊಮ್ಮುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಕಳೆದ ಸುಮಾರು 8-10 ತಿಂಗಳುಗಳಿಂದ ಈ ಗುರುಕುಲ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿ, ಅಲ್ಲಿನ ಸಂಗೀತ ಶಿಕ್ಷಕರು ಹಾಗೂ ಸಿಬ್ಬಂದಿಯು ವೇತನ ಹಾಗೂ ಇತರ ಸೌಲಭ್ಯಗಳಿಗೂ ಪರದಾಡುವ ಪರಿಸ್ಥಿತಿ ನಿರ್ವಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಭಾಗದ ಶಾಸಕರು ಅಧಿವೇಶನದ ಸಂದರ್ಭದಲ್ಲಿ ಈ ವಿಷಯವನ್ನು ಸರ್ಕಾರದ ಗಮನಕ್ಕೂ ತಂದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಈ ಗುರುಕುಲಕ್ಕೆ ಪ್ರತಿ ವರ್ಷ ಅಗತ್ಯ ಇರುವ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ, ಪರಿಸ್ಥಿತಿ ಸುಧಾರಿಸುವ ಬದಲಾಗಿ ಇದನ್ನು ಉನ್ನತ ಶಿಕ್ಷಣ ಇಲಾಖೆಗೆ ಒಳಪಡಿಸಿ ಮೈಸೂರು ಸಂಗೀತ ವಿಶ್ವವಿದ್ಯಾಲಯಕ್ಕೆ ಸೇರಿಸುವ ಕ್ರಮ ಸರಿಯಲ್ಲ ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ ಸರ್ಕಾರ ಇಂತಹ ಒಂದು ಮಾದರಿ ಸಂಸ್ಥೆಯನ್ನು ಹೇಗೆ ಅಸಡ್ಡೆಯಿಂದ ನಡೆಸಿಕೊಂಡಿದೆ ಎಂಬುದಕ್ಕೆ ಇದು ಸಾಕ್ಷಿ. ಈ ಕ್ರಮ ಖಂಡನೀಯ ಎಂದಿದ್ದಾರೆ.

    ಮುಖ್ಯಮಂತ್ರಿ ಅವರಿಗೆ ಸಂಗೀತ ಗುರುಕುಲದ ಬಗ್ಗೆ ಹಾಗೂ ಈ ಭಾಗದ ಕಲೆ, ಸಂಸ್ಕೃತಿ ಬಗ್ಗೆ ನಿಜವಾದ ಕಳಕಳಿ ಇದ್ದರೆ ಈ ಸಂಸ್ಥೆಯನ್ನು ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡಿಸದೇ ಕೂಡಲೇ ಈ ಸಂಸ್ಥೆಯ ಸಂಗೀತ ವಿದ್ವಾಂಸರು ಹಾಗೂ ಇಲ್ಲಿ ಸಂಗೀತಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಹಿತದ ದೃಷ್ಟಿಯಿಂದ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ಇಲ್ಲದಿದ್ದರೆ ನಾಡಿನ ಜನ ಈಗಾಗಲೇ ಹೇಳುತ್ತಿರುವಂತೆ ಕಾಂಗ್ರೆಸ್ ಸರ್ಕಾರದ ಖಜಾನೆ ದಿವಾಳಿ ಹಂತಕ್ಕೆ ಬಂದಿದೆಯೆಂಬುದನ್ನು ಸ್ವತಃ ಮುಖ್ಯಮಂತ್ರಿ ಅವರೇ ಸಾಬೀತು ಮಾಡಿದಂತಾಗುತ್ತದೆ. ಇಂತಹ ಪ್ರತಿಷ್ಠಿತ ಸಂಸ್ಥೆಗೆ ಅವಶ್ಯವಿರುವ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಲ್ಲಿ ಅಸಮರ್ಥವಾದ ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅದೆಂತಹ ಸರ್ಕಾರವೆಂದು ಕೇಳಬೇಕಾಗುತ್ತದೆ ಎಂದು ಪ್ರಲ್ಹಾದ ಜೋಶಿ ಪತ್ರದಲ್ಲಿ ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts