More

    ಭಟ್ಕಳ ಒಂಚರಂಡಿ ಅವ್ಯವಸ್ಥೆ-ಸಚಿವರಿಂದ ಅಧಿಕಾರಿಗಳ ತರಾಟೆ

    ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ಮತ್ತು ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಇದನ್ನೂ ಕೂಡಲೆ ಸರಿಪಡಿಸಿಕೊಳ್ಳದಿದ್ದರೆ ಮತ್ತೆ ಹೊಸಕಾಮಗಾರಿ ನಡೆಸಲು ಬಿಡುವದಿಲ್ಲ ಎಂದು ಸಚಿವ ಮಂಕಾಳ ವೈದ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
    ಅವರು ಸೋಮವಾರ ಭಟ್ಕಳ ತಾಲೂಕು ಆಡಳಿತ ಸೌಧದದಲ್ಲಿ ಜಿಲ್ಲಾಡಳಿತ ನಗರ ಸ್ಥಳೀಯ ಸಂಸ್ಥೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಒಳಚರಂಡಿ ಯೋಜನೆ ಸಭೆಯ ಅಧ್ಯಕ್ಷತೆ ವಹಿಸಿ ಮತನಾಡಿದರು.
    181 ಕೋಟಿ ರೂಪಾಯಿಗಳ ಒಳಚರಂಡಿ ಕಾಮಗಾರಿ ಸಂಪೂರ್ಣ ವಿಫಲವಾಗಿರುವ ಕುರಿತು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಅಧಿಕಾರಿಗಳ ತಪ್ಪಿನಿಂದ ನಾವು ತಲೆ ತಗ್ಗಿಸುವಂತಾಗಿದೆ. ಈಗಾಗಲೇ ಕಾಮಗಾರಿ ಟೆಂಡರ್ ಆಗಿ 2019ರಲ್ಲಿ ಕಾಮಗಾರಿ ಆರಂಭವಾಗಿ 2022ರಲ್ಲಿ ಪೂರ್ಣಗೊಳ್ಳಬೇಕಿದ್ದರೂ ಸಹ ಇನ್ನೂ ತನಕ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿಲ್ಲ, ಅನೇಕ ಕಡೆಗಳಲ್ಲಿ ರಸ್ತೆ ಅಗೆದು ಹಾಕಿ ವರ್ಷಗಟ್ಟಲೆ ಆದರೂ ರಸ್ತೆ ಸರಿಪಡಿಸಿಲ್ಲ. ಈಗಾಗಲೇ 32.18 ಕೋಟಿ ರೂಪಾಯಿಗಳನ್ನು ಗುತ್ತಿಗೆದಾರರಿಗೆ ನೀಡಲಾಗಿದೆ, ಹೊಸ ಸರ್ಕಾರ ಬಂದ ನಂತರ 10 ಕೋಟಿ ರೂಪಾಯಿ ಪಾವತಿಸಲಾಗಿದೆ. ಅವೈಜ್ಞಾನಿಕ ಕಾಮಗಾರಿಗೆ ಬಿಲ್ ಪಾವತಿಸಿದ್ದಕ್ಕೆ ಕರ್ನಾಟಕ ನಗರ ಯೋಜನೆ ಮತ್ತು ಒಳಚರಂಡಿ ಯೋಜನೆಯ ಇಇ ಶಿವರಾಮ ನಾಯ್ಕ ಇವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

    ಇದನ್ನೂ ಓದಿ: ನವೆಂಬರ್‌ 9 ರವರೆಗೂ ಹವಾಮಾನ ವೈಪರೀತ್ಯ
    ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಟೆಂಡರು ಪಡೆದ ಗುತ್ತಿಗೆದಾರ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಕಾಮಗಾರಿಗೆ ತಕ್ಕಂತೆ ಯಂತ್ರ ಹಾಗೂ ಕಾರ್ಮಿಕರನ್ನು ಗಳನ್ನು ಹೊಂದಿಲ್ಲ. ಇಂತಹ ಗುತ್ತಿಗೆದಾರರಿಗೆ ಅವಧಿ ಮುಗಿದ ಮೇಲೆ ಕೆಲಸ ಮುಂದುವರೆಸಲು ಅವಕಾಶ ನೀಡಬಾರದು ಎಂದು ಪುರಸಭೆ ಸದಸ್ಯರಾದ ಪರ್ವೇಜ ಕಾಶೀಂಜೀ, ಕೈಸರ್, ಇಂಮಸಾದ್ ಹಾಗೂ ರಾಘವೇಂದ್ರ ಶೆಟ್ ಸಚಿವರ ಗಮನಕ್ಕೆ ತಂದರು.

    ಇದಕ್ಕೆ ಪ್ರತಿಕ್ರೀಯೆ ನೀಡಿದ ಜಿಲ್ಲಾ ನಗರಾಭಿವೃದ್ದಿ ಕೋಶದ ಇಇ ಪುರಸಭೆ ವ್ಯಾಪ್ತಿಯಲ್ಲಿ 32 ಪ್ಯಾಕೇಜ್ ನಲ್ಲಿ 9 ಪ್ಯಾಕೇಜ್ ಕಾಮಗಾರಿ ಮುಕ್ತಾಯಗೊಂಡಿದ್ದು, ಇನ್ನೂ 23 ಪ್ಯಾಕೇಜ್ ಕಾಮಗಾರಿ ಬಾಕಿ ಇದೆ ಎಂದರು. ಸಮಸ್ಯೆ ಆಲಿಸಿದ ಸಚಿವರು ಡಿಸೆಂಬರ ಅಂತ್ಯದ ಒಳಗೆ ಎಲ್ಲ ಕಾಮಗಾರಿಗಳನ್ನು ಗುತ್ತಿಗೆದಾರನು ಮುಗಿಸಬೇಕು. ತಪ್ಪಿದಲ್ಲಿ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಹೆದ್ದಾರಿಯಲ್ಲಿ ಬೀದಿದೀಪದ ವ್ಯವಸ್ಥೆ ಇರದ ಕಾರಣ ಪ್ರತಿನಿತ್ಯ ಅಪಘಾತವಾಗುತ್ತಿದ್ದು ಕ್ರಮವಹಿಸುವಂತೆ ಜಾಲಿ ಪಪಂ ಸದಸ್ಯ ಮಿಸ್ಬಾ ಸಚಿವರ ಗಮನಕ್ಕೆ ತಂದರು. ಮಳೆಗಾಲ ಪೂರ್ವದಲ್ಲಿ ಹೆದ್ದಾರಿ ಎರಡು ಕಡೆ ಚರಂಡಿ ನಿರ್ಮಿಸಿ ಮತ್ತೆ ಪ್ರವಾಹ ಸನ್ನಿವೇಶ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಜಾಲಿ ಪಪಂ ಸದಸ್ಯ ಇಮ್ರಾನ್ ಲಂಕಾ ಸಚಿವರ ಗಮನಕ್ಕೆ ತಂದರು.

    ಇದನ್ನೂ ಓದಿ:
    ಬಂದರ ರಸ್ತೆಯಲ್ಲಿ ಗಟಾರ ಹಾಗೂ ಬೀದಿದೀಪ ಅಳವಡಿಸಲು 22 ಲಕ್ಷದ ಅವಶ್ಯಕತೆ ಇದ್ದು, ನಗರೋತ್ಥಾನದಡಿ 10 ಲಕ್ಷ ರೂಪಾಯಿ ಮಾತ್ರ ಮೀಸಲಿರುವುದಾಗಿ ಪುರಸಭೆ ಇಂಜಿನೀಯರ ಅರವಿಂದ ಸಚಿವರ ಗಮನಕ್ಕೆ ತಂದಾಗ ಹೆಚ್ಚುವರಿ ಮೊತ್ತ ನೀಡುವ ಆಶ್ವಾಸನೆ ನೀಡಿದರು. ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನೆಕರ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ಸ್ಟೆಲ್ಲಾ ವರ್ಗಿಸ್‌, ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ ಎಸ್, ಭಟ್ಕಳ ತಹಶೀಲ್ದಾರ ತಿಪ್ಪೆಸ್ವಾಮಿ ಸೇರಿದಂತೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts